ಸಮಾಜ ಒಗ್ಗೂಡಿಸಲು ಸಂಕ್ರಾಂತಿ ಸಂಭ್ರಮ ಸಹಕಾರಿ: ಶೆಟ್ಟರ

KannadaprabhaNewsNetwork | Published : Jan 16, 2024 1:48 AM

ಸಾರಾಂಶ

ಬಣಜಿಗ ಸಮಾಜ ಬಾಂಧವರು ಎಲ್ಲರನ್ನೂ ಸಮನಾಗಿ ನೋಡುವುದು, ಒಗ್ಗೂಡಿಕೊಂಡು ಹೋಗುವ ಶಕ್ತಿ ಹೊಂದಿದ್ದಾರೆ. ಇಂದಿಗೂ ಸಮಾನತೆಯ ಹರಿಕಾರ ಬಸವಣ್ಣವರ ತತ್ವ, ಆದರ್ಶಗಳನ್ನು ಪಾಲಿಸಿಕೊಂಡು ಮುನ್ನಡೆಯುತ್ತಿದ್ದೇವೆ ಎಂದು ವಿಪ ಸದಸ್ಯ ಜಗದೀಶ ಶೆಟ್ಟರ ಹೇಳಿದರು.

ಹುಬ್ಬಳ್ಳಿ: ವೀರಶೈವ ಲಿಂಗಾಯತ ಸಮಾಜ ಒಂದುಗೂಡಿಸಲು ಸಂಕ್ರಾಂತಿ ಸಂಭ್ರಮ ಸಹಕಾರಿಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ, ವಿಪ ಸದಸ್ಯ ಜಗದೀಶ ಶೆಟ್ಟರ ಹೇಳಿದರು.

ಸೋಮವಾರ ಗೋಕುಲ ರಸ್ತೆಯಲ್ಲಿರುವ ಚವ್ಹಾಣ ಗ್ರೀನ್‌ ಗಾರ್ಡನ್‌ನಲ್ಲಿ ಹುಬ್ಬಳ್ಳಿ ತಾಲೂಕು ಬಣಜಿಗ ಬಂಧುಗಳಿಂದ ಹಮ್ಮಿಕೊಳ್ಳಲಾಗಿದ್ದ ಸಂಕ್ರಾಂತಿ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಬಣಜಿಗ ಸಮಾಜ ಬಾಂಧವರು ಎಲ್ಲರನ್ನೂ ಸಮನಾಗಿ ನೋಡುವುದು, ಒಗ್ಗೂಡಿಕೊಂಡು ಹೋಗುವ ಶಕ್ತಿ ಹೊಂದಿದ್ದಾರೆ. ಇಂದಿಗೂ ಸಮಾನತೆಯ ಹರಿಕಾರ ಬಸವಣ್ಣವರ ತತ್ವ, ಆದರ್ಶಗಳನ್ನು ಪಾಲಿಸಿಕೊಂಡು ಮುನ್ನಡೆಯುತ್ತಿದ್ದೇವೆ ಎಂದರು.

ಕೇಂದ್ರಕ್ಕೆ ಮನವಿ

ವೀರಶೈವ ಲಿಂಗಾಯತದ ಎಲ್ಲ ಒಳಪಂಗಡಗಳನ್ನು ಸೇರಿಸಿ ಕೇಂದ್ರ ಸರ್ಕಾರದ ಹಿಂದುಳಿದ ಪಂಗಡಗಳ ಲಿಸ್ಟ್‌ಗೆ ಸೇರ್ಪಡೆಗೊಳಿಸಲು ಪ್ರಯತ್ನಿಸಲಾಗುವುದು. ಈ ಕುರಿತು ರಾಜ್ಯದಿಂದಲೂ ಪ್ರತ್ಯೇಕ ಪ್ರಸ್ತಾವನೆ ಸಲ್ಲಿಸಿ ಒತ್ತಾಯಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.

