ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ರಾಜ್ಯದ ಜನಸಾಮಾನ್ಯರು ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳಿಗೆ ಪರಿಹಾರ, ಕಾಂಗ್ರೆಸ್ ಸರ್ಕಾರ ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಮಾತುಕೊಟ್ಟಿದ್ದ ಹದಿನೈದು ಪ್ರಮುಖ ಹಕ್ಕೊತ್ತಾಯಗಳ ಪರಿಹಾರಕ್ಕಾಗಿ ಆಗ್ರಹಿಸಿ, ಕೇಂದ್ರ ಸರ್ಕಾರದ ನೀತಿಗಳನ್ನು ಧಿಕ್ಕರಿಸಿ ಸಂಯುಕ್ತ ಹೋರಾಟ ಕರ್ನಾಟಕ ಸಮಿತಿಯಿಂದ ನ. 26 ರಂದು ಬೃಹತ್ ಬೆಂಗಳೂರು ಚಲೋ ಹಮ್ಮಿ ಕೊಳ್ಳಲಾಗಿದೆ ಎಂದು ಭೂಮಿ, ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಕಾರ್ಯದರ್ಶಿ ಶ್ರೀರಂಗಾಚಾರಿ ತಿಳಿಸಿದರು.ನಗರದ ಜಿಲ್ಲಾ ಕಾರ್ಯನಿರತ ಭವನದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರ ಸರ್ಕಾರ ರೈತರು, ಕಾರ್ಮಿಕರು ಹಾಗೂ ಇತರೆ ಜನವರ್ಗಗಳ ಹಿತಾಸಕ್ತಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ. ಖಾಸಗಿ ಕಂಪನಿಗಳ ಹಿತ ಕಾಯುವುದರಲ್ಲಿ ಮಗ್ನವಾಗಿದೆ. ಅದು ತರುತ್ತಿರುವ ನೀತಿಗಳ ಪರಿಣಾಮವಾಗಿ ಜನರು ತೀವ್ರ ಸಂಕಷ್ಟದ ಸುಳಿಯಲ್ಲಿ ಸಿಲುಕಿದ್ದಾರೆ. ಈ ಕಾರಣಕ್ಕಾಗಿಯೇ ಜನ ರಾಜ್ಯದಲ್ಲಿ ಬಿಜೆಪಿಯ ಬದಲು ಕಾಂಗ್ರೆಸ್ಸನ್ನು ಅಧಿಕಾರಕ್ಕೆ ತಂದಿದ್ದಾರೆ. ಬಿಜೆಪಿ ತಂದಿದ್ದ ರೈತ ವಿರೋಧಿ, ಕಾರ್ಮಿಕ ವಿರೋಧಿ, ಜನ ವಿರೋಧಿ ನೀತಿಗಳನ್ನು ಬದಲಾಯಿಸುತ್ತೇವೆ , ಜನಹಿತ ರಕ್ಷಿಸುತ್ತೇವೆ ಎಂದು ಅಧಿಕಾರಕ್ಕೇರಿದ್ದ ಕಾಂಗ್ರೆಸ್ ಸರ್ಕಾರ ಈ ಏನು ಮಾಡುತ್ತಿದೆ? ಬರಿ ಆಶ್ವಾಸನೆ ನೀಡುತ್ತಾ ಕಾಲ ಕಳೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಂಕಷ್ಟ ನಿವಾರಣೆಯ ಕ್ರಮಗಳಿಗೆ ರಾಜ್ಯ ಸರ್ಕಾರ ಕೂಡಲೇ ಮುಂದಾಗಲೇಬೇಕು. ನವೆಂಬರ್ 26ರಂದು ಸಂಬಂಧಪಟ್ಟ ಸಚಿವರು ತಮ್ಮ ಸ್ಪಷ್ಟ ತೀರ್ಮಾನ ಘೋಷಿಸಬೇಕು. ಸಂವಿಧಾನ ದಿನವಾದ ನವೆಂಬರ್ 26ರಂದು ಜನರ ಹಕ್ಕುಗಳ ಕುರಿತು ಖಚಿತ ನಿರ್ಣಯಗಳಾಗುವ ದಿನವಾಗಬೇಕು. ನಿರ್ಲಕ್ಷಿಸಿದಲ್ಲಿ ಫ್ರೀಡಂ ಪಾರ್ಕಿನಲ್ಲೇ ಅಹೋರಾತ್ರಿ ಸತ್ಯಾಗ್ರಹ ತೀರ್ಮಾನವನ್ನು 15ಕ್ಕೂ ಹೆಚ್ಚು ಜನಪರ ಸಂಘಟನೆಗಳ ಒಕ್ಕೂಟವಾದ ಸಂಯುಕ್ತ ಹೋರಾಟ ಕರ್ನಾಟಕ ಸಮಿತಿಯಿಂದ ತೆಗೆದುಕೊಳ್ಳಲಾಗುವುದು ಎಂದರು.