ಸಣಾಪುರ ಘಟನೆ; ಹಂಪಿ ಹೋಳಿ ಸಂಭ್ರಮದ ಮೇಲೂ ಕರಿನೆರಳು

KannadaprabhaNewsNetwork |  
Published : Mar 13, 2025, 12:48 AM IST
12ಎಚ್‌ಪಿಟಿ1- ಹಂಪಿಯ ಶ್ರೀವಿರೂಪಾಕ್ಷೇಶ್ವರ ರಥಬೀದಿಯ ಒಂದು ನೋಟ. (ಚಿತ್ರ- ಸುರೇಶ್‌ ಎಲ್‌.) | Kannada Prabha

ಸಾರಾಂಶ

ಕೊಪ್ಪಳದ ಸಾಣಾಪುರದ ಲೈಂಗಿಕ ದೌರ್ಜನ್ಯದ ಕರಿ ಛಾಯೆ ಹಂಪಿ ಹೋಳಿ ಸಂಭ್ರಮದ ಮೇಲೂ ಬಿದ್ದಿದೆ. ವಿಶ್ವ ವಿಖ್ಯಾತ ಹಂಪಿಯಲ್ಲಿ ದೇಶ, ವಿದೇಶಿ ಪ್ರವಾಸಿಗರು ಒಂದೇಡೆ ಸೇರಿ ರಂಗಿನಾಟವನ್ನಾಡುತ್ತಿದ್ದರು. ಈ ಬಾರಿ ಹಂಪಿ ಹೋಳಿ ಆಚರಣೆ ಇದ್ದರೂ ಸ್ಥಳೀಯರಲ್ಲಿ ಸಂಭ್ರಮ ಮಾಯವಾಗಿದೆ.

ಗಂಟುಮೂಟೆ ಕಟ್ಟುತ್ತಿರುವ ಪ್ರವಾಸಿಗರು/ ಪ್ರವಾಸೋದ್ಯಮಕ್ಕೆ ಪೆಟ್ಟುಕೃಷ್ಣ ಲಮಾಣಿ

ಕನ್ನಡಪ್ರಭ ವಾರ್ತೆ ಹೊಸಪೇಟೆ

ಕೊಪ್ಪಳದ ಸಾಣಾಪುರದ ಲೈಂಗಿಕ ದೌರ್ಜನ್ಯದ ಕರಿ ಛಾಯೆ ಹಂಪಿ ಹೋಳಿ ಸಂಭ್ರಮದ ಮೇಲೂ ಬಿದ್ದಿದೆ. ವಿಶ್ವ ವಿಖ್ಯಾತ ಹಂಪಿಯಲ್ಲಿ ದೇಶ, ವಿದೇಶಿ ಪ್ರವಾಸಿಗರು ಒಂದೇಡೆ ಸೇರಿ ರಂಗಿನಾಟವನ್ನಾಡುತ್ತಿದ್ದರು. ಈ ಬಾರಿ ಹಂಪಿ ಹೋಳಿ ಆಚರಣೆ ಇದ್ದರೂ ಸ್ಥಳೀಯರಲ್ಲಿ ಸಂಭ್ರಮ ಮಾಯವಾಗಿದೆ.

ಹಂಪಿಯ ಶ್ರೀವಿರೂಪಾಕ್ಷೇಶ್ವರ ದೇವಾಲಯದ ರಥಬೀದಿಯಲ್ಲಿ ರಾತ್ರಿ ಕಾಮದಹನ ಮಾಡಿ, ಮಾರನೇ ದಿನ ಬೆಳ್ಳಂಬೆಳ್ಳಗ್ಗೆ ತಮಟೆ ನಾದಕ್ಕೆ ದೇಶ, ವಿದೇಶಿ ಪ್ರವಾಸಿಗರು ಪರಸ್ಪರ ಬಣ್ಣ ಎರಚಿಕೊಂಡು ಕುಣಿದು ಕುಪ್ಪಳಿಸುತ್ತಿದ್ದರು. ಆದರೆ, ಈಗ ಆನೆಗೊಂದಿ ಸಾಣಾಪುರ ಪ್ರದೇಶದಲ್ಲಿ ರೆಸಾರ್ಟ್‌ ಮಾಲಕಿ ಮತ್ತು ವಿದೇಶಿ ಮಹಿಳೆ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣ ಹಾಗೂ ಒಡಿಸ್ಸಾ ಮೂಲದ ಪ್ರವಾಸಿಗನ ಹತ್ಯೆ ಪ್ರಕರಣ ಹಂಪಿ ಪ್ರವಾಸೋದ್ಯಮದ ಮೇಲೆ ಭಾರೀ ಎಫೆಕ್ಟ್‌ ಬಿದ್ದಿದೆ. ಈ ಭಾಗದಲ್ಲಿ ಕರಾಳ ಛಾಯೆ ಆವರಿಸಿದ್ದು, ಹೋಳಿ ಹಬ್ಬದ ಸಂಭ್ರಮ ಮರೆಮಾಚಿದೆ.

ಈ ಮೊದಲು ದೇಶ, ವಿದೇಶಿ ಪ್ರವಾಸಿಗರು ಹೋಳಿ ಹಬ್ಬದ ಸಂಭ್ರಮಕ್ಕಾಗಿಯೇ ಗೋವಾ, ಕೇರಳ, ಉತ್ತರ ಭಾರತ, ಬೆಂಗಳೂರಿನಿಂದ ಆಗಮಿಸುತ್ತಿದ್ದರು. ಈಗ ಪ್ರಕರಣದಿಂದ ಹೋಂ ಸ್ಟೇ, ರೆಸಾರ್ಟ್‌, ಹೋಟೆಲ್‌ಗಳಲ್ಲಿರುವ ಪ್ರವಾಸಿಗರು ಗಂಟುಮೂಟೆ ಕಟ್ಟುತ್ತಿದ್ದಾರೆ. ಇನ್ನು ಸ್ಥಳೀಯರು ಕೂಡ ಈ ಪ್ರಕರಣದಿಂದ ಘಾಸಿಗೊಂಡಿದ್ದಾರೆ. ಪ್ರವಾಸಿಗರಿಗೆ ಆತಿಥ್ಯ ನೀಡುತ್ತಿದ್ದವರು, ಈ ಕಥನ ಕೇಳಿ, ಕನಲುತ್ತಿದ್ದಾರೆ. ಹಾಗಾಗಿ ಈ ಬಾರಿ ಹೋಳಿ ಸಂಭ್ರಮದ ಸಿದ್ಧತೆ ಕೂಡ ಸ್ಥಳೀಯ ಯುವಕರಲ್ಲಿ ಕಾಣಿಸಿಕೊಳ್ಳುತ್ತಿಲ್ಲ.

ಯುವಕರೇ ರಕ್ಷಕರು:

ಈ ಹಿಂದೆ ಹಂಪಿಯ ಶ್ರೀವಿರೂಪಾಕ್ಷೇಶ್ವರ ರಥಬೀದಿಯಲ್ಲಿ ದೇಶ, ವಿದೇಶಿ ಪ್ರವಾಸಿಗರು ಒಂದೆಡೆ ಸೇರಿ ಪರಸ್ಪರ ಬಣ್ಣ ಎರಚಿ ಸಂಭ್ರಮಿಸುತ್ತಿದ್ದರು. ಸ್ಥಳೀಯ ಯುವಕರೇ ಕಾವಲು ಕಾಯುತ್ತಿದ್ದರು. ವಿದೇಶಿಯವರು ಕೂಡ ಹ್ಯಾಪಿ ಹೋಳಿ ಎಂದು ಸಂಭ್ರಮ ಪಡುತ್ತಿದ್ದರು. ಹೋಳಿ ಸಂಭ್ರಮಕ್ಕಾಗಿ ಯುವಕರು ಸ್ವಯಂ ಸೇವಕರಾಗಿ ಕೆಲಸ ಮಾಡುತ್ತಿದ್ದರು. ಈಗ ಸಾಣಾಪುರದ ಘಟನೆಯಿಂದ ಸ್ಥಳೀಯ ಯುವಕರು ಕೂಡ ಆತಂಕಗೊಂಡಿದ್ದಾರೆ. ಹಾಗಾಗಿ ಹಂಪಿ, ಕಡ್ಡಿರಾಂಪುರ ಮತ್ತು ಹೊಸ ಹಂಪಿಯವರು ಹಾಗೂ ದೇಶ, ವಿದೇಶಿ ಪ್ರವಾಸಿಗರು ಸೇರಿ ಈ ಬಾರಿ ಹೋಳಿ ಆಚರಿಸೋಣ ಎಂಬ ಮಾತುಕತೆಯೂ ನಡೆದಿದೆ. ಇದು ಚರ್ಚೆ ಹಂತದಲ್ಲಿದೆ. ಇದಕ್ಕೆ ಪೊಲೀಸ್‌ ಇಲಾಖೆಯೊಂದಿಗೆ ಚರ್ಚಿಸಿ ಅಂತಿಮ ರೂಪ ನೀಡುವ ಸಾಧ್ಯತೆ ಇದೆ.