ಸಮೀಕ್ಷೆ ನಡೆಸಿ

ಬಣಜಿಗ ಸಮಾಜ ಬಾಂಧವರು ರಾಜ್ಯ, ಜಿಲ್ಲೆ, ತಾಲೂಕುಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದರೂ ಇಂದಿಗೂ ದೊರೆಯಬೇಕಾದ ಪ್ರಾತಿನಿಧ್ಯ ಸಮರ್ಪಕವಾಗಿ ದೊರೆಯುತ್ತಿಲ್ಲ. ಹಾಗಾಗಿ ಸಮಾಜ ಬಾಂಧವರೇ ಸಮೀಕ್ಷೆ ನಡೆಸುವ ಕಾರ್ಯ ಕೈಗೊಳ್ಳಬೇಕಿದೆ. ಅಲ್ಲದೇ ತಾಲೂಕು ಬಣಜಿಗ ಸಂಘ ಇಂತಹ ಮಾದರಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ಇನ್ನಾದರೂ ಸಮಾಜದ ರಾಜ್ಯ ಘಟಕ ಇದನ್ನು ನೋಡಿಯಾದರೂ ಬದಲಾವಣೆ ತರಲು ಶ್ರಮಿಸಲಿ ಎಂದರು.

ಸಾನ್ನಿಧ್ಯ ವಹಿಸಿದ್ದ ರಾಯನಾಳ ವಿರಕ್ತಮಠದ ಅಭಿನವ ರೇವಣಸಿದ್ಧ ಮಹಾಂತ ಶ್ರೀಗಳು ಆಶೀರ್ವಚನ ನೀಡಿ, ಬಣಜಿಗ ಸಮಾಜ ಬಾಂಧವರು ದಾನ, ಧರ್ಮಕ್ಕೆ ಎತ್ತಿದ ಕೈ. ವಿರಕ್ತ ಮಠಗಳ ಬೆನ್ನೆಲುಬಾಗಿ ನಿಂತು ಮುನ್ನಡೆಸಿಕೊಂಡು ಬಂದ ಕೀರ್ತಿ ಸಮಾಜಕ್ಕೆ ಸಲ್ಲುತ್ತದೆ. ಬಣಜಿಗರು ಕಲ್ಮಶವಿಲ್ಲದ ಮನಸ್ಸುಳ್ಳುವರು ಎಂದರು.

ಅತಿಥಿಗಳಾಗಿ ಆಗಮಿಸಿದ್ದ ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ಸರ್ಕಾರ ಜಾತಿಗಣತಿ ಪಟ್ಟಿ ಹೊರಡಿಸಲು ಮುಂದಾಗಿದೆ. ಒಂದು ವೇಳೆ ಜಾತಿಗಣತಿ ಹೊರಬಂದರೆ ವೀರಶೈವ ಲಿಂಗಾಯತರಿಗೆ ದೊಡ್ಡ ಪೆಟ್ಟು ಬೀಳುವುದಂತೂ ಖಚಿತ. ನಮ್ಮಲ್ಲಿನ ಸಮಾಜ ಬಾಂಧವರೇ ಜಾತಿ ಕಾಲಂನಲ್ಲಿ ವೀರಶೈವ ಲಿಂಗಾಯತ ಎಂದು ಬರೆಸದೇ ಬೇರೆ ಬೇರೆ ಉಪಪಂಗಡಗಳ ಹೆಸರನ್ನು ಬರಿಸಿರುವುದರಿಂದಾಗಿ ಈ ಸಮಸ್ಯೆ ಉದ್ಭವವಾಗಿದೆ. ಇನ್ನು ಮುಂದಾದರೂ ನಾವೆಲ್ಲರೂ ಒಗ್ಗೂಡಬೇಕಿದೆ. ಸಮಾಜದ ರಾಜ್ಯ ಕಮಿಟಿ ನಿಷ್ಕ್ರೀಯವಾಗಿದ್ದು, ಹಿರಿಯರು ಸೇರಿ ಮುಂದಿನ ದಿನಗಳಲ್ಲಿ ಇರುವ ರಾಜ್ಯಕಮಿಟಿಯಲ್ಲಿ ಅನರ್ಹರನ್ನು ತೆಗೆದುಹಾಕಿ ಸಂಘಟನೆಯನ್ನು ಬಲಪಡಿಸುವಂತೆ ಸಲಹೆ ನೀಡಿದರು.

