ಹಾವೇರಿ: ಲೋಕಸಭೆ ಚುನಾವಣೆ ಮಧ್ಯೆಯೇ ಜಿಲ್ಲಾ ಕಾಂಗ್ರೆಸ್ ಘಟಕಕ್ಕೆ ನೂತನ ಸಾರಥಿಯನ್ನಾಗಿ ನಗರಸಭೆ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾಗಿರುವ ಸಂಜೀವಕುಮಾರ ನೀರಲಗಿ ಅವರನ್ನು ನೇಮಕ ಮಾಡಲಾಗಿದೆ.ರಾಜ್ಯದ ವಿವಿಧ ಜಿಲ್ಲೆಗಳ ಕಾಂಗ್ರೆಸ್ ಜಿಲ್ಲಾಧ್ಯಕ್ಷರ ಬದಲಾವಣೆ ಮಾಡಲಾಗಿದ್ದು, ಹಾವೇರಿ ಜಿಲ್ಲೆಯ ನೂತನ ಅಧ್ಯಕ್ಷರನ್ನಾಗಿ ಸಂಜೀವಕುಮಾರ ನೀರಲಗಿ ಅವರನ್ನು ನೇಮಕ ಮಾಡಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ ಆದೇಶ ಹೊರಡಿಸಿದ್ದಾರೆ. ನೀರಲಗಿ ಅವರು ಜಿಲ್ಲಾ ಕಾಂಗ್ರೆಸ್ ಘಟಕದ ಪ್ರಧಾನ ಕಾರ್ಯದರ್ಶಿ ಸೇರಿದಂತೆ ವಿವಿಧ ಜವಾಬ್ದಾರಿಗಳನ್ನು ನಿಭಾಯಿಸಿದ್ದಾರೆ. ನಗರಸಭೆಯ ಹಾಲಿ ಸದಸ್ಯರೂ ಆಗಿರುವ ಅವರು, ರೆಡ್ ಕ್ರಾಸ್ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕ್ರಿಯಾಶೀಲ ನಾಯಕರಾಗಿ, ಸಂಘಟನಾ ಚತುರರಾಗಿ, ಯುವಕರ ಪ್ರೇರಣಾ ಶಕ್ತಿಯಾಗಿರುವ ನೀರಲಗಿ ಪಕ್ಷದ ಎಲ್ಲಾ ಮುಖಂಡರು ಹಾಗೂ ಕಾರ್ಯಕರ್ತರನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಸಾಮರ್ಥ್ಯ ಹೊಂದಿದ್ದಾರೆ. ಹೀಗಾಗಿ ಸಂಜೀವಕುಮಾರ ನೀರಲಗಿ ಅವರಿಗೆ ಜಿಲ್ಲೆಯ ಹಾಗೂ ರಾಜ್ಯದ ಕಾಂಗ್ರೆಸ್ ಪಕ್ಷದ ಮುಖಂಡರ ಸಹಕಾರ ಇದ್ದು, ಪಕ್ಷದ ಸಂಘಟನೆಯನ್ನು ಇನ್ನಷ್ಟು ಬೆಳೆಸುವ ನಿಟ್ಟನಲ್ಲಿ ಕಾಂಗ್ರೆಸ್ ಹೈಕಮಾಂಡ್ ಜಿಲ್ಲಾಧ್ಯಕ್ಷರಾಗಿ ನೇಮಕ ಮಾಡಿದೆ.
ನನ್ನನ್ನು ಕಾಂಗ್ರೆಸ್ ಜಿಲ್ಲಾಧ್ಯಕ್ಷರನ್ನಾಗಿ ನೇಮಕ ಮಾಡಲು ಸಹಕಾರ ನೀಡಿದ ಸಚಿವರಿಗೆ, ಜಿಲ್ಲೆಯ ಎಲ್ಲಾ ಶಾಸಕರಿಗೆ ಹಾಗೂ ಪಕ್ಷದ ಮುಖಂಡರಿಗೆ ಧನ್ಯವಾದಗಳು. ಪಕ್ಷದ ಹಿರಿಯ ನಾಯಕರು, ಮುಖಂಡರು, ಕಾರ್ಯಕರ್ತರ ಸಹಕಾರದೊಂದಿಗೆ ಪಕ್ಷವನ್ನು ಮುನ್ನಡೆಸುತ್ತೇನೆ ಎಂದು ನೂತನ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಹೇಳಿದರು.