ಸೊಗಲ ಸೋಮೇಶ್ವರನ ಕ್ಷೇತ್ರದಲ್ಲಿ ಸಂಕ್ರಾಂತ್ರಿ ಸಂಭ್ರಮ

KannadaprabhaNewsNetwork |  
Published : Jan 15, 2025, 12:47 AM IST
ಸೊಗಲಕ್ಷೇತ್ರದಲ್ಲಿ ಮಂಗಳವಾರ ದೇವಸ್ಥಾನದಲ್ಲಿ ಮಕರ ಸಂಕ್ರಮಣ ನಿಮಿತ್ತ ಸಾವಿರಾರು ಜನರು ಪುಣ್ಯ ಸ್ನಾನ ಮಾಡಿದರು. | Kannada Prabha

ಸಾರಾಂಶ

ದಕ್ಷಿಣ ಕಾಶಿಯಾದ ಉತ್ತರ ಕರ್ನಾಟಕ ಭಾಗದಲ್ಲಿ ಸೊಗಲಸೋಮೇಶ್ವರನ ಕ್ಷೇತ್ರದಲ್ಲಿ ಮಂಗಳವಾರ ಪ್ರಕೃತಿದತ್ತವಾದ ಎರಡು ಧುಮುಕುತ್ತಿರುವ ಜಲಪಾತದಲ್ಲಿ ಎಳ್ಳು, ಹರಿಶಿನ ಮೈಗೆ ಹಚ್ಚಿಕೊಂಡು ಸ್ನಾನ ಮಾಡಿ ಸಾವಿರಾರು ಭಕ್ತರು ಕರ್ನಾಟಕ ಸೇರಿದಂತೆ ಹೊರ ರಾಜ್ಯಗಳಿಂದ ಆಗಮಿಸಿದ್ದ ಭಕ್ತ ಸಮೂಹ, ಸಾಗರೋಪಾದಿಯಲ್ಲಿ ಹರಿದು ಬಂದು ದೇವರ ದರ್ಶನ ಪಡೆದರು.

ಕನ್ನಡಪ್ರಭ ವಾರ್ತೆ ಬೈಲಹೊಂಗಲ

ದಕ್ಷಿಣ ಕಾಶಿಯಾದ ಉತ್ತರ ಕರ್ನಾಟಕ ಭಾಗದಲ್ಲಿ ಸೊಗಲಸೋಮೇಶ್ವರನ ಕ್ಷೇತ್ರದಲ್ಲಿ ಮಂಗಳವಾರ ಪ್ರಕೃತಿದತ್ತವಾದ ಎರಡು ಧುಮುಕುತ್ತಿರುವ ಜಲಪಾತದಲ್ಲಿ ಎಳ್ಳು, ಹರಿಶಿನ ಮೈಗೆ ಹಚ್ಚಿಕೊಂಡು ಸ್ನಾನ ಮಾಡಿ ಸಾವಿರಾರು ಭಕ್ತರು ಕರ್ನಾಟಕ ಸೇರಿದಂತೆ ಹೊರ ರಾಜ್ಯಗಳಿಂದ ಆಗಮಿಸಿದ್ದ ಭಕ್ತ ಸಮೂಹ, ಸಾಗರೋಪಾದಿಯಲ್ಲಿ ಹರಿದು ಬಂದು ದೇವರ ದರ್ಶನ ಪಡೆದರು.

