ಕನ್ನಡಪ್ರಭ ವಾರ್ತೆ ಶ್ರೀಮಂಗಲ
ಪಾಲಿಬೆಟ್ಟದಲ್ಲಿ ಕಾಡಾನೆ ದಾಳಿಗೆ ತುತ್ತಾಗಿ ತೀವ್ರ ಗಾಯಗೊಂಡು 16 ದಿನಗಳಿಂದ ಮೈಸೂರು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿ ಚಿಕಿತ್ಸೆ ಫಲಗಾರಿಯಾಗದೆ ಶುಕ್ರವಾರ ಮೃತಪಟ್ಟ ಮಂಜುನಾಥ್ (ಮಂಜು) ಅವರ ಕುಟುಂಬವನ್ನು ಮಂಗಳವಾರ ರಾಜ್ಯ ವನ್ಯಜೀವಿ ಸಂರಕ್ಷಣಾ ಮಂಡಳಿ ಸದಸ್ಯ ಮೇರಿಯಂಡ ಸಂಕೇತ್ ಪೂವಯ್ಯ ಅವರು ಭೇಟಿ ಮಾಡಿ ಸಾಂತ್ವನ ಹೇಳಿದರು.ಪಾಲಿಬೆಟ್ಟದಲ್ಲಿರುವ ಮಂಜುನಾಥ್ ಅವರ ಮನೆಗೆ ಭೇಟಿ ನೀಡಿದ ಅವರು ತಾಯಿ ಹಾಗೂ ಪತ್ನಿಯನ್ನು ಭೇಟಿ ಮಾಡಿದರು. ಮೈಸೂರು ಆಸ್ಪತ್ರೆಯಲ್ಲಿ ಅತ್ಯುತ್ತಮ ಮಟ್ಟದ ಚಿಕಿತ್ಸೆ ನೀಡಿ ಮಂಜುನಾಥ್ ಅವರನ್ನು ಉಳಿಸಿಕೊಳ್ಳಲು ಎಲ್ಲ ಪ್ರಯತ್ನ ನಡೆಸಿದರೂ ಅದು ವಿಫಲವಾಗಿರುವುದಕ್ಕೆ ಸಂಕೇತ್ ಪೂವಯ್ಯ ಅವರು ತೀವ್ರ ನೋವು ವ್ಯಕ್ತಪಡಿಸಿದರು.ಚಿಕಿತ್ಸೆಗೆ ಮಂಜುನಾಥ್ ಅವರು ಮೈಸೂರು ಆಸ್ಪತ್ರೆಗೆ ದಾಖಲಾದ ನಂತರ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದು ಅತ್ಯುತ್ತಮ ಚಿಕಿತ್ಸೆ ಒದಗಿಸಲಾಯಿತು. ಆದರೆ ಬೆನ್ನುಹುರಿಗೆ ಉಂಟಾದ ಗಾಯದ ಪರಿಣಾಮ ಬಹು ಅಂಗಾಂಗ ವೈಫಲ್ಯದಿಂದ ಮಂಜುನಾಥ್ ಅವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟರು ಎಂದು ಅವರು ಬೇಸರ ವ್ಯಕ್ತಪಡಿಸಿದರು.ಜನಪ್ರತಿನಿಧಿಗಳು, ಅರಣ್ಯ ಇಲಾಖೆ, ಆಸ್ಪತ್ರೆಯ ವೈದ್ಯರು ಶಕ್ತಿ ಮೀರಿ ಮಂಜುನಾಥ್ ಪ್ರಾಣ ಉಳಿಸಲು ನೆರವು ಹಾಗೂ ಪ್ರಯತ್ನ ಪಟ್ಟಿದ್ದಾರೆ. ಅದರ ಬಗ್ಗೆ ಸಮಾಧಾನ ಇದೆ ಎಂದು ಕುಟುಂಬಸ್ಥರು ಹೇಳಿದರು.
ಮೃತರ ಕುಟುಂಬದವರ ಖಾತೆಗೆ ಒಂದು ವಾರದೊಳಗೆ ಸರ್ಕಾರದಿಂದ ಸಲ್ಲಬೇಕಾದ ಎಲ್ಲ ಪರಿಹಾರಗಳನ್ನು ಪಾವತಿಸಬೇಕು ಎಂದು ಮುಖ್ಯಮಂತ್ರಿಗಳ ಕಾನೂನು ಸಲಹಾಕಾರರು ಹಾಗೂ ವಿರಾಜಪೇಟೆ ಕ್ಷೇತ್ರ ಶಾಸಕ ಎ.ಎಸ್. ಪೊನ್ನಣ್ಣ ಅವರು ಸೂಚನೆ ನೀಡಿದ್ದು, ಪಾಲಿಬೆಟ್ಟ ಭಾಗದಲ್ಲಿ ಕಾಡಾನೆ ಕಾರ್ಯಾಚರಣೆಗೆ ವಿಶೇಷ ತಂಡವನ್ನು ರಚನೆ ಮಾಡಿ ಕಾರ್ಯಾಚರಣೆ ಹಮ್ಮಿಕೊಳ್ಳುವಂತೆ ಅವರು ಸೂಚನೆ ನೀಡಿರುವುದಾಗಿ ಸಂಕೇತ್ ಪೂವಯ್ಯ ಅವರು ತಿಳಿಸಿದರು.ಈ ಸಂದರ್ಭ ಪಾಲಿಬೆಟ್ಟ ವಲಯ ಕಾಂಗ್ರೆಸ್ ಅಧ್ಯಕ್ಷ ಸಣ್ಣುವಂಡ ರತ್ನ ಸುಬ್ಬಯ್ಯ, ಮಾಜಿ ತಾ. ಪಂ. ಸದಸ್ಯ ಜಾನ್ಸನ್ ಮತ್ತಿತರರು ಹಾಜರಿದ್ದರು.