ಜೀವನದಲ್ಲಿ ಗುರಿ, ಶಿಸ್ತನ್ನು ಅಳವಡಿಸಿಕೊಂಡರೆ ಯಶಸ್ಸು: ಶಾಸಕ ಎಚ್ .ಟಿ.ಮಂಜು

KannadaprabhaNewsNetwork | Published : Jul 21, 2024 1:16 AM

ಸಾರಾಂಶ

ಹಲವು ವ್ಯಕ್ತಿಗಳು ಒಗ್ಗೂಡಿ ಒಂದು ಸಂಸ್ಥೆಯನ್ನು ಸ್ಥಾಪಿಸಿ ಅವರ ದುಡಿಮೆ ಸ್ವಲ್ಪ ಭಾಗದ ಹಣವನ್ನು ಸಮಾಜಸೇವಾ ಕಾರ್ಯಗಳಿಗೆ ಬಳಕೆ ಮಾಡುತ್ತಿರುವುದು ಅಭಿನಂದನಾರ್ಹ. ಅವರ ಬದ್ಧತೆ, ಜವಾಬ್ದಾರಿಗಳು ಎಷ್ಟು ಎಂಬುದು ಅವರ ಮಾತುಗಳಿಂದಲೇ ತಿಳಿಯುತ್ತದೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ವಿದ್ಯಾರ್ಥಿಗಳು ಜೀವನದಲ್ಲಿ ಗುರಿ ಮತ್ತು ಶಿಸ್ತನ್ನು ಅಳವಡಿಸಿಕೊಂಡು ಪರಿಶ್ರಮದಿಂದ ಅಭ್ಯಾಸ ಮಾಡಿದರೆ ಯಶಸ್ಸು ಗಳಿಸಬಹುದು ಎಂದು ಶಾಸಕ ಎಚ್.ಟಿ.ಮಂಜು ಕರೆ ನೀಡಿದರು.

ತಾಲೂಕಿನ ಶೀಳನೆರೆ ಗ್ರಾಮದಲ್ಲಿ ನಿರಂತರ ಫೌಂಡೇಷನ್ ಸಂಸ್ಥೆ ವತಿಯಿಂದ ಪ್ರೌಢಶಾಲೆ ಹಾಗೂ ಕಾಲೇಜಿಗೆ ಕಂಪ್ಯೂಟರ್ ಹಾಗೂ ಎರಡು ಪ್ರೊಜೆಕ್ಟರ್ ಸಾಮಗ್ರಿಗಳನ್ನು ಹಸ್ತಾಂತರಿಸಿ ಮಾತನಾಡಿದರು.

ನಿರಂತರ ಫೌಂಡೇಷನ್ ಸಂಸ್ಥೆ ಮೂಲ ಸೌಕರ್ಯಗಳಿಂದ ವಂಚಿತವಾದ ಶಾಲೆಗಳನ್ನು ಗುರುತಿಸಿ ಅವುಗಳಿಗೆ ಸಹಕಾರ ನೀಡುತ್ತಾ ಬಂದಿರುವುದು ಒಳ್ಳೆಯ ಬೆಳವಣಿಗೆ. ಒಂದು ಸರ್ಕಾರ ಮಾಡಲಾಗದ ಕೆಲಸವನ್ನು ಸ್ವಯಂಸೇವಾ ಸಂಸ್ಥೆ ಮಾಡುತ್ತಿರುವುದು ಶ್ಲಾಘನೀಯ ಎಂದರು.

ಹಲವು ವ್ಯಕ್ತಿಗಳು ಒಗ್ಗೂಡಿ ಒಂದು ಸಂಸ್ಥೆಯನ್ನು ಸ್ಥಾಪಿಸಿ ಅವರ ದುಡಿಮೆ ಸ್ವಲ್ಪ ಭಾಗದ ಹಣವನ್ನು ಸಮಾಜಸೇವಾ ಕಾರ್ಯಗಳಿಗೆ ಬಳಕೆ ಮಾಡುತ್ತಿರುವುದು ಅಭಿನಂದನಾರ್ಹ. ಅವರ ಬದ್ಧತೆ, ಜವಾಬ್ದಾರಿಗಳು ಎಷ್ಟು ಎಂಬುದು ಅವರ ಮಾತುಗಳಿಂದಲೇ ತಿಳಿಯುತ್ತದೆ ಎಂದು ಹೇಳಿದರು.

