ಮಂಗಳೂರು: ಸಂದೇಶ ಪ್ರತಿಷ್ಠಾನ ವತಿಯಿಂದ ವಿವಿಧ ಕ್ಷೇತ್ರಗಳಲ್ಲಿ ಅಪೂರ್ವ ಸಾಧನೆ ಮಾಡಿದ ಸಾಧಕರಿಗೆ ಸಂದೇಶ ಪ್ರಶಸ್ತಿಗಳನ್ನು ನಗರದಲ್ಲಿರುವ ಸಂಸ್ಥೆಯ ಆವರಣದಲ್ಲಿ ಪ್ರದಾನ ಮಾಡಲಾಯಿತು.ಸಂದೇಶ ಸಾಹಿತ್ಯ ಪ್ರಶಸ್ತಿ (ಕನ್ನಡ)ಯನ್ನು ಹಿರಿಯ ಸಾಹಿತಿ ಡಾ.ನಾ. ಮೊಗಸಾಲೆ ಅವರಿಗೆ, ಸಂದೇಶ ಸಾಹಿತ್ಯ ಪ್ರಶಸ್ತಿ (ಕೊಂಕಣಿ)ಯನ್ನು ಪ್ಯಾಟ್ರಿಕ್ ಕೆ. ಮೋರಸ್, ಸಂದೇಶ ಸಾಹಿತ್ಯ ಪ್ರಶಸ್ತಿ (ತುಳು): ಇಂದಿರಾ ಹೆಗಡೆ, ಸಂದೇಶ ಮಾಧ್ಯಮ ಪ್ರಶಸ್ತಿ: ಎಸ್.ಜಿ. ತುಂಗಾರೇಣುಕ, ಸಂದೇಶ ಕೊಂಕಣಿ ಸಂಗೀತ ಪ್ರಶಸ್ತಿ: ಸೈಮನ್ ಪೈಸು, ಸಂದೇಶ ಕಲಾ ಪ್ರಶಸ್ತಿ: ಶ್ರೀನಿವಾಸ್ ಜಿ. ಕಪ್ಪಣ್ಣ, ಸಂದೇಶ ಶಿಕ್ಷಣ ಪ್ರಶಸ್ತಿಯನ್ನು ಡಾ. ದತ್ತಾತ್ರೇಯ ಅರಳಿಕಟ್ಟೆ ಅವರಿಗೆ ಪ್ರದಾನ ಮಾಡಿದರೆ, ಸಂದೇಶ ವಿಶೇಷ ಗೌರವವನ್ನು ಬಳ್ಳಾರಿಯ ನವ ಜೀವನ ಅಂಗವಿಕಲರ ಪುನರ್ವಸತಿ ಕೇಂದ್ರಕ್ಕೆ ನೀಡಲಾಯಿತು.ಕಾರ್‍ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಚಲನಚಿತ್ರ ನಿರ್ದೇಶಕ, ಸಾಹಿತಿ ಡಾ. ನಾಗತಿಹಳ್ಳಿ ಚಂದ್ರಶೇಖರ್, ಕಲೆ ಮನರಂಜನೆಗಾಗಿ ಮಾತ್ರವಲ್ಲ, ಅದು ಮನುಷ್ಯನನ್ನು ಹೆಚ್ಚು ಮಾನವೀಯನನ್ನಾಗಿ ಮಾಡಬೇಕು. ಇಂದಿನ ಅಸಹಿಷ್ಣುತೆಗೆ ಪ್ರೀತಿ ಮತ್ತು ಕಲೆಯೊಂದೇ ಮದ್ದು ಎಂದು ಅಭಿಪ್ರಾಯಪಟ್ಟರು.
ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಅ.ವಂ. ಪೀಟರ್ ಪಾಲ್ ಸಲ್ದಾನಾ, ಕರ್ನಾಟಕ ಇಕೋ ಟೂರಿಸಂ ಬೋರ್ಡ್ ಅಧ್ಯಕ್ಷೆ ಶಾಲೆಟ್ ಪಿಂಟೊ, ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸ್ಟ್ಯಾನಿ ಆಲ್ವಾರಿಸ್, ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಉಮರ್ ಯು.ಎಚ್. ಮತ್ತಿತರರು ಇದ್ದರು.
ಉಡುಪಿ ಧರ್ಮಪ್ರಾಂತ್ಯದ ಬಿಷಪ್ ಅ.ವಂ. ಜೆರಾಲ್ಡ್ ಐಸಾಕ್ ಲೋಬೊ, ಶಾಸಕ ಡಿ. ವೇದವ್ಯಾಸ ಕಾಮತ್, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಕಾರ್‍ಯಕ್ರಮ ಆರಂಭಕ್ಕೆ ಮೊದಲು ಭೇಟಿ ನೀಡಿ, ಪ್ರಶಸ್ತಿ ವಿಜೇತರು ಮತ್ತು ಅತಿಥಿಗಳಿಗೆ ಶುಭಾಶಯ ಕೋರಿದರು.ಸಂದೇಶ ಪ್ರತಿಷ್ಠಾನದ ನಿರ್ದೇಶಕ ಫಾ. ಸುದೀಪ್ ಪಾಲ್ ಸ್ವಾಗತಿಸಿದರು. ಸಂದೇಶ ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷ ಡಾ.ನಾ. ದಾಮೋದರ ಶೆಟ್ಟಿ ಅವರು ಪ್ರಶಸ್ತಿಗಳ ಬಗ್ಗೆ ಪ್ರಸ್ತಾವನೆ ನೀಡಿದರು. ಟ್ರಸ್ಟಿ ರಾಯ್ ಕ್ಯಾಸ್ಟೆಲಿನೋ ವಂದಿಸಿದರು. ಕಾರ್‍ಯಕ್ರಮವನ್ನು ಐರಿನ್ ರೆಬೆಲ್ಲೊ ನಿರ್ವಹಿಸಿದರು.
(ಫೋಟೊ-22ಸಂದೇಶ)