ಭಂಡಿವಾಡ ಗಿರೀಶ ಆಶ್ರಮದ ಡಾ. ಎ.ಸಿ. ವಾಲಿ ಮಹಾರಾಜರು ಆಶೀರ್ವಚನ ನೀಡಿದರು. ಉದ್ಯಮಿ ರಾಜು ಶೀಲವಂತರ ಅಧ್ಯಕ್ಷತೆ ವಹಿಸಿದ್ದರು. ಕೆಎಲ್‌ಇ ನಿರ್ದೇಶಕ ಶಂಕರಣ್ಣ ಮುನವಳ್ಳಿ, ಉದ್ಯಮಿ ವಿಜಯಕುಮಾರ ಶೆಟ್ಟರ, ವೀರೇಂದ್ರ ಕೌಜಲಗಿ, ಆನಂದ ಉಪ್ಪಿನ, ಎಸ್‌.ವಿ. ಅಂಗಡಿ, ತಾರಾದೇವಿ ವಾಲಿ ಸೇರಿದಂತೆ ಸಮಾಜ ಬಾಂಧವರು ಪಾಲ್ಗೊಂಡಿದ್ದರು.

ಸಂಕ್ರಾಂತಿಗೆ ಮೆರಗು ತಂದ ಮೆರವಣಿಗೆ

ಕಾರ್ಯಕ್ರಮದ ಪೂರ್ವದಲ್ಲಿ ಗೋಕುಲ ರಸ್ತೆಯಿಂದ ಗಾರ್ಡನ್‌ ವರೆಗೆ ಚಕ್ಕಡಿ ಮೆರವಣಿಗೆ ಹಮ್ಮಿಕೊಳ್ಳಲಾಯಿತು. ಸಂಜೆಯ ವರೆಗೂ ಮಕ್ಕಳಿಗಾಗಿ ವಿಶೇಷ ಗ್ರಾಮೀಣ ಕ್ರೀಡೆಗಳು, ಸಾಂಸ್ಕೃತಿಕ ಕಾರ್ಯಕ್ರಮ, ಜಾನಪದ ಗೀತೆ, ನಗೆಹಬ್ಬ, ಚಕ್ಕಡಿ, ಟ್ರ್ಯಾಕ್ಟರ್‌, ಕುದುರೆ ಸವಾರಿ ಸಂಕ್ರಾಂತಿ ಸಂಭ್ರಮಕ್ಕೆ ಮೆರುಗು ತಂದಿತು. ಪುರುಷರು ಧೋತಿ, ನೆಹರು ಶರ್ಟ್‌, ಶೆಟ್ಟರ ಟೊಪ್ಪಿಗೆ ಹಾಗೂ ಕರಿ ಕೋಟ್‌ ಧರಿಸಿದ್ದರೆ, ಮಹಿಳೆಯರು ಇಳಕಲ್ ಸೀರೆ ಹಾಗೂ ಸಾಂಪ್ರದಾಯಿಕ ಅಲಂಕಾರದೊಂದಿಗೆ ಕಂಗೊಳಿಸಿದರು.

ವೇದಿಕೆಯಲ್ಲಿದ್ದೂ ಮಾತನಾಡದ ಗುರು- ಶಿಷ್ಯ

ಬಣಜಿಗ ಸಮಾಜ ಏರ್ಪಡಿಸಿದ್ದ ಸಂಕ್ರಾಂತಿ ಸಂಭ್ರಮದಲ್ಲಿ ರಾಜಕೀಯದಲ್ಲಿ ಒಂದು ಕಾಲದಲ್ಲಿ ಗುರು- ಶಿಷ್ಯರಾಗಿದ್ದ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌- ಶಾಸಕ ಮಹೇಶ ಟೆಂಗಿನಕಾಯಿ ವೇದಿಕೆ ಹಂಚಿಕೊಂಡಿದ್ದರು. ಆದರೆ ಪರಸ್ಪರ ಒಬ್ಬರಿಗೊಬ್ಬರು ಮಾತನಾಡಲಿಲ್ಲ.

Share this article