ಸರ್ಕಾರಿ ಶಾಲೆಗಳನ್ನು ಇಂತಹ ಸ್ವಯಂಸೇವಾ ಸಂಸ್ಥೆಗಳು ಬೆಂಬಲಿಸಿದರೆ ಸರ್ಕಾರಿ ಶಾಲೆಗಳು ಬಲವರ್ಧನೆಯಾಗುತ್ತವೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಆಶೋತ್ತರಗಳನ್ನು ಈಡೇರಿಸುತ್ತಿರುವ ನಿರಂತರ ಸಂಸ್ಥೆ ಹೆಮ್ಮರವಾಗಿ ಬೆಳೆಯಲಿ ಎಂದರು.

ಪ್ರಾಂಶುಪಾಲರು ಕಾಲೇಜಿಗೆ ಆಗಬೇಕಾದ ಕೆಲಸಗಳ ಬಗ್ಗೆ ಶಾಸಕರ ಗಮನಕ್ಕೆ ತಂದಾಗ ಇದಕ್ಕೆ ಸ್ಪಂದಿಸಿ ಕಾಲೇಜು ಕಟ್ಟಡಕ್ಕೆ ಮೇಲ್ಛಾವಣಿಗಾಗಿ 10 ಲಕ್ಷ ರು. ಹಾಗೂ ತುರ್ತು ರಿಪೇರಿ ಕೆಲಸ ಮಾಡಿಸಿ ಕೊಡಲಾಗುವುದು ಎಂದು ಹೇಳಿದರು.

ನಿರಂತರ ಸಂಸ್ಥೆ ಶಿವಕುಮಾರ್ ಮಾತನಾಡಿ, 2006-07 ಸಾಲಿನಲ್ಲಿ ಆರಂಭವಾದ ನಿರಂತರ ಫೌಂಡೇಷನ್ ಸಂಸ್ಥೆ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಅನುಕೂಲವಾಗುವ ದೃಷ್ಟಿಯಿಂದ ಶಿಕ್ಷಣ, ಆಹಾರ, ಚಿಗುರು, ವಸ್ತ್ರ ಮುಂತಾದ ಹೆಸರಿನಲ್ಲಿ ನೈಜ ಫಲಾನುಭವಿಗಳನ್ನು ಗುರುತಿಸಿ ಅವರಿಗೆ ಅರ್ಹ ಸವಲತ್ತುಗಳನ್ನು ತಲುಪಿಸುವ ಪ್ರಾಮಾಣಿಕ ಕೆಲಸ ಮಾಡುತ್ತಿದ್ದೇವೆ.

ಕಾರ್ಯಕ್ರಮದಲ್ಲಿ ನಿರಂತರ ಸಂಸ್ಥೆ ಜಗದೀಶ್, ರಾಜ್ಯ ಮಾರಾಟ ಮಹಾ ಮಂಡಳಿ ನಿರ್ದೇಶಕ ಎಸ್.ಎಲ್.ಮೋಹನ್, ಕಾಲೇಜು ಅಭಿವೃದ್ಧಿ ಸಮಿತಿ ಉಪಾದ್ಯಕ್ಷ ಪ್ರಸನ್ನ, ಗ್ರಾಪಂ ಸದಸ್ಯ ಸಿದ್ದೇಶ್, ಕಾಲೇಜಿನ ಪ್ರಾಂಶುಪಾಲ ಎಂ.ಕೆ.ವಾಸು, ತಾಲೂಕು ಉಪನ್ಯಾಸಕರ ಸಂಘದ ಅಧ್ಯಕ್ಷ ಮಂಜುನಾಥ್, ಪ್ರೌಢಶಾಲಾ ಮುಖ್ಯ ಶಿಕ್ಷಕಿ ನೀಲಮ್ಮ, ಎಸ್.ಡಿ.ಎಂಸಿ ಅಧ್ಯಕ್ಷ ಶಿವರಾಮು, ಎಂಡಿಸಿಸಿ ಬ್ಯಾಂಕ್ ಉದ್ಯೊಗಿ ಸೋಮಣ್ಣ, ಪ್ರಕಾಶ್, ಹಾಗೂ ಕಾಲೇಜಿನ ಉಪನ್ಯಾಸಕರು, ಶಿಕ್ಷಕ ವರ್ಗ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

Share this article