ರಾಜ್ಯಕ್ಕೇ ಮೊದಲ ಸ್ಥಾನ ಪಡೆದ ಸಂಜನಾಬಾಯಿಗೆ ಸನ್ಮಾನ

KannadaprabhaNewsNetwork | Published : Apr 10, 2025 1:17 AM

ಸಾರಾಂಶ

ಪಿಯುಸಿ ಫಲಿತಾಂಶದಲ್ಲಿ ರಾಜ್ಯಕ್ಕೇ ಮೊದಲ ಸ್ಥಾನ ಪಡೆದ ತಾಲೂಕಿನ ಗುಂಡಾ ಸ್ಟೇಶನ್ ವಾಸಿ ಎಲ್‌.ಆರ್. ಸಂಜನಾಬಾಯಿ, ಎರಡನೇ ಸ್ಥಾನ ಪಡೆದ ಹಗರಿಬೊಮ್ಮನಳ್ಳಿಯ ಕನ್ನಿಹಳ್ಳಿ ಗ್ರಾಮದ ಕೆ.ನಿರ್ಮಲ ಅವರಿಗೆ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಗೌರವಿಸಿದರು.

ಜಿಲ್ಲಾಡಳಿತದಿಂದ, ಶಾಸಕರು, ವಿವಿಧ ಸಂಘ-ಸಂಸ್ಥೆಗಳಿಂದ ಸನ್ಮಾನ

ಕನ್ನಡಪ್ರಭ ವಾರ್ತೆ ಹೊಸಪೇಟೆ

ಪಿಯುಸಿ ಫಲಿತಾಂಶದಲ್ಲಿ ರಾಜ್ಯಕ್ಕೇ ಮೊದಲ ಸ್ಥಾನ ಪಡೆದ ತಾಲೂಕಿನ ಗುಂಡಾ ಸ್ಟೇಶನ್ ವಾಸಿ ಎಲ್‌.ಆರ್. ಸಂಜನಾಬಾಯಿ, ಎರಡನೇ ಸ್ಥಾನ ಪಡೆದ ಹಗರಿಬೊಮ್ಮನಳ್ಳಿಯ ಕನ್ನಿಹಳ್ಳಿ ಗ್ರಾಮದ ಕೆ.ನಿರ್ಮಲ ಅವರಿಗೆ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಗೌರವಿಸಿದರು.

ನಂತರ ಮಾತನಾಡಿದ ಅವರು, ಈ ಇಬ್ಬರು ಬಾಲಕಿಯರ ಶಿಕ್ಷಣಕ್ಕೆ ಜಿಲ್ಲಾಡಳಿತ ಪ್ರೋತ್ಸಾಹ ನೀಡಲಿದೆ. ಅಲ್ಲದೇ, ಕಾಲೇಜಿನ ಶುಲ್ಕ ಕೂಡ ಭರಿಸಲಾಗುವುದು. ಎಲ್ಲಾ ಹಂತದಲ್ಲೂ ನೆರವು ನೀಡಲಾಗುವುದು ಎಂದರು.

ಸಂಜನಾಬಾಯಿ ತಂದೆ ರಾಮಾ ನಾಯ್ಕ, ತಾಯಿ ಕಾವೇರಿ ಬಾಯಿ, ಕೆ.ನಿರ್ಮಲ ತಾಯಿ ಗಿರಿಜಮ್ಮ ಇದ್ದರು.

ಶಾಸಕರಿಂದ ಸನ್ಮಾನ:

ದ್ವಿತೀಯ ಪಿಯುಸಿ ಕಲಾವಿಭಾಗದಲ್ಲಿ 600ಕ್ಕೆ 597 ಅಂಕ ಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿರುವ ವಿಜಯನಗರ ಜಿಲ್ಲೆ ಮರಿಯಮ್ಮನಹಳ್ಳಿಯ ಗುಂಡಾ ಸ್ಟೇಶನ್‌ ತಾಂಡಾದ ಸಂಜನಾಬಾಯಿ ಅವರ ಮನೆಗೆ ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಎನ್‌.ಟಿ. ಶ್ರೀನಿವಾಸ್ ಭೇಟಿ ನೀಡಿ ₹ 25000 ನಗದು ಹಾಗೂ ಲ್ಯಾಪ್‌ ಟ್ಯಾಪ್‌ ನೀಡಿ ಸತ್ಕರಿಸಿದರು.ಸಾಧನೆ ಮಾಡಲು ಬಡತನ ಎಂಬುದು ಅಡ್ಡಿ ಬರುವುದಿಲ್ಲ. ಗುರಿ ಒಂದಿದ್ದರೆ ಎಂತಹ ಕಷ್ಟಗಳನ್ನು ದಾಟಿ ಸಾಧಿಸಿ ತೋರಿಸಬಹುದು ಎಂಬುದಕ್ಕೆ ಸಂಜನಾ ಬಾಯಿ ರಾಜ್ಯಕ್ಕೆ ಮಾದರಿಯಾಗಿದ್ದಾರೆ. ಪಕ್ಕದ ತಾಲೂಕು ನಮ್ಮದಾಗಿದ್ದರೂ ನಮ್ಮ ತಂದೆಯವರಾದ ಮಾಜಿ ಶಾಸಕರು ದಿ. ಎನ್ ಟಿ. ಬೊಮ್ಮಣ್ಣನವರು ಈ ಕ್ಷೇತ್ರದ ಜನರಿಂದ ಆಯ್ಕೆಯಾದ ಋಣವು ಸದಾ ನಮ್ಮ ಮೇಲಿದೆ. ಹಾಗಾಗಿ ಸಂಜನಾ ಅವರ ಸಾಧನೆಯನ್ನು ಕೇಳಿದ ತಕ್ಷಣ ಅವರಿಗೆ ಭೇಟಿಯಾಗಬೇಕು ಎಂಬ ನಿರ್ಧಾರದೊಂದಿಗೆ ಗ್ರಾಮಕ್ಕೆ ಬಂದಿರುವೆ. ಇವರ ಮುಂದಿನ ವಿದ್ಯಾಭ್ಯಾಸಕ್ಕೆ ಸಮಸ್ಯೆ ಉಂಟಾಗದಂತೆ ಸದಾ ಸಹಾಯ ನೀಡುವೆ ಎಂದರು.

ಸನ್ಮಾನ:

ಬಂಜಾರ ಧರ್ಮಗುರು ಹಾಗೂ ಕೂಡ್ಲಿಗಿ ಡಿವೈಎಸ್ಪಿ ಮಲ್ಲೇಶ್‌ ದೊಡ್ಡಮನಿ, ಸಿಪಿಐ ವಿಕಾಸ ಲಮಾಣಿ, ಪಿಎಸ್‌ಐ ಮೌನೇಶ್‌ ರಾಠೋಡ್‌, ಎಎಸ್‌ಐ ಮೋತಿಲಾಲ್‌ ನಾಯ್ಕ ಸೇರಿದಂತೆ ಮತ್ತಿತರರು ಸಂಜನಾ ಬಾಯಿ ಮನೆಗೆ ಆಗಮಿಸಿ ಸನ್ಮಾನಿಸಿದರು.

Share this article