ಕನ್ನಡಪ್ರಭ ವಾರ್ತೆ ಮೈಸೂರು
ಹಿರಿಯ ನಿರ್ಮಾಪಕ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯ ಸಂದೇಶ್ ನಾಗರಾಜ್ ಅವರ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಪದಾಧಿಕಾರಿಗಳು ಶನಿವಾರ ಸನ್ಮಾನಿಸಿದರು.ನಂತರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಂ. ನರಸಿಂಹಲು, ಸಂದೇಶ್ ನಾಗರಾಜ್ ಅವರು ನೂರನೇ ವರ್ಷದ ಹುಟ್ಟುಹಬ್ಬವನ್ನೂ ಸಂಭ್ರಮದಿಂದ ಆಚರಿಸಿಕೊಳ್ಳಲಿ ಎಂದು ಶುಭ ಹಾರೈಸಿದರು. ಅವರ ಹುಟ್ಟುಹಬ್ಬಕ್ಕೆ ಮಂಡಳಿಯ ಎಲ್ಲರೂ ಪಾಲ್ಗೊಳ್ಳಲಿ ಎಂಬ ಉದ್ದೇಶದಿಂದ ಇಲ್ಲಿಯೇ ಮಂಡಳಿಯ ಕಾರ್ಯಕಾರಿ ಸಮಿತಿ ಸಭೆಯನ್ನೂ ನಡೆಸಲು ತೀರ್ಮಾನಿಸಿದ್ದಾಗಿ ಹೇಳಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಸಂದೇಶ್ ನಾಗರಾಜ್, ಚಲನಚಿತ್ರ ವಾಣಿಜ್ಯ ಮಂಡಳಿ ವತಿಯಿಂದ ಸನ್ಮಾನಿಸಿರುವುದು ತುಂಬಾ ಖುಷಿಯಾಗಿದೆ. ಇದು ನಾನು ಜೀವನದಲ್ಲಿ ನಡೆದು ಬಂದಿರುವ ರೀತಿ- ನೀತಿಗೆ ಧಕ್ಕಿದ ಪ್ರತಿಫಲ. ವಯಸ್ಸಾದ ಮೇಲೆ ತಂದೆ- ತಾಯಿಯನ್ನು ಮೂಲೆಯಲ್ಲಿ ಕೂರಿಸುವ ಈ ಕಾಲದಲ್ಲಿ ನನ್ನ ಪುತ್ರ ಸಂದೇಶ್, ತನ್ನ ಮುಂದಾಳತ್ವದಲ್ಲೇ ಹುಟ್ಟುಹಬ್ಬ ಸಮಾರಂಭ ಆಯೋಜಿಸಿ ಮಾದರಿ ಆಗಿದ್ದಾನೆ. ಇಂದು ನನ್ನ ಜೀವನದ ಅತ್ಯಂತ ಸಂತೋಷದ ದಿನ ಎಂದರು.ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಮಾತನಾಡಿ, ನಮ್ಮೆಲ್ಲರ ಹಿರಿಯ ಸಂದೇಶ್ ನಾಗರಾಜ್ ಅವರ ಹುಟ್ಟುಹಬ್ಬ ಸಮಾರಂಭದಲ್ಲಿ ನಾವೆಲ್ಲಾ ಭಾಗವಹಿಸಲೇಬೇಕು ಎಂದು ಒಂದು ದಿನ ಮುಂಚಿತವಾಗಿ ಬಂದು ಇಲ್ಲಿಯೇ ಕಾರ್ಯಕಾರಿ ಸಭೆ ನಡೆಸಿದ್ದೇವೆ. ಸಂದೇಶ್ ನಾಗರಾಜ್ ಅವರು ಕುಳಿತಿದ್ದ ಆಸನದಲ್ಲಿ ನಾವು ಕುಳಿತಿರುವುದು ಸಂತೋಷ ತಂದಿದೆ ಎಂದರು.
ಮತ್ತೋರ್ವ ಮಾಜಿ ಅಧ್ಯಕ್ಷ ಕೆ.ವಿ. ಚಂದ್ರಶೇಖರ್ ಮಾತನಾಡಿ, ಕನ್ನಡ ಚಿತ್ರರಂಗವನ್ನು ಬೆಳೆಸಿರುವ ಮಹಾನ್ ವ್ಯಕ್ತಿಗಳಲ್ಲಿ ಸಂದೇಶ್ ನಾಗರಾಜ್ ಅವರೂ ಪ್ರಮುಖರು. ತಮ್ಮ 80ನೇ ವಯಸ್ಸಿನಲ್ಲೂ ಚಲನಚಿತ್ರ ನಿರ್ಮಾಣ ಮುಂದುವರೆಸುವ ಮೂಲಕ ಇತಿಹಾಸದಲ್ಲಿ ದಾಖಲಾಗುವ ಸೇವೆ ಮಾಡುತ್ತಿದ್ದಾರೆ ಎಂದರು.ಚಿತ್ರರಂಗ ಹಾಗೂ ವಾಣಿಜ್ಯ ಮಂಡಳಿ ಮೇಲೆ ಇವರ ಋಣವಿದೆ. ಸಾಕಷ್ಟು ಜನರಿಗೆ ಸಹಾಯ ಮಾಡಿದ್ದರೂ ಅವರೆಲ್ಲೂ ಹೇಳಿಕೊಂಡವರಲ್ಲ. ಅವರನ್ನು ಅಭಿನಂದಿಸುವ ನೆಪದಲ್ಲಿ ಅವರ ಆಶೀರ್ವಾದ ಪಡೆಯುತ್ತಿದ್ದೇವೆ ಎಂದು ಹೇಳಿದರು.
ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಹಾಗೂ ಹಿರಿಯ ನಿರ್ಮಾಪಕ ಎಸ್.ಎ. ಚಿನ್ನೇಗೌಡ ಹಾಗೂ ಸಾ.ರಾ. ಗೋವಿಂದು ಮಾತನಾಡಿ, ಚಿತ್ರರಂಗದಲ್ಲಿ ಸಂದೇಶ್ ನಾಗರಾಜ್ ಅವರ ಸಾಧನೆಯನ್ನು ಸ್ಮರಿಸಿದರು.ಈ ವೇಳೆ ವಾಣಿಜ್ಯ ಮಂಡಳಿ ಉಪಾಧ್ಯಕ್ಷ ಕೆ.ಓ. ರಂಗಪ್ಪ, ಸಫೈರ್ ವೆಂಕಟೇಶ್, ಕಾರ್ಯದರ್ಶಿಗಳಾದ ಎಲ್.ಸಿ. ಕುಶಾಲ್, ಪ್ರವೀಣ್ ಕುಮಾರ್, ಎಂ.ಎನ್. ಕುಮಾರ್, ಖಜಾಂಚಿ ಚಿಂಗಾರಿ ಮಹದೇವ್ ಮೊದಲಾದವರು ಇದ್ದರು.