ಕನ್ನಡಪ್ರಭ ವಾರ್ತೆ ಕಲಬುರಗಿ
ಜಿಲ್ಲೆಯ ಆಳಂದ ತಾಲೂಕಿನ ಕಡಗಂಚಿಯಲ್ಲಿರುವ ಕರ್ನಾಟಕ ಕೇಂದ್ರೀಯ ವಿವಿಯ ಅತಿಥಿ ಗೃಹದಲ್ಲಿ ಕುಲಪತಿ, ಕುಲಸಚಿವರು, ಹಿರಿಯ ಪ್ರಾಧ್ಯಾಪಕರ ಉಪಸ್ಥಿತಿಲ್ಲಿ ಇತ್ತೀಚೆಗೆ ಆರ್‌ಎಸ್‌ಎಸ್ ಸಭೆ ನಡೆದಿರುವ ಆರೋಪಗಳು ಕೇಳಿ ಬಂದಿವೆ.ಈ ಸಭೆಯ ಕೊನೆಯಲ್ಲಿ ಆರ್‌ಎಸ್‌ಎಸ್‌ನ ಧ್ಯೇಯಗೀತೆಯಾದ ‘ನಮಸ್ತೆ ಸದಾ ವತ್ಸಲೆ’ಯನ್ನು ಹಾಡಿದ್ದಲ್ಲದೇ, ಎಲ್ಲರೂ ಎದ್ದು ನಿಂತು ಆರ್‌ಎಸ್‌ಎಸ್ ಕಾರ್ಯಕರ್ತರಂತೆ ಕೈ ಎದೆಗೆ ಅಡ್ಡ ಹಿಡಿದು ನಿಂತಿರುವ ಹಾಗೂ ಭಗವಾಧ್ವಜಕ್ಕೆ ನಮಸ್ಕರಿಸುತ್ತಿರುವ ವಿಡಿಯೋ ಸದ್ಯ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದೆ. ಇದು ವಿವಾದಕ್ಕೆ ಎಡೆಮಾಡಿಕೊಟ್ಟಿದೆ.
ಆರ್‌ಎಸ್‌ಎಸ್ ಗೀತೆಗೆ ಧ್ವನಿಗೂಡಿಸಿದ ಬೋಧಕ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಸಭೆಯ ಕೊನೆಯಲ್ಲಿ ಆರ್‌ಎಸ್‌ಎಸ್ ಗೀತೆಯನ್ನು ಸಾಮೂಹಿಕವಾಗಿ ಹಾಡುತ್ತಿರುವುದನ್ನು ಗಮನಿಸಿದ ಕೆಲವು ಸಂಶೋಧನಾ ವಿದ್ಯಾರ್ಥಿಗಳು ತಮ್ಮ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾರೆ.ವಿಡಿಯೋ ಮಾಡುತ್ತಿರುವುದನ್ನು ಗಮನಿಸಿದ ಆರ್‌ಎಸ್‌ಎಸ್‌ನ ಕೆಲ ಕಾರ್ಯಕರ್ತರು ಹಾಗೂ ಕೆಲವು ಸಂಘಪರಿವಾರದ ಹಿನ್ನೆಲೆಯುಳ್ಳ ಕೆಲ ಬೋಧಕ ಸಿಬ್ಬಂದಿ ಸಂಶೋಧನಾ ವಿದ್ಯಾರ್ಥಿಯ ಕೈಯಿಂದ ಮೊಬೈಲ್ ಕಸಿದುಕೊಂಡು, ಬೆದರಿಕೆ ಹಾಕಿ, ವಿಡಿಯೋ ಡಿಲೀಟ್ ಮಾಡಿಸಿರುವುದಾಗಿ ಗೊತ್ತಾಗಿದೆ. ಆದಾಗ್ಯೂ ವಿದ್ಯಾರ್ಥಿಗಳು ಕೆಲವರು ರಿಸ್ಟೋರ್ ಟೂಲ್ ಬಳಸಿ ವಿಡಿಯೋ ಮತ್ತೆ ಪಡೆದಿದ್ದಾರೆನ್ನಲಾಗಿದೆ.