ಎಲ್ಲಿ ನೋಡಿದರಲ್ಲಿ ಜನಸಾಗರದಿಂದ ಕ್ಷೇತ್ರ ಕಿಕ್ಕಿರಿದಿತ್ತು. ಪ್ರಕೃತಿ ಸೌಂದರ್ಯ, ಅಂದವಾದ ಗುಡ್ಡ್ ಬೆಟ್ಟಗಳು, ಜಲಪಾತಗಳು ಆಕರ್ಷಿಣೀಯವಾಗಿ ಗೋಚರಿಸಿದವು. ಬಾಳಿಯ ದಿಂಡಿನ ತೆಪ್ಪದ ರಥೋತ್ಸವನ್ನು ಕಬ್ಬು, ತೆಂಗು, ವಿವಿಧ ಹೂವುಗಳಿಂದ ಅಲಂಕರಿಸಲಾಗಿತ್ತು. ವಾದ್ಯಮೇಳಗಳಿಂದ ಸೋಮೇಶ್ವರನ ದೇವಸ್ಥಾನದಲ್ಲಿದ್ದ ಬೆಳ್ಳಿಯ ಮೂರ್ತಿಯನ್ನು ಪಲ್ಲಕಿಯಲ್ಲಿ ತಂದು ತೆಪ್ಪದ ರಥೋತ್ಸವದಲ್ಲಿ ಪ್ರತಿಷ್ಠಾಪಿಸಿ ಸಂಜೆ ಗುರುಮಡಿವಾಳೇಶ್ವರಮಠದ ಗಂಗಾಧರ ಸ್ವಾಮೀಜಿ, ಮೂರುಸಾವಿರಮಠದ ಪ್ರಭು ನೀಲಕಂಠ ಸ್ವಾಮೀಜಿ ರಥೋತ್ಸವಕ್ಕೆ ಚಾಲನೆ ನೀಡಿದರು.ಹಿರಿಯ ಅರ್ಚಕರಾದ ನಿಂಗಯ್ಯ ಪೂಜೇರಿ, ಗುರುಸ್ವಾಮಿ ಹೊಸಪೇಟಿಮಠ ಪ್ರಾರ್ಥಿಸಿದರು. ಶಾಸಕ ಮಹಾಂತೇಶ ಕೌಜಲಗಿ, ಟ್ರಸ್ಟ್ ಅಧ್ಯಕ್ಷ, ಆಡಳಿತ ಮಂಡಳಿ ಸರ್ವ ಸದಸ್ಯರು, ಸುತ್ತಲಿನ ಗ್ರಾಮಗಳ ಪ್ರಮುಖರ ಹಾಗೂ ಸಾವಿರಾರು ಭಕ್ತರ ಜಯಘೋಷಗಳ ಮಧ್ಯ ವಿಜೃಂಭಣೆಯಿಂದ ತಪ್ಪೋತ್ಸವದಲ್ಲಿ ಸಹಸ್ರಾರು ಜನ ಪಾಲ್ಗೊಂಡು ಉತ್ತತ್ತಿ, ಬಾಳೆ ಹಣ್ಣು, ಹೂವು ರಥಕ್ಕೆ ತೂರಿ ಭಕ್ತಿ-ಭಾವ ಮೆರದರು. ಕೆಳಗಿನ ಹೊಂಡದಲ್ಲಿ ಹಾಗೂ ಜಲಾಧಾರೆಗಳಿಗೆ ಮಹಿಳೆಯರು ಪೂಜೆ ಸಲ್ಲಿಸಿ ನೈವೇದ್ಯ ಅರ್ಪಿಸಿದರು. ಅಪಾರ ಜನಸ್ತೋಮ:

ಗೋವಾ, ಮಹಾರಾಷ್ಟ್ರ, ಕೇರಳ, ಹೈದ್ರಾಬಾದ, ಕರ್ನಾಟಕದ ವಿವಿಧ ಭಾಗದಿಂದ ಬೆಳಗ್ಗೆಯಿಂದಲೇ ಚಕ್ಕಡಿ, ಬೈಕ್, ವಾಹನ, ಟ್ರ್ಯಾಕ್ಟರ್, ಖಾಸಗಿ ವಾಹನಗಳ ಮೂಲಕ ಸಾವಿರಾರು ಭಕ್ತರು ಆಗಮಿಸುವ ದೃಶ್ಯ ಸಾಮಾನ್ಯವಾಗಿತ್ತು. ಸೊಗಲಕ್ಷೇತ್ರದ ವಿಶಾಲ ಬೆಟ್ಟದಲ್ಲಿ ಕುಳಿತು ಭಕ್ತರು ಪುಣ್ಯ ಸ್ನಾನ ಮಾಡಿ, ಕುಟುಂಬದ ಸದಸ್ಯರು ಒಟ್ಟಿಗೆ ಕುಳಿತು ಸಿಹಿ ಅಡುಗೆ, ಎಳ್ಳು ಹಚ್ಚಿದ ಸಜ್ಜೆ ರೊಟ್ಟಿ, ಜೋಳದ ರೊಟ್ಟಿ, ಶೇಂಗಾ, ಗುರೆಳ್ಳ ಚಟ್ನಿ, ಕೆನೆ ಮೊಸರು, ಮೂಲಂಗಿ, ಉಳ್ಳಾಗಡ್ಡಿ ಬಾಜಿ, ಬಾನ, ಮೊಸರಣ್ಣ, ಗಜರಿ ಚಟ್ನಿ, ಸಿಹಿ ಮಾದೋಲಿಯೊಂದಿಗೆ ಬಾಳೆಹಣ್ಣು, ಹಾಲು, ತುಪ್ಪದೊಂದಿಗೆ ವಿವಿಧ ಭಕ್ಷ ಭೋಜನದೊಂದಿಗೆ ಆಗಮಿಸಿದ ಭಕ್ತರು ದೇವರಿಗೆ, ಜಲಧಾರೆಗಳಿಗೆ ಪೂಜಿಸಿ, ನೈವೇದ್ಯ ಸಲ್ಲಿಸಿ, ರಸಭೂರಿ ಭೋಜನ ಸವಿದು, ಹಸಿರು ಪ್ರಕೃತಿಯಲ್ಲಿ ಸಂಚರಿಸುವ ಮೂಲಕ ಎಳ್ಳು ಬೆಲ್ಲ ವಿನಿಮಯ ಮಾಡಿಕೊಂಡು ನಾವು ನೀವು ಎಳ್ಳು ಬೆಲ್ಲದಂಗ ಇರೋನೆಂದು ಕುಷಲೋಪರಿ ಹಂಚಿಕೊಂಡು ಮಕರ ಸಂಕ್ರಮಣ ಆಚರಿಸಿದರು. ಪುಣ್ಯ ಸ್ನಾನ ಮಾಡಿ ಹೊಸ ಬಟ್ಟೆ ಧರಿಸಿ ಮಕ್ಕಳು ಜಿಂಕೆ ವನ, ಹುಲಿ ಗವಿ ಇತರ ದೇವಾಲಯಗಳಿಗೂ ಭೇಟಿ ನೀಡುವುದು ಸಾಮಾನ್ಯವಾಗಿತ್ತು. ಸೋಮವಾರ ರಾತ್ರಿ ಕ್ಷೇತ್ರಕ್ಕೆ ಅಪಾರ ಭಕ್ತರು ಆಗಮಿಸಿ, ಠಿಕಾಣಿ ಹೂಡಿದ್ದರು. ಮಂಗಳವಾರ ಕ್ಷೇತ್ರದಲ್ಲಿ ಎಲ್ಲಿ ನೋಡಿದಲ್ಲಿ ತುಂಬಿದ್ದ ಭಕ್ತರ ಕಂಠದಿಂದ ಹೊರಬಂದ ಜಯಘೋಷಗಳು ಮುಗಿಲು ಮುಟ್ಟುವಂತಿತ್ತು. ಹಾದುಹೊಕರು ರಸ್ತೆ ಬದಿಗಳ ಹೊಲದಲ್ಲಿಯ ಕಡಲೆ ಕಿತ್ತು, ಕಬ್ಬು ಸವಿದರು.