ಈ ಹಿಂದೆ ಹೋಳಿ ಸಂಭ್ರಮದಲ್ಲಿ ಗಂಗಾವತಿ, ಆನೆಗೊಂದಿ, ಕೊಪ್ಪಳ, ಬಳ್ಳಾರಿ, ಹೊಸಪೇಟೆ, ಸಂಡೂರು ಭಾಗದಿಂದಲೂ ಯುವಕರು ಆಗಮಿಸಿ, ದೇಶ, ವಿದೇಶಿ ಪ್ರವಾಸಿಗರೊಂದಿಗೆ ಹೋಳಿ ಸಂಭ್ರಮಾಚರಣೆಯಲ್ಲಿ ಭಾಗಿಯಾಗುತ್ತಿದ್ದರು. ಈ ಘಟನೆಯಿಂದ ಈಗ ಘಾಸಿಗೊಂಡಿರುವ ಯುವಕರ ಪಡೆ, ಪೊಲೀಸರ ಮಾರ್ಗದರ್ಶನದಲ್ಲೇ ಓಕುಳಿ ಸಂಭ್ರಮವನ್ನು ಆಚರಿಸಲು ಮುಂದಾಗಿದ್ದಾರೆ.

ಗಂಟುಮೂಟೆ:

ದೇಶ, ವಿದೇಶಿ ಪ್ರವಾಸಿಗರು ಸಣಾಪುರ ಘಟನೆ ಬಳಿಕ ಗಂಟೆ ಮೂಟೆ ಕಟ್ಟುತ್ತಿದ್ದಾರೆ. ಈ ಹಿಂದೆ ಹೋಳಿ ಸಂಭ್ರಮದ ಬಳಿಕ ಉತ್ತರ ಭಾರತದ ಪ್ರವಾಸಿ ತಾಣಗಳಿಗೆ ತೆರಳುತ್ತಿದ್ದರು. ಈ ಬಾರಿ ಮೊದಲೇ ಗಂಟುಮೂಟೆ ಕಟ್ಟುತ್ತಿದ್ದಾರೆ. ಇನ್ನೂ ದೇಶ, ವಿದೇಶಿ ಪ್ರವಾಸಿಗರು ಸುರಕ್ಷತೆಗೆ ಹೆಚ್ಚು ಒತ್ತು ನೀಡುತ್ತಿದ್ದಾರೆ. ಹಾಗಾಗಿ ಶೇ.30ರಷ್ಟು ಬುಕ್ಕಿಂಗ್‌ ಕ್ಯಾನ್ಸಲ್‌ ಆಗಿದೆ ಎಂದು ಹೋಂ ಸ್ಟೇ ಹಾಗೂ ರೆಸಾರ್ಟ್‌ ಮಾಲೀಕರು ಹೇಳುತ್ತಿದ್ದಾರೆ. ಕೋವಿಡ್‌ ಬಳಿಕ ಪ್ರವಾಸೋದ್ಯಮ ಕೂಡ ಚೇತರಿಸಿಕೊಂಡಿತ್ತು. ಇಂತಹದರಲ್ಲಿ ಈ ಘಟನೆ ಭಾರೀ ಪೆಟ್ಟು ನೀಡಿದೆ ಎಂದು ಹೆಸರು ಹೇಳಲಿಚ್ಛಿಸದ ಹೋಂ ಸ್ಟೇ ಮಾಲೀಕರು ಕನ್ನಡಪ್ರಭಕ್ಕೆ ತಿಳಿಸಿದರು.

ಹಂಪಿ ಭಾಗದಲ್ಲಿ ಪ್ರವಾಸಿಗರಿಗೆ ಆತಿಥ್ಯವೇ ಪ್ರಮುಖ ಮಾನದಂಡವಾಗಿದೆ. ಆದರೆ, ಸಣಾಪುರ ಘಟನೆಯಿಂದ ದೇಶ, ವಿದೇಶಿ ಪ್ರವಾಸಿಗರು ಕೂಡ ನೊಂದಿದ್ದಾರೆ. ಇದರಿಂದ ಪ್ರವಾಸೋದ್ಯಮಕ್ಕೂ ಹೊಡೆತ ಬಿದ್ದಿದ್ದು, ಹೋಳಿ ಆಚರಣೆ ಬಗ್ಗೆಯೂ ಆಲೋಚಿಸುವಂತಾಗಿದೆ ಎನ್ನುತ್ತಾರೆ ಸ್ಥಳೀಯರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