ಜನರು ಪರಿತಪಿಸುತ್ತಿರುವ ಪ್ರಮುಖ ಸಮಸ್ಯೆಗಳನ್ನು ಸರ್ಕಾರದ ಮುಂದಿಡುತ್ತಿದ್ದೇವೆ. ಇವುಗಳನ್ನು ಬಗೆಹರಿಸಲು ಇರುವ ದಾರಿಗಳ ಕುರಿತೂ ನಮಗೆ ನಿರ್ದಿಷ್ಟ ಪ್ರಸ್ತಾಪಗಳಿವೆ. ಈ ಕೆಳಕಂಡ ವಿಚಾರಗಳಿಗೆ ಸಾಧ್ಯವಿರುವ ತಂತ್ರ ಪರಿಹಾರಗಳ ಕುರಿತು ಚರ್ಚಿಸಲು ಕೂಡಲೇ ಸಮಾಲೋಚನಾ ಸಭೆಗಳನ್ನು ಕರೆಯಬೇಕೆಂದು ಮುಖ್ಯಮಂತ್ರಿಗಳಲ್ಲೂ, ಸಂಬಂಧಪಟ್ಟ ಸಚಿವರುಗಳಲ್ಲಿಯೂ ನಾವು ಮನವಿ ಮಾಡಿಕೊಳ್ಳುತ್ತಿದ್ದೇವೆ. ರಾಜ್ಯದ ವಿವಿಧ ಜನವರ್ಗಗಳ ಉಸಿರು ಕಟ್ಟಿಸುತ್ತಿರುವ ಸಮಸ್ಯೆಗಳಾದ ಬಲವಂತದ ಭೂಸ್ವಾಧೀನಗಳನ್ನು ಕೈಬಿಡಬೇಕು. ಉಳುಮೆ ಮಾಡುತ್ತಿರುವ, ಅರ್ಜಿ ಸಲ್ಲಿಸಿರುವ ಹಾಗೂ ಬೇರೆ ಭೂಮಿ ಇಲ್ಲದ ಬಗರ್ ಹುಕುಂ ರೈತರಿಗೆ ‘ಒನ್ ಟೈಂ ಸೆಟಲ್ಮೆಂಟ್’ ಆಧಾರದಲ್ಲಿ ಭೂಮಿ ಮಂಜೂರು ಮಾಡುವ ಗಟ್ಟಿ ತೀರ್ಮಾನ ಸರ್ಕಾರ ಮಾಡಬೇಕು. ಅರಣ್ಯವಾಸಿಗಳನ್ನು ಆತಂತ್ರ ಸ್ಥಿತಿಯಿಂದ ಪಾರು ಮಾಡಲು ಮುಂದಾಗಬೇಕು. ಅರಣ್ಯ ಹಕ್ಕು ಕಾಯ್ದೆ 2006ರ ಪ್ರಕಾರ ಆದಿವಾಸಿಗಳಿಗೆ ಮಾತ್ರವಲ್ಲದೆ, ಎಲ್ಲಾ ಆರಣ್ಯವಾಸಿಗಳಿಗೂ ಭೂಮಿ ಹಕ್ಕು ನೀಡಬೇಕು.ಭೂಮಿಗಳ ಖಾತೆಗಳನ್ನು ಯಾವುದೇ ಕಾರಣಕ್ಕೂ ರದ್ದುಪಡಿಸಬಾರದು. ವಸತಿ ನಿವೇಶನಗಳ ಹಂಚಿಕೆಗೆ ಸರ್ಕಾರ ಮೆಗಾ ಯೋಜನೆ ರೂಪಿಸಬೇಕು, ‘ಪ್ರತಿಯೊಬ್ಬರಿಗೂ ಸೂರು’ ಸರ್ಕಾರದ ಕಾರ್ಯನೀತಿಯಾಗಬೇಕು. ರೈತರ ಬೆಳೆಗಳಿಗೆ ಬೆಂಬಲ ಬೆಲೆ ಪರಿಷ್ಕರಿಸಬೇಕು, ಕಬ್ಬಿನ ಬೆಲೆಯಲ್ಲಿ ಆಗುತ್ತಿರುವ ಅನ್ಯಾಯವನ್ನು ತಡೆಯಲು ರಾಜ್ಯ ಬೆಲೆ ನಿಗದಿ ನೀತಿಯನ್ನು ರೂಪಿಸಬೇಕು. ಸ್ವಾಮಿನಾಥನ್ ವರದಿ ಜಾರಿ ಮಾಡುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಬೇಕು. ಮೈಕ್ರೋಫೈನಾನ್ಸ್ ಹಾವಳಿಯಿಂದ ಜನಸಾಮಾನ್ಯರಿಗೆ ಮುಕ್ತಿ ದೊರಕುವುದು ಸೇರಿ ನಮ್ಮ ಎಲ್ಲಾ ಹದಿನೈದು ಬೇಡಿಕೆಗಳನ್ನು ಈಡೇರಿಸಲು ಕ್ರಮಹಿಸಬೇಕೆಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ವಿವಿಧ ಸಂಘಟನೆಗಳ ಮುಖಂಡರಾದ ರಮೇಶ್ ಸಂಕ್ರಾಂತಿ, ನರಸಿಂಹಪ್ಪ, ಆಂಜಿನಪ್ಪ, ಬಿ.ಎಚ್.ನರಸಿಂಹಯ್ಯ, ಪರಮೇಶ್, ಚನ್ನರಾಯಪ್ಪ, ಸೋಮಯ್ಯ, ನಾರಾಯಣಮ್ಮ, ಜೀವಿಕ ನಾರಾಯಣಸ್ವಾಮಿ, ಸತೀಶ್, ಮತ್ತಿತರರು ಇದ್ದರು.