ಸೋರುತಿದೆ ಶಂಕರಿಕೊಪ್ಪ ಶಾಲೆ!

KannadaprabhaNewsNetwork | Published : Jul 23, 2024 12:36 AM

ಸಾರಾಂಶ

ಕೊಠಡಿ ನಿರ್ಮಾಣ ಕಾಮಗಾರಿ ಸಮಯದಲ್ಲೇ ಸಂಬಂಧಪಟ್ಟ ಇಲಾಖೆಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಕಟ್ಟಡದ ದುಸ್ಥಿತಿ ಕುರಿತಾಗಿ ಕಳೆದ ೩ ವರ್ಷಗಳಿಂದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರೂ ಕ್ರಮ ಕೈಗೊಂಡಿಲ್ಲ

ಕನ್ನಡಪ್ರಭ ವಾರ್ತೆ ಸೊರಬ

ಶಿಥಿಲಗೊಂಡ ಶಾಲಾ ಕಟ್ಟಡ, ಅಧಿಕ ಮಳೆಯಿಂದ ಚಾವಣಿಯಷ್ಟೇ ಅಲ್ಲದೆ ಗೋಡೆಯೂ ಒದ್ದೆ, ವಿದ್ಯುತ್ ಫ್ಯೂಸ್‌ ಅಳವಡಿಸಿರುವ ಗೋಡೆ ಸಹ ಹಸಿಯಾಗಿರುವುದರಿಂದ ವಿದ್ಯುತ್‌ ಅವಘಡ ಸಂಭವಿಸುವ ಆತಂಕ. ಏನಾದರೂ ಅನಾಹುತವಾದೀತೆಂಬ ದುಗುಡ ಶಾಲಾ ಮಕ್ಕಳ ಪೋಷಕರದ್ದು. ಇದು ಶಿಕ್ಷಣ ಸಚಿವ ಸ್ವಕ್ಷೇತ್ರ ಸೊರಬ ತಾಲೂಕಿನ ಶಂಕರಿಕೊಪ್ಪದಲ್ಲಿರುವ ಶಾಲೆಯ ಚಿತ್ರಣ.

ತಾಲೂಕಿನ ಶಕುನವಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಶಂಕರಿಕೊಪ್ಪ ಗ್ರಾಮ ಸೊರಬ ಪಟ್ಟಣದಿಂದ ೩೬ ಕಿ.ಮೀ. ದೂರದಲ್ಲಿದೆ. ಸುಮಾರು ೧೨೦ ಮನೆಗಳಿವೆ. ಶಾಲಾಭಿವೃದ್ಧಿ ಸಮಿತಿ ಅನುದಾನದ ಹಣದಲ್ಲಿ ೨೦೧೨-೧೩ರಲ್ಲಿ ₹೩.೮೦ ಲಕ್ಷ ವೆಚ್ಚದಲ್ಲಿ ಎರಡು ಕೊಠಡಿಗಳು ನಿರ್ಮಾಣವಾಗಿ ಪ್ರಾರಂಭಗೊಂಡ ಇಲ್ಲಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ೩೦ ವಿದ್ಯಾರ್ಥಿಗಳಿದ್ದಾರೆ. ಮುಖ್ಯ ಶಿಕ್ಷಕ, ಒಬ್ಬ ಸಹ ಶಿಕ್ಷಕರಿದ್ದಾರೆ.

ಇಲ್ಲಿನ ಶಾಲಾ ಕಟ್ಟಡ ಕಳೆದ ೪ ವರ್ಷಗಳಿಂದ ಸ್ವಲ್ಪ ಮಳೆ ಬಂದರೂ ಸೋರುತ್ತಿದ್ದು, ಕಳೆದ ಹತ್ತು ದಿನಗಳಿಂದ ನಿರಂತರ ಮಳೆ ಸುರಿಯುತ್ತಿರುವುದರಿಂದ ಗೋಡೆಗಳೂ ಸಂಪೂರ್ಣ ಹಸಿಯಾಗಿವೆ, ವಿದ್ಯುತ್ ಅವಘಡ ಸಂಭಿಸವ ಅಪಾಯವೂ ಇದೆ. ಇದೂ ಅಲ್ಲದೇ ಕಬ್ಬಿಣದ ಬಾಗಿಲು ಫ್ಯೂಸ್‌ಗೆ ತಾಗುವ ರೀತಿಯಲ್ಲಿ ಅಳವಡಿಸಿದ್ದು ಆತಂಕಕ್ಕೆ ಮತ್ತೊಂದು ಕಾರಣವಾಗಿದೆ. ಭಾರಿ ಮಳೆಯಿಂದ ನಾಲ್ಕು ದಿನಗಳ ಶಾಲಾ ರಜೆ ಮುಗಿದು ಈಗ ಮತ್ತೆ ಶಾಲೆ ಪ್ರಾರಂಭಗೊಂಡಿದ್ದು, ವಿದ್ಯಾರ್ಥಿಗಳು ಹಾಗೂ ಪೋಷಕರ ಭಯಕ್ಕೂ ಕಾರಣವಾಗಿದೆ.

