ಬೆಳಗಾವಿ ಜಿಲ್ಲೆಯಲ್ಲಿ ವರುಣನ ಆರ್ಭಟ; ಜನಜೀವನ ಅಸ್ತವ್ಯಸ್ತ

KannadaprabhaNewsNetwork |  
Published : Jul 21, 2024, 01:16 AM IST
ಬಳ್ಳಾರಿ ನಾಲಾದಿಂದ ಹೊಲಗದ್ದೆಗಳಿಗೆ ನೀರು ನುಗ್ಗಿರುವುದು | Kannada Prabha

ಸಾರಾಂಶ

ಬೆಳಗಾವಿ ಜಿಲ್ಲೆಯಲ್ಲಿ ಬಿಟ್ಟು ಬಿಡದೇ ಮಳೆ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಪಶ್ಚಿಮಘಟ್ಟ ಪ್ರದೇಶಗಳಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವುದರಿಂದ ಜಿಲ್ಲೆಯಲ್ಲಿ 13 ಸೇತುವೆ ಮುಳುಗಡೆಯಾಗಿವೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ಜಿಲ್ಲೆಯಲ್ಲಿ ಬಿಟ್ಟು ಬಿಡದೇ ಮಳೆ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಪಶ್ಚಿಮಘಟ್ಟ ಪ್ರದೇಶಗಳಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವುದರಿಂದ ಜಿಲ್ಲೆಯಲ್ಲಿ 13 ಸೇತುವೆ ಮುಳುಗಡೆಯಾಗಿವೆ.

ಸಂಕೇಶ್ವರ-ಗಡಹಿಂಗ್ಲೆಜ್, ಕುಲಗೋಡ- ಮಹಾಲಿಂಗಪುರ, ಲೊಳಸೂರ-ಶಿಂಗ್ಲಾಪುರ ಹಾಗೂ ಯರನಾಳ-ಹುಕ್ಕೇರಿ, ಚಿಕ್ಕೋಡಿ ಉಪವಿಭಾಗದಲ್ಲಿ ಬರುವ ಬೋಜ್-ಕರಜಗಾ, ಬೋಜವಾಡಿ-ನಿಪ್ಪಾಣಿ, ಮಲ್ಲಿಕವಾಡ-ದನವಾಡ, ಬಾರವಾಡ-ಕುನ್ನೂರ, ಬೋಜ-ಕುನ್ನೂರ, ಜಾತ್ಲಾಟ್-ಭೀವಶಿ, ರಾಯಬಾಗ ತಾಲೂಕಿನ ಭಾವನಸೌಂದತ್ತಿ- ಮಾಂಜರಿ, ಖಾನಾಪುರ-ಹೆಮ್ಮಡಗಾ ಸಂಪರ್ಕಿಸುವ ರಸ್ತೆ ಮುಳುಗಡೆಯಾಗಿವೆ. ಮುಳುಗಡೆ ಆದ ಸೇತುವೆ ಮೇಲೆ ಸಂಚಾರಕ್ಕೆ ನಿರ್ಬಂಧ, ಬ್ಯಾರಿಕೇಡ್ ಅಳವಡಿಸಲಾಗಿದೆ.ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಬೆಳಗಾವಿಯ ಜಾಂಬೋಟಿ, ಚೋರ್ಲಾ ಭಾಗದಲ್ಲಿ ಹಲವು ಸೇತುವೆಗಳು ಶಿಥಿಲಗೊಂಡಿವೆ. ಈ ಹಿನ್ನೆಲೆಯಲ್ಲಿ ಬೆಳಗಾವಿಯಿಂದ ಗೋವಾ ಸಂಚರಿಸುವ ಭಾರೀ ವಾಹನಗಳ ಸಂಚಾರಕ್ಕೆ ಬದಲಿ ಮಾರ್ಗ ಸೂಚಿಸಲಾಗಿದೆ. ಬೆಳಗಾವಿಯಿಂದ ತೆರಳುವವರು ಪೀರನವಾಡಿಯಿಂದ ಎಡಕ್ಕೆ ತಿರುವು ಪಡೆದುಕೊಂಡು, ಖಾನಾಪುರ ಮಾರ್ಗವಾಗಿ ಗೋವಾಕ್ಕೆ ಹೋಗುವಂತೆ ಬೆಳಗಾವಿ ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಸೂಚಿಸಿದ್ದಾರೆ.

