ತುಂಗಭದ್ರೆ, ವರದೆಯ ಒಡಲಲ್ಲಿನ ಮರಳು ಬರಿದು!

KannadaprabhaNewsNetwork |  
Published : May 18, 2024, 12:31 AM IST
ಚಿತ್ರ 16ಜಿಟಿಎಲ್1ಗುತ್ತಲ ಸಮೀಪದ ತುಂಗಭದ್ರಾ ನದಿ ದಡದ ಹರಳಹಳ್ಳಿ, ಕಂಚಾರಗಟ್ಟಿ, ಗಳಗನಾಥ, ಹುರುಳಿಹಾಳ ಹಾಗೂ ಹಾವನೂರ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಅಕ್ರಮವಾಗಿ ಮರಳನ್ನು ತಗೆಯುತ್ತಿರುವದು.ಚಿತ್ರ16ಜಿಟಿಎಲ್1ಎ, 1ಬಿಸಮೀಪದ ಹರಳಹಳ್ಳಿ ಗ್ರಾಮದ ತುಂಗಭದ್ರಾ ನದಿಯಲ್ಲಿ ಅಕ್ರಮವಾಗಿ ಟ್ರಾö್ಯಕ್ಟರ್‌ಗಳಲ್ಲಿ ಮರಳು ತುಂಬಿಕೊಂಡು ಬರುತ್ತಿರುವದು.  | Kannada Prabha

ಸಾರಾಂಶ

ಜಿಲ್ಲೆಯ ಜೀವನದಿಗಳು ಎನಿಸಿರುವ ತುಂಗಭದ್ರಾ ಹಾಗೂ ವರದಾ ನದಿಗಳ ಒಡಲಲ್ಲಿನ ಮರಳು ಮಂಗಮಾಯವಾಗಿದೆ. ಹಗಲು ರಾತ್ರಿ ಎನ್ನದೇ ಲಾರಿ, ಟಿಪ್ಪರ್, ಟ್ರ್ಯಾಕ್ಟರ್‌ಗಳಲ್ಲಿ ಮರಳು ಸಾಗಾಟವಾಗುತ್ತಿದ್ದು, ಈ ಅಕ್ರಮ ಮರಳು ದಂಧೆ ತಡೆಯುವಲ್ಲಿ ಜಿಲ್ಲಾಡಳಿತ ಅಕ್ಷರಶಃ ಕೈಕಟ್ಟಿ ಕುಳಿತಿದೆ.

ಮಂಜುನಾಥ ಯರವಿನತಲಿಕನ್ನಡಪ್ರಭ ವಾರ್ತೆ ಗುತ್ತಲ

ಜಿಲ್ಲೆಯ ಜೀವನದಿಗಳು ಎನಿಸಿರುವ ತುಂಗಭದ್ರಾ ಹಾಗೂ ವರದಾ ನದಿಗಳ ಒಡಲಲ್ಲಿನ ಮರಳು ಮಂಗಮಾಯವಾಗಿದೆ. ಹಗಲು ರಾತ್ರಿ ಎನ್ನದೇ ಲಾರಿ, ಟಿಪ್ಪರ್, ಟ್ರ್ಯಾಕ್ಟರ್‌ಗಳಲ್ಲಿ ಮರಳು ಸಾಗಾಟವಾಗುತ್ತಿದ್ದು, ಈ ಅಕ್ರಮ ಮರಳು ದಂಧೆ ತಡೆಯುವಲ್ಲಿ ಜಿಲ್ಲಾಡಳಿತ ಅಕ್ಷರಶಃ ಕೈಕಟ್ಟಿ ಕುಳಿತಿದೆ.

ತಾಲೂಕಿನ ಹರಳಹಳ್ಳಿ, ಕಂಚಾರಗಟ್ಟಿ, ಹುರುಳಿಹಾಳ, ಹಾವನೂರ, ಗಳಗನಾಥ, ತೆರೆದಹಳ್ಳಿ, ಮೇವುಂಡಿ ಸೇರಿದಂತೆ ಅನೇಕ ಗ್ರಾಮದ ನದಿಗಳ ದಡದಲ್ಲಿ ಅಕ್ರಮ ಮರಳು ಗಣಿಗಾರಿಕೆ ಪ್ರತಿನಿತ್ಯ ರಾಜಾರೋಷವಾಗಿ ನಡೆಯುತ್ತಿದೆ.

ಸುಮಾರು 5-6 ವರ್ಷಗಳಿಂದ ಗುತ್ತಲ ಪೊಲೀಸ್‌ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕೆಲ ಪೊಲೀಸ್‌ ಪೇದೆಗಳು ಮರಳು ದಂಧೆಗೆ ಸಾಥ್ ನೀಡುತ್ತಿದ್ದು, ಅಕ್ರಮ ಮರಳು ದಂಧೆಕೋರರಿಂದ ಹಣ ವಸೂಲಿ ಮಾಡುವದು, ಅಕ್ರಮ ಮರಳು ಸಾಗಿಸುವ ವಾಹನಗಳಲ್ಲಿ ಪಾಲುದಾರರಾಗಿ ಮರಳು ಸಾಗಾಟದಲ್ಲಿ ನೇರವಾಗಿ ಭಾಗಿಯಾಗಿದ್ದಾರೆ. ಕೆಲ ಹಿರಿಯ ಪೊಲೀಸ್‌ ಅಧಿಕಾರಿಗಳಿಗೆ ಇಂತಹ ವಿಷಯಗಳು ಗೊತ್ತಿದ್ದರೂ ಸುಮ್ಮನಿರುವದು ಸಾರ್ವಜನಿಕರಲ್ಲಿ ಅನುಮಾನ ಮೂಡಿಸಿದೆ.ಪೊಲೀಸರು ಶಾಮೀಲು?: ಗುತ್ತಲ ಹೋಬಳಿಯ ಸುಮಾರು 10ಕ್ಕೂ ಅಧಿಕ ಹಳ್ಳಿಗಳಲ್ಲಿ ಪ್ರತಿನಿತ್ಯ ಹಗಲು ರಾತ್ರಿ ಸಾವಿರಾರು ಮೆಟ್ರಿಕ್ ಟನ್ ಅಕ್ರಮ ಮರಳು ಹಾವೇರಿ ಜಿಲ್ಲೆ ಸೇರಿದಂತೆ ಗದಗ, ಧಾರವಾಡ, ವಿಜಯನಗರ ಜಿಲ್ಲೆಯ ವಿವಿಧ ಕಡೆಗೆ ಅಕ್ರಮವಾಗಿ ಸಾಗಾಟ ನಡೆಯುತ್ತಿದ್ದು, ಸರ್ಕಾರಕ್ಕೆ ಪ್ರತಿನಿತ್ಯ ಲಕ್ಷಾಂತರ ರುಪಾಯಿ ಹಾನಿಯಾಗುತ್ತಿದೆ.

ಕಳೆದ ತಿಂಗಳಿನಲ್ಲಿಯೇ ಕಂಚಾರಗಟ್ಟಿಯ ಕೆಲ ಲಾರೀ ಮಾಲೀಕರು ಐಜಿಪಿ ಹಾಗೂ ಗೃಹ ಮಂತ್ರಿಗಳಿಗೆ ದೂರು ನೀಡಿದ ಬಗ್ಗೆ ವಾಟ್ಸಪ್ ಹಾಗೂ ಸಾಮಾಜಿಕ ಜಾಲ ತಾಣದಲ್ಲಿ ಸ್ಕ್ರೀನ್ ಶಾಟ್ ಸದ್ದು ಮಾಡುತ್ತಿದೆ.

ಅಕ್ರಮ ಮರಳು ಗಣಿಗಾರಿಕೆಯಿಂದ ನದಿ ಪಾತ್ರದ ರೈತರು ದಿನನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ. ಟ್ರ್ಯಾಕ್ಟರ್, ಲಾರಿ ಹಾಗೂ ಜೆಸಿಬಿ ವಾಹನಗಳ ಓಡಾಟದಿಂದ ಹೊಲಗಳಿಗೆ ತೆರಳುವ ರಸ್ತೆಗಳು ಸಂಪೂರ್ಣವಾಗಿ ಹಾಳಾಗಿದ್ದು ಈ ಬಗ್ಗೆ ರೈತರು ವಾಹನಗಳನ್ನು ತಡೆದು ಪ್ರತಿಭಟಿಸಿದರೆ ಅಕ್ರಮ ಮರಳು ದಂಧೆಕೋರರು ಬೀಟ್ ಪೊಲೀಸರ ಮೂಲಕ ಸುಮ್ಮನಿರುವಂತೆ ತಿಳಿಸುವ ಮೂಲಕ ಭಯದಿಂದ ಸುಮ್ಮನೆ ಹೊಲಕ್ಕೆ ಹೋಗುವಂತಾಗಿದೆ ಎಂದು ರೈತನೋರ್ವ ತನ್ನ ಅಳಲನ್ನು ವ್ಯಕ್ತಪಡಿಸಿದ. ಗುತ್ತಲ ಪೊಲೀಸ್ ಸ್ಟೇಶನ್‌ಗೆ ಊರಾಗಿನ ಸಣ್ಣ ಪುಟ್ಟ ಜಗಳ, ಗದ್ದಲ ಬಗೆಹರಸ್ರಿ ಅಂತ ಹೋದ್ರ ಪೊಲೀಸರು ಯಾಕ್ ಬಂದಿರಿ ಅಂತ ಏನು ಕೇಳೊಲ್ಲ. ಜನರ ಸಮಸ್ಯೆ ಬಗೆಹರಸ್ರಿ ಅಂದ್ರು ಕ್ಯಾರೇ ಅನ್ನೊಲ್ಲ, ಇನ್ನ ಜನ ಸಾಮಾನ್ಯರ ಮಾತ್ ಕೇಳೊದ ಕಷ್ಟ ಐತಿ. ಅದ್ರಲ್ಲೂ ಕೆಲ ಪೊಲೀಸರಂತು ಉಸುಕಿನ ದಂಧೆದಾಗ ಬ್ಯುಸಿ ಇರೋದ ಬಿಟ್ಟರ ಮತ್ತೇನು ಕೆಲಸ ಮಾಡೋದಿಲ್ಲ ಗುತ್ತಲ ಪಪಂ ಸದಸ್ಯ ಬರಮಪ್ಪ ಹಾದಿಮನಿ ಹೇಳಿದರು.

PREV

Latest Stories

ಡಿಕೆಶಿ ಪರ ದಾವಣಗೆರೆಯಲ್ಲಿ 101 ತೆಂಗಿನಕಾಯಿ ಸೇವೆ
ಬೆಂಗಳೂರು-ತುಮಕೂರುಪ್ರಯಾಣ, ಜನ ಹೈರಾಣ
ಸ್ಮಾರ್ಟ್‌ ಮೀಟರ್‌ ವಿವಾದ: ಸಚಿವಜಾರ್ಜ್ ವಿರುದ್ಧ ಬಿಜೆಪಿ ದೂರು