ಕೊಠಡಿ ನಿರ್ಮಾಣ ಕಾಮಗಾರಿ ಸಮಯದಲ್ಲೇ ಸಂಬಂಧಪಟ್ಟ ಇಲಾಖೆಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಕಟ್ಟಡದ ದುಸ್ಥಿತಿ ಕುರಿತಾಗಿ ಕಳೆದ ೩ ವರ್ಷಗಳಿಂದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರೂ ಕ್ರಮ ಕೈಗೊಂಡಿಲ್ಲ. ಹೊಸ ಕೊಠಡಿ ನಿರ್ಮಾಣ ಹಾಗೂ ಈಗಿನ ಕೊಠಡಿಗಳ ದುರಸ್ತಿಗೆ ಇತ್ತೀಚೆಗೆ ಗ್ರಾಮಕ್ಕೆ ಭೇಟಿ ನೀಡಿದ್ದ ಶಿಕ್ಷಣ ಸಚಿವ ಮಧು ಬಂಗಾರಪ್ಪರಿಗೆ ಮನವಿ ಮಾಡಿದ್ದು, ಕಟ್ಟಡ ನೆಲಸಮ ಮಾಡಿ ನೂತನ ಕಟ್ಟಡ ನಿರ್ಮಿಸಿಕೊಡುವ ಭರವಸೆ ನೀಡಿದ್ದರು. ಆದರೆ ಯಾವುದೂ ಈಡೇರಿಲ್ಲ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಶಾಲೆಗೆ ಕಾಂಪೌಂಡ್ ಇಲ್ಲ

ಕಳೆದ ೨೦೨೨-೨೩ರಲ್ಲಿ ಶಕುನವಳ್ಳಿ ಗ್ರಾಮ ಪಂಚಾಯ್ತಿಯಿಂದ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ಸುಮಾರು ೭೦ ಮೀಟರ್‌ ಕಾಂಪೌಂಡ್ ನಿರ್ಮಾಣಕ್ಕೆ ₹೩ ಲಕ್ಷ ಬಿಡುಗಡೆಯಾಗಿದ್ದರೂ ಕಾಮಗಾರಿ ನಡೆದಿಲ್ಲ. ಬರೀ ನಾಮಫಲಕದಲ್ಲಿ ಮಾತ್ರ ಕಾಂಪೌಂಡ್ ಬಗ್ಗೆ ಮಾಹಿತಿ ಇದೆ. ಇನ್ನು ಕೆಲವು ವರ್ಷಗಳ ಹಿಂದೆ ನಿರ್ಮಾಣವಾದ ಶೌಚಾಲಯ ಬಿರುಕು ಬಿಟ್ಟು ಬೀಳುವ ಹಂತಕ್ಕೆ ತಲುಪಿವೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ಈಗಿರುವ ಕೊಠಡಿ ದುರಸ್ತಿಪಡಿಸಿ, ಹೊಸ ಕೊಠಡಿ ಗುಣಮಟ್ಟದಿಂದ ನಿರ್ಮಿಸಲು ಕ್ರಮ ಕೈಗೊಳ್ಳಬೇಕು.

ಶ್ರೀಕಾಂತ್ ಶಂಕರಿಕೊಪ್ಪ, ಎಸ್‌ಡಿಎಂಸಿ ಅಧ್ಯಕ್ಷ, ಸಕಿಪ್ರಾ ಶಾಲೆ

ಶಾಲೆಯಲ್ಲಿ ಅನಾಹುತ ಸಂಭವಿಸುವ ಮೊದಲು ಹೊಸ ಕೊಠಡಿ ನಿರ್ಮಾಣ ಮಾಡಿಕೊಡಬೇಕು. ಶಾಲಾ ಕಟ್ಟಡ ಸೋರುತ್ತಿದೆ. ಸರಿಯಾಗಿ ಪಾಠವನ್ನು ಕೇಳಲು ಸಾಧ್ಯವಾಗುತ್ತಿಲ್ಲ. ನೀರಿನಿಂದ ನಮ್ಮ ಪೀಠೋಪಕರಣ ಹಾಳಾಗುತ್ತಿವೆ. ಆರೋಗ್ಯ ಕೂಡಾ ಹದಗೆಡುತ್ತಿದೆ.

ರಶ್ಮಿ, ವಿದ್ಯಾರ್ಥಿನಿ

Share this article