ಭೂಕುಸಿತ; ಸಂಚಾರ ಸ್ಥಗಿತ:

ನಿರಂತರ ಮಳೆಯಿಂದ ಕಾರವಾರದಂತೆ ಗೋವಾ ಗಡಿಯಲ್ಲೂ ಭೂಕುಸಿತ ಉಂಟಾಗಿದೆ. ದೂಧ್​ ಸಾಗರ ದೇವಸ್ಥಾನದ ಸಮೀಪದ ಅನ್ಮೋಡ್‌ ಘಾಟ್​ನಲ್ಲಿ ಭಾರಿ ಭೂಕುಸಿತ ಉಂಟಾಗಿದ್ದು, ಬೆಳಗಾವಿ-ಗೋವಾ ಮಾರ್ಗದಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿದೆ. ರಸ್ತೆಯಲ್ಲಿ ಸಂಚಾರ ಸ್ಥಗಿತಗೊಂಡಿದೆ. ರಸ್ತೆ ಮೇಲೆ ಬಿದ್ದ ಬಂಡೆ ಮತ್ತು ಮಣ್ಣು ತೆರವು ಕಾರ್ಯಾಚರಣೆ ನಡೆಯುತ್ತಿದೆ.

ಪ್ರವಾಹ ಭೀತಿಯಲ್ಲಿ ಜನ:

ಮಹಾರಾಷ್ಟ್ರದ ಪಶ್ಚಿಮಘಟ್ಟ ಪ್ರದೇಶದಲ್ಲಿ ಮಳೆ ಅಬ್ಬರ ಮುಂದುವರಿದ ಹಿನ್ನೆಲೆಯಲ್ಲಿ ನಿಪ್ಪಾಣಿ ತಾಲೂಕಿನ ಹಲವು ಗ್ರಾಮಗಳಿಗೆ ನೆರೆಯ ಆತಂಕ ಶುರುವಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವುದರಿಂದ ದೂಧಗಂಗಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಕಾರದಗಾ ಗ್ರಾಮ ಹೊರವಲಯದಲ್ಲಿರುವ ಬಂಗಾಲಿಬಾಬಾ ದರ್ಗಾವನ್ನು ನೀರು ಸುತ್ತುವರೆದಿದೆ. ನೀರು ಇನ್ನೂ ಏರಿಕೆಯಾದರೆ ನದಿ ನೀರು ಗ್ರಾಮಕ್ಕೆ ನುಗ್ಗುವ ಸಾಧ್ಯತೆ. ಹೀಗಾಗಿ ಕಾರದಗಾ ಗ್ರಾಮದ ಜನರು ಪ್ರವಾಹದ ಭೀತಿಯಲ್ಲಿದ್ದಾರೆ.

ಕುಸಿದ ಶಾಲಾ ಕಟ್ಟಡ:

ರಾಕಸಕೊಪ್ಪ ಜಲಾಶಯ ಭರ್ತಿಯಾಗಿರುವುದರಿಂದ ಎರಡು ಗೇಟ್‌ಗಳ ಮೂಲಕ ನೀರನ್ನು ಮಾರ್ಕಂಡೇಯ ನದಿಗೆ ಹರಿಯಬಿಡಲಾಗಿದೆ. ಬೆಳಗಾವಿಯ ಹೊಲ ಗದ್ದೆಗಳಿಗೆ ಬಳ್ಳಾರಿ ನಾಲೆ ನುಗ್ಗಿ ಅವಾಂತರ ಸೃಷ್ಟಿಸಿಯಾಗಿದೆ. ಭತ್ತ, ಕಬ್ಬು, ಮೆಕ್ಕೆಜೋಳ ಬೆಳೆಗಳು ನೀರಲ್ಲಿ ನಿಂತಿವೆ. ಪ್ರತಿ ವರ್ಷ ಬಳ್ಳಾರಿ ನೆಲೆಯಿಂದ ಸಾವಿರಾರು ಎಕರೆ ಪ್ರದೇಶಕ್ಕೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗುತ್ತದೆ. ಬಳ್ಳಾರಿ ನಾಲಾ ನೀರು ಕ್ಷಣ ಕ್ಷಣಕ್ಕೂ ಹೆಚ್ಚಾಗುತ್ತಿರುವುದರಿಂದ ಬೆಳಗಾವಿ ನಗರಕ್ಕೆ ಹೊಂದಿಕೊಂಡಿರುವ ವಡಗಾಂವ, ಅನಗೋಳ, ಶಹಾಪುರ, ಹಳೆಯ ಬೆಳಗಾವಿಗೆ ಬಳ್ಳಾರಿ ನಾಲಾ ನೀರು ನುಗ್ಗುವ ಸಾಧ್ಯತೆ ಇದ್ದು, ಜನರಲ್ಲಿ ಆತಂಕ ಹೆಚ್ಚಿದೆ. ಬೆಳಗಾವಿ ತಾಲೂಕಿನ ಬಿಜಗರ್ಣಿಯಲ್ಲಿ ಸರ್ಕಾರಿ ಮರಾಠಿ ಮಾಧ್ಯಮ ಶಾಲೆಯಕಟ್ಟಡ ಕುಸಿದು ಬಿದ್ದಿದೆ. ಅದೃಷ್ಟವಶಾತ್‌ ಯಾವುದೇ ಪ್ರಾಣಾಪಾಯವಾಗಿಲ್ಲ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!