ಸನಾತನ ಧರ್ಮ ಅಳಿಸಿ ಹಾಕಲು ಸಾಧ್ಯವಿಲ್ಲ

KannadaprabhaNewsNetwork |  
Published : May 18, 2026, 04:00 AM IST
17ಬಿಎಸ್ವಿ01- ಬಸವನಬಾಗೇವಾಡಿ ತಾಲೂಕಿನ ಡೋಣೂರ ಕಟ್ಟೀಮನಿ ಹಿರೇಮಠದ ಗುರು ಮರುಳಸಿದ್ದೇಶ್ವರ ಜಾತ್ರಾಮಹೋತ್ಸವದಂಗವಾಗಿ ಭಾನುವಾರ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹದಲ್ಲಿ ವಿವಿಧ ಶ್ರೀಗಳ ಸಾನಿಧ್ಯದಲ್ಲಿ ಮೂರು ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.  | Kannada Prabha

ಸಾರಾಂಶ

ಸನಾತನ ಧರ್ಮವು ವಿಶ್ವಕ್ಕೆ ಶಾಂತಿ ಸಂದೇಶ ನೀಡಿದೆ. ಇಂದು ಸನಾತನ ಧರ್ಮ ಸಂಕಷ್ಟದಲ್ಲಿದ್ದರೂ ಇದನ್ನು ಯಾರಿಂದಲೂ ಅಳಿಸಿ ಹಾಕಲು ಸಾಧ್ಯವಿಲ್ಲ ಎಂದು ಸಚಿವ ಶಿವಾನಂದ ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ

ಸನಾತನ ಧರ್ಮವು ವಿಶ್ವಕ್ಕೆ ಶಾಂತಿ ಸಂದೇಶ ನೀಡಿದೆ. ಇಂದು ಸನಾತನ ಧರ್ಮ ಸಂಕಷ್ಟದಲ್ಲಿದ್ದರೂ ಇದನ್ನು ಯಾರಿಂದಲೂ ಅಳಿಸಿ ಹಾಕಲು ಸಾಧ್ಯವಿಲ್ಲ ಎಂದು ಸಚಿವ ಶಿವಾನಂದ ಪಾಟೀಲ ಹೇಳಿದರು.

ತಾಲೂಕಿನ ಡೋಣೂರ ಗ್ರಾಮದ ಕಟ್ಟೀಮನಿ ಹಿರೇಮಠದ ಗುರು ಮರುಳಸಿದ್ದೇಶ್ವರ ಜಾತ್ರಾ ಮಹೋತ್ಸವ, ಹಜರತ್ ಸುಲೇಮಾನ ಉರುಸು, ಚೌಡಮ್ಮದೇವಿ ಜಾತ್ರಾಮಹೋತ್ಸವದ ಅಂಗವಾಗಿ ಭಾನುವಾರ ಹಮ್ಮಿಕೊಂಡಿದ್ದ ಅಭಿನಂದನಾ ಗೌರವ, ಸಾಮೂಹಿಕ ವಿವಾಹ ಹಾಗೂ ಅಗ್ನಿಶಮನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಿಂದು ಧರ್ಮವು ಪರಧರ್ಮ ಸಹಿಷ್ಣುತೆಯ ಧರ್ಮವಾಗಿದೆ. ಶಂಕರಚಾರ್ಯರಿಂದ ಹಿಡಿದು ಇಂದಿನ ಶ್ರೀಗಳವರೆಗೂ ಎಲ್ಲರೂ ಮಾನವೀಯ ಮೌಲ್ಯವನ್ನು ಎತ್ತಿ ಹಿಡಿದಿದ್ದಾರೆ. ಜಗತ್ತಿನ ಬೇರೆ ಯಾವ ಧರ್ಮಗಳು ಮಾಡದೇ ಇರುವದನ್ನು ವೀರಶೈವ ಪರಂಪರೆಯು ಎಲ್ಲರಿಗಾಗಿ ಕೊಡುಗೆ ನೀಡಿದೆ. ಇದು ಧಾರ್ಮಿಕ ಜಾಗೃತಿ ಮೂಡಿಸುವ ಜೊತೆಗೆ ಮಾನವೀಯ ಮೌಲ್ಯವನ್ನು ಎತ್ತಿಹಿಡಿಯುವ ಕಾರ್ಯ ಶ್ಲಾಘನೀಯ ಎಂದರು. ಬಂಥನಾಳ ಸಂಗನಬಸವ ಶಿವಯೋಗಿಗಳು ಅವಳಿ ಜಿಲ್ಲೆಯಲ್ಲಿ ವಿದ್ಯಾದಾನ, ಅನ್ನದಾನ ನೀಡಿದ್ದು ಸ್ಮರಣೀಯ. ನಾಡಿನಲ್ಲಿ ಸಿದ್ದಗಂಗಾ, ಸುತ್ತೂರು, ಬಾಲ್ಕಿ, ಬೀಳೂರ ಸೇರಿದಂತೆ ಅನೇಕ ಮಠಗಳು ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶಿಕ್ಷಣ, ದಾಸೋಹಕ್ಕೆ ಒತ್ತುನೀಡಿವೆ. ಈ ದಿಶೆಯಲ್ಲಿ ಡೋಣೂರಿನ ಕಟ್ಟೀಮನಿ ಹಿರೇಮಠದ ಡಾ.ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿಯವರು ಈ ಜಾತ್ರಾಮಹೋತ್ಸವದಲ್ಲಿ ಎಲ್ಲ ಜನಾಂಗದ ಬಾಂಧವರು ಭಾಗವಹಿಸುವಂತೆ ಮಾಡಿದ್ದಾರೆ. ಇದೊಂದು ಸಮನ್ವಯ ಭಾವನೆ ಬಿತ್ತರಿಸುವ ಜಾತ್ರೆಯಾಗಿದೆ. ಈ ಜಾತ್ರೆಯಲ್ಲಿ ಪಕ್ಷಾತೀತ,ಜಾತ್ಯಾತೀತವಾಗಿ ಜನರು ಭಾಗವಹಿಸುವದು ವಿಶೇಷ ಎಂದರು.ಡೋಣೂರ ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗೆ ಸದಾ ಬದ್ಧನಿದ್ದು. ಡೋಣೂರ ಗ್ರಾಮದ ಸೇತುವೆ ಶಿಥಿಲಾವಸ್ಥೆಯಲ್ಲಿದೆ. ಸಚಿವ ಸಂಪುಟದಲ್ಲಿ ಈ ಸೇತುವೆ ನಿರ್ಮಾಣಕ್ಕೆ ರೂ. 35 ಕೋಟಿ ಮಂಜೂರಾತಿಯಾಗಿದೆ. ಮುಂದಿನ ದಿನಗಳಲ್ಲಿ ಈ ಕಾಮಗಾರಿ ಆರಂಭವಾಗಲಿದೆ. ಇದರ ಜೊತೆಗೆ ನೇಗಿನಾಳ ಸೇತುವೆ ನಿರ್ಮಾಣವಾಗಲಿದೆ. ಡೋಣೂರ ಗ್ರಾಮಕ್ಕೆ ಕುಡಿಯುವ ನೀರಿನ ಸಮಸ್ಯೆ ಇತ್ತು. ಮುಂಬರುವ ದಿನಗಳಲ್ಲಿ ಬಸವನಬಾಗೇವಾಡಿ, ವಿಜಯಪುರ, ಇಂಡಿ ಮೂರು ತಾಲೂಕಿಗೆ ₹1300 ಕೋಟಿ ವೆಚ್ಚದಲ್ಲಿ ನಿರಂತರ ಕುಡಿಯುವ ನೀರು ಪೂರೈಕೆ ಯೋಜನೆ ಹಾಕಿಕೊಳ್ಳಲಾಗಿದೆ. ಮುಂದಿನ ವರ್ಷದೊಳಗೆ ಇದು ಪೂರ್ಣಗೊಂಡು ಈ 3 ತಾಲೂಕಿನ ಜನರಿಗೆ ನಿರಂತರ 24 ಗಂಟೆ ಕುಡಿಯುವ ನೀರು ಪೂರೈಕೆಯಾಗಲಿದೆ. ಕಳೆದ ವರ್ಷದಂತೆ ಈ ವರ್ಷವೂ ಭಗವಂತ ನಾಡಿಗೆ ಮಳೆ-ಬೆಳೆಯನ್ನು ಉತ್ತಮವಾಗಿ ಬರುವಂತೆ ಮಾಡಲೆಂದು ಆಶಯ ವ್ಯಕ್ತಪಡಿಸಿದರು. ಜಾಲಹಳ್ಳಿಯ ಡಾ.ಜಯಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಉಜ್ಜಯಿನಿ ಪೀಠದ ಶಾಖಾಮಠವಾದ ಈ ಮಠವು ಅದ್ಭುತ ಶಕ್ತಿಯನ್ನು ಹೊಂದಿದೆ. ಕಲ್ಪನೆಗೆ ಮೀರಿ ಪವಾಡ ನಡೆಯುತ್ತವೆ. ಜಗತ್ತಿಗೆ ನಾವು ಬರುವಾಗ ಏನು ತಂದಿಲ್ಲ. ಪ್ರಕೃತಿಯು ನಮಗೆ ಎಲ್ಲವನ್ನು ನೀಡಿದೆ. ಪ್ರತಿಯೊಂದರಲ್ಲಿಯೂ ಭಗವಂತನನ್ನು ಕಾಣಬೇಕು. ನಿಸರ್ಗವೇ ಪರಮಾತ್ಮ. ಸದ್ಗತಿ ಪಡೆಯಲು ಪರೋಪಕಾರ ಗುಣ ಬೆಳೆಸಿಕೊಳ್ಳಬೇಕು. ನಮ್ಮ ಮಾತುಗಳು ಪರಮಾತ್ಮನು ಸಹ ಮೆಚ್ಚುಕೊಳ್ಳುವಂತಿರಬೇಕು. ಶ್ರೀಮಠವು ಗ್ರಾಮೀಣ ಜನರ ಅನುಕೂಲಕ್ಕೆ ಪ್ರತಿವರ್ಷ ಜಾತ್ರೆಯಲ್ಲಿ ಸಾಮೂಹಿಕ ವಿವಾಹ ಹಮ್ಮಿಕೊಳ್ಳುತ್ತದೆ. ಇದರ ಸದುಪಯೋಗವನ್ನು ಜನರು ಪಡೆದುಕೊಳ್ಳಬೇಕು ಎಂದರು.ಮನಗೂಳಿ ಪಟ್ಟೀಕಂಥಿ ಹಿರೇಮಠದ ಡಾ.ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಸಮಾಜ ಸೇವೆ ಸಹಜವಾಗಿರಬೇಕು. ಇದರಲ್ಲಿ ನಾನು ಮಾಡುತ್ತೇನೆ ಎಂಬ ಭಾವನೆ ಇರಬಾರದು. ಪ್ರಸ್ತುತ ಶ್ರೀಮಠದ ಡಾ.ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿಯವರು ಸಹಜವಾಗಿ ಎಲ್ಲ ಕಾರ್ಯಗಳನ್ನು ಅರ್ಥಪೂರ್ಣವಾಗಿ ಮಾಡುತ್ತಾರೆ. ಆಡಂಬರವಿಲ್ಲದೆ ಶಾಂತವಾಗಿ ದೊಡ್ಡ ಕೆಲಸಗಳನ್ನು ಶ್ರೀಗಳು ಮಾಡುತ್ತಾರೆ. ಪ್ರಸ್ತುತ ಜಾತ್ರೆಯನ್ನು ಭಾವೈಕ್ಯತೆಯ ಜಾತ್ರೆಯನ್ನಾಗಿ ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಜೀವನದಲ್ಲಿ ಪರಿವರ್ತನೆ ಕಾಣಬೇಕು. ಮಕ್ಕಳನ್ನು ಬೆಳೆಸುವದು ಇಂದು ಪಾಲಕರಿಗೆ ಬಹಳ ಕಷ್ಟವಾಗಿದೆ. ಮಕ್ಕಳಿಗೆ ಉತ್ತಮ ಶಿಕ್ಷಣ, ಸಂಸ್ಕಾರ ನೀಡಬೇಕು. ರೈತ ಬಾಂಧವರು ಯಾವುದೇ ದುಶ್ಚಟಗಳಿಗೆ ದಾಸರಾಗಬಾರದು ಎಂದರು.ಶಿರಶ್ಯಾಡದ ಮುರುಘೇಂದ್ರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಶ್ರೀಮಠಗಳು ಹಮ್ಮಿಕೊಳ್ಳುವ ಧಾರ್ಮಿಕ ಕಾರ್ಯಕ್ರಮಗಳು ಜೀವನ ಪಾವನ ಮಾಡುತ್ತವೆ. ಇಂತಹ ಸಾಮೂಹಿಕ ವಿವಾಹದಲ್ಲಿ ವಿವಾಹವಾಗುವವರೂ ಭಾಗ್ಯವಂತರು. ಸಾಮೂಹಿಕ ವಿವಾಹಗಳು ದುಂದು ವೆಚ್ಚಕ್ಕೆ ಕಡಿವಾಣ ಹಾಕುತ್ತವೆ. ಈಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಪ್ರಗತಿಗೆ, ಆರ್ಥಿಕ ಸುಸ್ಥಿತಿ ದೃಷ್ಟಿಯಿಂದ ದುಂದು ವೆಚ್ಚಕ್ಕೆ ಕಡಿವಾಣ ಹಾಕಲು ಕರೆ ನೀಡಿದ್ದಾರೆ. ಸಾಮೂಹಿಕ ವಿವಾಹದಲ್ಲಿ ಹೆಚ್ಚು ಜನರು ವಿವಾಹವಾದರೇ ದುಂದು ವೆಚ್ಚಕ್ಕೆ ಕಡಿವಾಣ ಹಾಕಲು ಸಾಧ್ಯ. ಸಮಾಜದಲ್ಲಿ ಹೇಳುವವರಕ್ಕಿಂತ ಹೇಳಿದಂತೆ ನಡೆಯುವವರು ಬೇಕಿದೆ ಎಂದ ಅವರು ಡೋಣೂರಶ್ರೀಗಳು ಮುತ್ತು ಇದ್ದಂತೆ ಎಂದರು.ಅಧ್ಯಕ್ಷತೆ ವಹಿಸಿದ್ದ ಬಂಥನಾಳದ ವೃಷಭಲಿಂಗ ಶಿವಾಚಾರ್ಯ ಸ್ವಾಮೀಜಿ, ಶಿವಗಂಗೆಯ ಡಾ.ಮಲಯಶಾಂತಮುನಿ, ಕೆರೂರಿನ ಡಾ,ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ,ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಮಾತನಾಡಿದರು.ಕಾರ್ಯಕ್ರಮದಲ್ಲಿ ಶ್ರೀಮಠದ ಡಾ.ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ತಡವಲಗಾದ ರಾಯಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ, ಕವಲಗಿಯ ಅಭಿನವ ಸಿದ್ದರಾಮೇಶ್ವರ ಸ್ವಾಮೀಜಿ, ಚಿಮ್ಮಲಗಿಯ ಸಿದ್ದ ರೇಣುಕ ಶಿವಾಚಾರ್ಯ ಸ್ವಾಮೀಜಿ, ಜೈನಾಪೂರಿನ ರೇಣುಕ ಶಿವಾಚಾರ್ಯ ಸ್ವಾಮೀಜಿ, ನಿವೃತ್ತ ನ್ಯಾಯಾಧೀಶ ಎಂ.ಟಿ.ಆನಂದಶೆಟ್ಟಿ, ಜಿಪಂ ಮಾಜಿ ಸದಸ್ಯ ಬೀರಪ್ಪ ಸಾಸನೂರ ಇತರರು ಇದ್ದರು. ಸಿದ್ದರಾಮ ಹಳ್ಳಿ, ಪ್ರಕಾಶ ಸೊನ್ನದ ಸ್ವಾಗತಿಸಿ,ನಿರೂಪಿಸಿದರು. ಸಾಮೂಹಿಕ ವಿವಾಹದಲ್ಲಿ ಮೂರು ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.ನಂತರ ಶ್ರೀಮಠದ ಡಾ.ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿಯವರಿಂದ ಅಗ್ನಿಶಮನ ಜರುಗಿದ ನಂತರ ಸದ್ಭಕ್ತರಿಗೆ ಮಹಾಪ್ರಸಾದ ವಿತರಿಸಲಾಯಿತು. ಸಂಜೆ ಗುರು ಮರುಳಸಿದ್ದೇಶ್ವರ ರಥೋತ್ಸವ ವಿವಿಧೆಡೆಗಳಿಂದ ಆಗಮಿಸಿದ್ದ ಅಪಾರ ಭಕ್ತಸಮೂಹದ ಜಯಕಾರದೊಂದಿಗೆ ಅದ್ದೂರಿಯಾಗಿ ಜರುಗಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಹುಕೋಟಿ ವಂಚನೆ ಪ್ರಕರಣ: ಕಡತ ವಶಕ್ಕೆ ಪಡೆದ ಸಿಐಡಿ
ಕಾರ್ಯಕರ್ತರ ವ್ಯಕ್ತಿತ್ವ ರೂಪಿಸಲು ಪ್ರಶಿಕ್ಷಣ ವರ್ಗ