ಹುಬ್ಬಳ್ಳಿ:
ನ. 15ರಿಂದ ಆರಂಭಗೊಂಡ ಶ್ರೀಸಿದ್ಧಾರೂಢರ ಹಾಗೂ ಸಮಕಾಲೀನ ಮಹಾತ್ಮರ ಸಂಗಮ ರಥಯಾತ್ರೆ ಅಂಗವಾಗಿ 6 ಆನೆಗಳ ಅಂಬಾರಿ ಉತ್ಸವ ಮೆರವಣಿಗೆ ಡಿ. 8ರಂದು ನಗರದಲ್ಲಿ ನಡೆಯಲಿದೆ. ಬೆಳಗ್ಗೆ 8 ಗಂಟೆಗೆ ನಗರದ ನೆಹರು ಮೈದಾನದಿಂದ ಆರಂಭಗೊಂಡು ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸಿದ್ಧಾರೂಢಮಠದಲ್ಲಿ ಸಂಪನ್ನಗೊಳ್ಳಲಿದೆ ಎಂದು ಅಂಬಾರಿ ಉತ್ಸವ ಸಮಿತಿ ಸಂಚಾಲಕ ಮನೋಜಕುಮಾರ ಗದುಗಿನ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೆರವಣಿಗೆಯು ನೆಹರು ಮೈದಾನದಿಂದ ಆರಂಭಗೊಂಡು ಲ್ಯಾಮಿಂಗ್ಟನ್ ರೋಡ್, ಕೊಪ್ಪಿಕರ ರಸ್ತೆ, ಮ್ಯಾದಾರ ಓಣಿ, ತುಳಜಾ ಭವಾನಿ ವೃತ್ತ, ದಾಜೀಬಾನಪೇಟ, ಸಂಗೊಳಿ ರಾಯಣ್ಣ ವೃತ್ತ, ಗಿರಿಣಿ ಚಾಳ, ಕಾರವಾರ ರಸ್ತೆ, ಇಂಡಿಪಂಪ್ ಮೂಲಕ ಶ್ರೀಸಿದ್ಧಾರೂಢ ಮಠಕ್ಕೆ ತಲುವುದು ಎಂದರು.
ಶಾಸಕ ಗಾಲಿ ಜನಾರ್ದನ ರೆಡ್ಡಿ ಮೆರವಣಿಗೆಗೆ ಚಾಲನೆ ನೀಡುವರು. ಶಿರಹಟ್ಟಿ ಫಕೀರ ಸಂಸ್ಥಾನ ಮಠದ ಭಾವೈಕ್ಯತಾ ಪೀಠದ ಫಕೀರಸಿದ್ದರಾಮ ಶ್ರೀ, ವಿಜಯಪುರ ಶಾಂತಾಶ್ರಮದ ಷಣ್ಮುಖಾರೂಢ ಮಠದ ಅಭಿನವ ಸಿದ್ಧಾರೂಢ ಶ್ರೀ, ಮಣಕವಾಡದ ಅಭಿನವ ಮೃತ್ಯುಂಜಯ ಶ್ರೀ, ಶಿವಾನಂದಮಠದ ಶಿವಬಸವ ಶ್ರೀ, ಕುಂದಗೋಳ ಅಭಿನವ ಬಸವಣ್ಣಜ್ಜನವರು ಸಾನ್ನಿಧ್ಯ ವಹಿಸುವರು. ಶಾಸಕ ಮಹೇಶ ಟೆಂಗಿನಕಾಯಿ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ಸಂಸದ ಜಗದೀಶ ಶೆಟ್ಟರ್, ಶಾಸಕರಾದ ಪ್ರಸಾದ ಅಬ್ಬಯ್ಯ, ಎನ್.ಎಚ್. ಕೋನರೆಡ್ಡಿ, ಎಂ.ಆರ್. ಪಾಟೀಲ, ಸಿ.ಸಿ. ಪಾಟೀಲ, ಮಾಜಿ ಸಚಿವ ಬಿ. ಶ್ರೀರಾಮಲು ಅತಿಥಿಗಳಾಗಿ ಆಗಮಿಸುವರು ಎಂದು ತಿಳಿಸಿದರು.ಸಂಜೆ 4ಕ್ಕೆ ಶ್ರೀಸಿದ್ಧಾರೂಢ ಮಠದಲ್ಲಿ ಉತ್ಸವದ ಸಮಾರೋಪ ಜರುಗಲಿದ್ದು, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅಧ್ಯಕ್ಷತೆ ವಹಿಸುವರು. ಸಚಿವರಾದ ಎಚ್.ಕೆ. ಪಾಟೀಲ, ಲಕ್ಷ್ಮೀ ಹೆಬ್ಬಾಳಕರ, ಈಶ್ವರ ಖಂಡ್ರೆ, ಮೇಯರ್ ರಾಮಣ್ಣ ಬಡಿಗೇರ, ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಮಾಜಿ ಶಾಸಕರಾದ ಅಮೃತ ದೇಸಾಯಿ, ಅಶೋಕ ಕಾಟವೆ ಪಾಲ್ಗೊಳ್ಳುವರು. ಅಣ್ಣಿಗೇರಿ ದಾಸೋಹಮಠ ಶಿವಕುಮಾರ ಶ್ರೀ, ನವಲಗುಂದದ ವೀರೇಂದ್ರ ಸ್ವಾಮೀಜಿ, ರಾಮಾನಂದ ಭಾರತಿ ಶ್ರೀ, ಚಿದಾನಂದ ಭಾರತಿ ಶ್ರೀ ಸಾನ್ನಿಧ್ಯ ವಹಿಸುವರು ಎಂದರು.
ರಾಯಚೂರ ಕಡೆಗಂಚಿನಮಠ, ಹೊನ್ನಾಳಿ ಹಿರೇಕಲ್ಲಮಠ, ಶ್ರೀಶೈಲ ಮಠ, ರಾಣಿಬೆನ್ನೂರ ಐರಣಿ ಮಠ ಹಾಗೂ ಹಂಪಿ ವಿರೂಪಾಕ್ಷ ದೇವಸ್ಥಾನದ ಆನೆಗಳನ್ನು ಕರೆತರಲಾಗಿದ್ದು, ಅಂಬಾರಿ ಸಹಿತ ಮಹಾತ್ಮರ ಮೂರ್ತಿಗಳನ್ನು ಹೊತ್ತು ಸಾಗಲಿವೆ ಎಂದರು.ಸುದ್ದಿಗೋಷ್ಠಿಯಲ್ಲಿ ಮಲ್ಲಿಕಾರ್ಜುನ ಹೊರಕೇರಿ, ವಿ.ಪಿ. ಗಿರಿಗೌಡರ, ಪ್ರಭು ಕಸ್ತೂರಿ, ಪರಶುರಾಮ ಸೇರಿದಂತೆ ಹಲವರಿದ್ದರು.