ಬಿಗಿ ಪೊಲೀಸ್‌ ಬಂದೋಬಸ್ತ:

ಸವದತ್ತಿ ಸಿಪಿಐ, ಮುರಗೋಡ ಸಿಪಿಐ, ಪಿಎಸೈ, ಎಎಸೈ ಹಾಗೂ 40 ಜನ ಪೊಲೀಸ್‌ ಸಿಬ್ಬಂದಿ, ಹೋಮಗಾರ್ಡ್ಸ್‌ ನೇತೃತ್ವದಲ್ಲಿ ತೆಪ್ಪೋತ್ಸವಕ್ಕೆ ಬಿಗಿ ಬಂದೋಬಸ್ತ ಏರ್ಪಿಸಲಾಗಿತ್ತು. ಕ್ಷೇತಕ್ಕ್ರೆ ಆಗಮಿಸಿದ ವಾಹನಗಳ ಸರತಿ ಸಾಲಿನಲ್ಲಿ ನಿಲ್ಲುವಂತೆ ಪೊಲೀಸ್‌ ಇಲಾಖೆಯವರು ಶಿಸ್ತು ಬದ್ದವಾಗಿ ಕಾರ್ಯ ನಿರ್ವಹಿಸಿದರು.

ಸೇವಾ ಸಮಿತಿ ಸ್ವಯಂ ಸೇವಕರ ಕಾರ್ಯಕ್ಕೆ ಮೆಚ್ಚುಗೆ

ಎಳ್ಳು-ಬೆಲ್ಲ, ಕಡಲೆಯ, ಕಬ್ಬಿನ ಹಾಲಿನ ವ್ಯಾಪಾರ ಭರ್ಜರಿಯಾಗಿತ್ತು. ಕ್ಷೇತ್ರದ ದೇವಾಲಯಗಳಲ್ಲಿ ಬೆಳಗ್ಗೆ, ಮಧ್ಯಾಹ್ನ ಹಾಗೂ ಸಂಜೆ ವಿಶೇಷ ಪೂಜೆಯು ಜರುಗಿದವು. ಅಭಿವೃದ್ಧಿಗೊಂಡ ಕ್ಷೇತ್ರದಲ್ಲಿ ಸೋಮೇಶ್ವರನ, ಶಿವ-ಪಾರ್ವತಿ ಗದ್ದುಗೆಯನ್ನು ಹೂಗಳಿಂದ ಶೃಂಗರಿಸಲಾಗಿತ್ತು. ಬಿಲ್ವಾರ್ಚನೆ, ತ್ರಿಕಾಲ ಪೂಜೆ, ಬುತ್ತಿ, ಎಲೆ, ಮೂರ್ತಿ ಪೂಜೆ, ಪ್ರಾರ್ಥನೆ, ಪುಷ್ಪಾರ್ಚನೆ, ಅಲಂಕಾರ, ತೆರತೆರನಾದ ಪುಷ್ಪಮಾಲೆ, ಸಹಸ್ರ ಬಿಲ್ವಾರ್ಚಣೆ, ಅಭಿಷೇಕಗಳು ಬೆಳಗ್ಗೆಯಿಂದ ಜರಗಿದವು. ಸೊಗಲಕ್ಷೇತ್ರದ ಸೇವಾ ಸಮಿತಿ ಸ್ವಯಂ ಸೇವಕರು ಕ್ಷೇತ್ರದಲ್ಲಿ ವ್ಯವಸ್ಥಿತವಾಗಿ ಕೆಲಸ ನಿರ್ವಹಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''