ಬೇರೆ ರಾಜ್ಯದಿಂದ ಬಂದಿದ್ದ ಐದಾರು ಜನ ಆರ್‌ಎಸ್ಎಸ್ ಪ್ರಮುಖರು ಕಳೆದ ಗುರುವಾರ ವಿಶ್ವವಿದ್ಯಾಲಯದ ಅತಿಥಿಗೃಹದಲ್ಲಿ ಸಭೆ ನಡೆಸಿದ್ದಾರೆ. ಆರ್‌ಎಸ್‌ಎಸ್ ಈ ದೇಶದಲ್ಲಿ ಸ್ಥಾಪನೆಗೊಂಡು 2025ಕ್ಕೆ 100 ವರ್ಷಗಳು ತುಂಬಲಿದೆ. ಅದಕ್ಕೆ ಪೂರ್ವಭಾವಿಯಾಗಿ ಕಲಬುರಗಿ ಭಾಗದಲ್ಲಿ ಸಂಘದ ಚಟುವಟಿಕೆಗಳನ್ನು ವಿಸ್ತರಿಸುವ ಬಗ್ಗೆ ಚರ್ಚೆ ನಡೆದಿದೆ ಎಂದು ಕೆಲವು ಸಂಶೋಧನಾ ವಿದ್ಯಾರ್ಥಿಗಳು ಮಾಹಿತಿ ನೀಡಿದ್ದಾರೆ.ಶೈಕ್ಷಣಿಕ ಚಟುವಟಿಕೆಗಳಿಗೆ ಮೀಸಲಾದ ವಿವಿಯಲ್ಲಿ ಆರ್‌ಎಸ್‌ಎಸ್ ಚಟುವಟಿಕೆಗಳು ಈ ಹಿಂದೆಯೂ ನಡೆದಿದ್ದ ಆರೋಪಗಳು ಕೇಳಿ ಬಂದಿದ್ದವು. ಇದನ್ನು ವಿರೋಧಿಸಿ ವಿದ್ಯಾರ್ಥಿ ಹಾಗೂ ಪ್ರಗತಿಪರ ಸಂಘಟನೆಗಳು ವಿಶ್ವವಿದ್ಯಾಲಯದ ಎದುರು ಪ್ರತಿಭಟನೆ ಕೂಡ ನಡೆಸಿದ್ದವು. ಇದೀಗ ಜು.18ರ ಸಭೆ ಮತ್ತೊಂದು ಸುತ್ತಿನ ವಿವಾದ ಹುಟ್ಟು ಹಾಕಿದೆ.
ಈ ಬೆಳವಣಿಗೆಯ ಬಗ್ಗೆ ಮಾತನಾಡಿರುವ ಅಂಬೇಡ್ಕರ್ ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷ ನಂದಕುಮಾರ್, ಸಭೆಯಲ್ಲಿ ಭಾಗವಹಿಸಿದ್ದ ಆರ್‌ಎಸ್‌ಎಸ್‌ನ ಮುಖಂಡರು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯವನ್ನೇ ಆರ್‌ಎಸ್‌ಎಸ್‌ನ ದಕ್ಷಿಣ ಭಾರತದ ಕೇಂದ್ರ ಕಚೇರಿಯ ರೀತಿಯಲ್ಲಿ ಕಾರ್ಯ ನಿರ್ವಹಿಸುವಂತೆ ಕರೆ ಕೊಟ್ಟಿದ್ದಾರೆಂದು ದೂರಿದ್ದಾರೆ.ಜು.18ರಂದು ಕೇಂದ್ರೀಯ ವಿಶ್ವವಿದ್ಯಾಲಯದ ಗೆಸ್ಟ್ ಹೌಸ್‌ನಲ್ಲಿ ನಡೆದ ಆರ್‌ಎಸ್‌ಎಸ್‌ನ ಸಂವಿಧಾನ ವಿರೋಧಿ ಕಾರ್ಯಕ್ರಮದ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದ ಸಂಶೋಧನಾ ವಿದ್ಯಾರ್ಥಿಗಳ ಮೇಲೆ ಹಲ್ಲೆ ಯತ್ನ ನಡೆಜಿವೆ. ಮೊಬೈಲ್ ಕಸಿದುಕೊಂಡಿದ್ದಾರೆ. ವಿಶ್ವವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮ ಕಾನೂನಾತ್ಮಕವಾಗಿದ್ದರೆ ಭಯ ಯಾಕೆಂದು ನಂದಕುಮಾರ್ ಪ್ರಶ್ನಿಸಿದ್ದಾರೆ.