ಹಾಸನ: ನಗರದ ಸಂಜೀವಿನಿ ಸೌಹಾರ್ದ ಸಹಕಾರಿ ಬ್ಯಾಂಕಿನ 6 ನಿರ್ದೇಶಕರನ್ನು ದುರುದ್ದೇಶದಿಂದ ಅನರ್ಹಗೊಳಿಸಿದ್ದ ಆದೇಶಕ್ಕೆ ಬೆಂಗಳೂರಿನ ಸಹಕಾರ ಸಂಘಗಳ ನಿಬಂಧಕರ ನ್ಯಾಯಾಲಯವು ತಡೆ ನೀಡಿದೆ ಎಂದು ಬ್ಯಾಂಕ್ ಅಧ್ಯಕ್ಷ ಪರಮೇಶ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿ, ಶಾಸಕರಾಗಿದ್ದ ದಿ. ಎಚ್. ಎಸ್. ಪ್ರಕಾಶ್ ಅವರು ೨೦೦೮ರಲ್ಲಿ ಈ ಬ್ಯಾಂಕ್ ಸ್ಥಾಪನೆ ಮಾಡಲಾಗಿದ್ದು, ಇದರಲ್ಲಿ ೫೦೪ ಷೇರುದಾರರಿದ್ದಾರೆ. ಸಂಜೀವಿನಿ ಸಹಕಾರಿ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರಿಗೆ ತ್ವರಿತವಾಗಿ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುವುದು ಇದರ ಉದ್ದೇಶ, ಕ್ರಮೇಣ ಪ್ರಕಾಶ್ ಅವರ ಆರೋಗ್ಯ ಸರಿ ಇಲ್ಲದ ಕಾರಣ ೨೦೧೮ರಲ್ಲಿ ಹೊಸ ಆಡಳಿತ ಮಂಡಳಿ ರಚಿಸಿದರು. ಆದರೆ ೨೦೨೦ರಲ್ಲಿ ಸಂಜೀವಿನಿ ಸಹಕಾರಿ ಆಸ್ಪತ್ರೆಯ ನೂತನ ಆಡಳಿತ ಮಂಡಳಿಯವರು, ಕೆಲ ಚುನಾಯಿತ ನಿರ್ದೇಶಕರ ಈ ಬ್ಯಾಂಕಿನ ವ್ಯವಹಾರಗಳಿಗೆ ಅಡ್ಡಿಪಡಿಸಿ, ಸಾಲ ವಸೂಲಾತಿಗೂ ಅವಕಾಶ ನೀಡುತ್ತಿಲ್ಲ. ಅಲ್ಲದೆ ೨೦೨೦-೨೧ನೇ ಸಾಲಿನ ವಾರ್ಷಿಕ ಸಭೆ ನಡೆಸಲು ಹಾಗೂ ಲೆಕ್ಕ ಪರಿಶೋಧನಾ ವರದಿ ಸಲ್ಲಿಸಲೂ ಅವಕಾಶ ನೀಡಿಲ್ಲ. ೨೦೨೩ರಲ್ಲಿ ವಿಶೇಷ ಅಧಿಕಾರಿಗಳನ್ನು ನೇಮಿಸಿ ಅವರಿಗೆ ತಪ್ಪು ಮಾಹಿತಿ ನೀಡಿ ವಾರ್ಷಿಕ ಮಹಾಸಭೆ ನಡೆಸಲು ಹಾಗೂ ಲೆಕ್ಕ ಪರಿಶೋಧನಾ ವರದಿ ಸಲ್ಲಿಸದಂತೆ ಅಡ್ಡಿಪಡಿಸಿದ್ದಾರೆ ಎಂದು ದೂರಿದರು.ಅದಾದ ಬಳಿಕ ೨೦೨೪ ಡಿಸೆಂಬರ್‌ನಲ್ಲಿ ಬ್ಯಾಂಕ್ ನಿರ್ದೇಶಕ ಮಂಡಳಿಗೆ ಚುನಾವಣೆ ನಡೆದು ಹೊಸ ನಿರ್ದೇಶಕರು ಆಯ್ಕೆಯಾದರೂ ಅವರು ಆಡಳಿತ ನಡೆಸಲು ಬಿಡದೆ ಜಿ.ಕೆ. ಕುಮಾರಸ್ವಾಮಿ ಮೊದಲಾದವರು ೬ ಮಂದಿ ನಿರ್ದೇಶಕರು ಅನರ್ಹಗೊಳ್ಳುವಂತೆ ಮಾಡಿದ್ದರು. ಮಾತ್ರವಲ್ಲ ಬ್ಯಾಂಕ್ ಸೂಪರ್ ಸೀಡ್ ಮಾಡಿಸುವ ಬೆದರಿಕೆ ಹಾಕುತ್ತಾರೆ. ಅನರ್ಹಗೊಂಡಿದ್ದ ನಿರ್ದೇಶಕರು ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಪುರಸ್ಕರಿಸಿ ಸಹಕಾರ ಸಂಘಗಳ ನಿಬಂಧಕರು ತಡೆ ನೀಡಿದ್ದಾರೆ. ಮುಂದಿನ ವಿಚಾರಣೆ ಆಗಸ್ಟ್ ೧ ರಂದು ನಿಗದಿಯಾಗಿದ್ದು, ಚುನಾಯಿತ ನಿರ್ದೇಶಕರನ್ನು ದುರುದ್ದೇಶದಿಂದ ಅನರ್ಹಗೊಳ್ಳುವಂತೆ ಮಾಡಿದ್ದವರಿಗೆ ಮುಖಭಂಗ ಆಗಿದೆ. ಮುಂದೆಯೂ ನಮಗೆ ನ್ಯಾಯ ಸಿಗುವ ವಿಶ್ವಾಸ ಇದೆ ಎಂದು ಹೇಳಿದರು. ಇದು ಸಂಜೀವನಿ ಆಸ್ಪತ್ರೆಗೂ ಸಂಜೀವಿನಿ ಸೌಹಾರ್ದ ಸಹಕಾರಿ ಬ್ಯಾಂಕಿಗೂ ಸಂಬಂಧ ಇರುವುದಿಲ್ಲ ಎಂದು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಜೀವಿನಿ ಸೌಹಾರ್ದ ಸಹಕಾರಿ ಬ್ಯಾಂಕ್ ಮಾಜಿ ಅಧ್ಯಕ್ಷರಾದ ಗಿರೀಗೌಡ, ಗಣೇಶ್, ಅರುಣ್ ಕುಮಾರ, ಶಂಕರ್, ಸುರೇಶ್, ಪುಟ್ಟರಾಜು ಇತರರು ಇದ್ದರು.