ಧಾರವಾಡದಲ್ಲಿ ಸಡಗರ ತಂದ ಸಂಕ್ರಮಣ ಹಬ್ಬ

KannadaprabhaNewsNetwork |  
Published : Jan 16, 2026, 12:45 AM IST
15ಡಿಡಬ್ಲೂಡಿ5ಸಂಕ್ರಮಣ ನಿಮಿತ್ತ ಧಾರವಾಡದ ಕೆ.ಸಿ. ಪಾರ್ಕಗೆ ಭೋಜನಕ್ಕಾಗಿ ಆಗಮಿಸಿದ ಜನಸ್ತೋಮ | Kannada Prabha

ಸಾರಾಂಶ

ಹೊಸ ವರ್ಷದ ಮೊದಲ ಹಬ್ಬ ಹಾಗೂ ಸೂರ್ಯನು ತನ್ನ ಪಥ ಬದಲಿಸುವ ದಿನವೇ ಮಕರ ಸಂಕ್ರಾಂತಿ. ಚಳಿಗಾಲ ಸರಿದು ಬಿಸಿಲು ಶುರುವಾಗುವ ಸಮಯವೂ ಇದಾಗಿದ್ದು, ಧಾರವಾಡದಲ್ಲಿ ಸಂಕ್ರಮಣವನ್ನು ಸಡಗರ, ಸಾಂಪ್ರದಾಯಿಕವಾಗಿ ಆಚರಿಸಲಾಯಿತು.

ಧಾರವಾಡ:

ಹೊಸ ವರ್ಷದ ಮೊದಲ ಹಬ್ಬ ಹಾಗೂ ಸೂರ್ಯನು ತನ್ನ ಪಥ ಬದಲಿಸುವ ದಿನವೇ ಮಕರ ಸಂಕ್ರಾಂತಿ. ಚಳಿಗಾಲ ಸರಿದು ಬಿಸಿಲು ಶುರುವಾಗುವ ಸಮಯವೂ ಇದಾಗಿದ್ದು, ಧಾರವಾಡದಲ್ಲಿ ಸಂಕ್ರಮಣವನ್ನು ಸಡಗರ, ಸಾಂಪ್ರದಾಯಿಕವಾಗಿ ಆಚರಿಸಲಾಯಿತು.

ಹಬ್ಬದ ಮಹತ್ವ ತಿಳಿಸಲು ಸಂಕ್ರಮಣ ಮುನ್ನಾದಿನ ಬಾರೋ ಸಾಧನಕೇರಿಯಲ್ಲಿ ಜಾನಪದ ಸಂಶೋಧನಾ ಸಂಸ್ಥೆ ಹಬ್ಬ ಆಚರಿಸಿದರೆ, ಜೆಎಸ್‌ಎಸ್‌ ಸಂಸ್ಥೆ ಸೇರಿದಂತೆ ಹಲವು ಸಂಸ್ಥೆಗಳು ಹಬ್ಬದ ಮುಂಚೆ ಸಂಕ್ರಾಂತಿ ಸಂತೆ ಏರ್ಪಡಿಸಿ ಹಬ್ಬದ ವಸ್ತುಗಳ ಮಾರಾಟ ಏರ್ಪಡಿಸಿದ್ದವು. ಇನ್ನು, ಬುಧವಾರ ಹಾಗೂ ಗುರುವಾರ ಎರಡು ದಿನ ಧಾರವಾಡದಲ್ಲಿ ಸಂಕ್ರಣಮದ ಹಬ್ಬದಾಚರಣೆ ನಡೆಯಿತು.

ಸಂಕ್ರಮಣ ಹಿನ್ನೆಲೆಯಲ್ಲಿ ಕೆರೆ, ನದಿ ಹಾಗೂ ಜಲಮೂಲಗಳಿಗೆ ಹೋಗಿ ಬರುವುದು ಸಂಪ್ರದಾಯ. ಅಂತೆಯೇ, ಗುರುವಾರ ಸಾಧನಕೇರಿ, ಕೆಲಗೇರಿ, ನೀರಸಾಗರ, ಕಿತ್ತೂರು ಚೆನ್ನಮ್ಮ ಉದ್ಯಾನವನಗಳಲ್ಲಿ ಮಹಿಳೆಯರು, ಮಕ್ಕಳು ಸೇರಿ ಇಡೀ ಕುಟುಂಬಗಳು ಸೇರಿ ಹಬ್ಬದ ಊಟ ಸವಿದರು.

ಹಬ್ಬದಲ್ಲಿ ಸಜ್ಜೆ ರೊಟ್ಟಿ, ಮಡಕಿಕಾಳು, ಬದನೆಕಾಯಿ ಬರ್ತಾ, ಶೇಂಗಾ ಹೋಳಿಗೆ, ಮಾದರಿ, ಗಾರಗಿ, ತರಹೇವಾರಿ ಚೆಟ್ನಿಗಳು, ಜುನಕದ ವಡೆ, ಅನ್ನ, ಸಾರು ಸೇರಿದಂತೆ ಭಕ್ಷ್ಯ ಭೋಜನದೊಂದಿಗೆ ಸಂಕ್ರಾಂತಿ ಭೋಗಿ ಊಟ ಸವಿಯಲಾಯಿತು. ಬಹಳಷ್ಟು ಜನರು ಕುಟುಂಬ ಸಮೇತ ಸಮೀಪದ ತೋಟ, ನದಿ, ಸಮುದ್ರಕ್ಕೂ ಸಹ ಹೋಗಿ ಬಂದರು.

ಸಾಲಿಮಠ ಶಾಲೆಯಲ್ಲಿ ಸಂಭ್ರಮ:

ಮನಸೂರಿನ ಸಾಲಿಮಠ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಕರ ಸಂಕ್ರಾಂತಿ ಹಬ್ಬ ಮತ್ತು ಮಕ್ಕಳ ಸಂತೆ ಸಾಂಪ್ರದಾಯಿಕ ಶೈಲಿಯಲ್ಲಿ ನಡೆಯಿತು. ಜೆಎಸ್‌ಎಸ್‌ ಐಟಿಐ ಕಾಲೇಜಿನ ಪ್ರಾಚಾರ್ಯ ಮಹಾವೀರ ಉಪಾದ್ಯೆ ಚಾಲನೆ ನೀಡಿ, ಸಂಕ್ರಾಂತಿ ದೇಶದ ಜನರ ನಡುವೆ ಅವಿನಾಭ ಸಂಬಂಧ ಬೆಸೆಯುವ ಹಬ್ಬ. ಐಕ್ಯತೆ, ಸಹಬಾಳ್ವೆ ಹಾಗೂ ಸಂಸ್ಕೃತಿಯ ಪ್ರತೀಕವಾಗಿದೆ. ಜನರಲ್ಲಿ ಪ್ರೀತಿ, ಸ್ನೇಹ ಮತ್ತು ಸೌಹಾರ್ದತೆ ಬೆಳೆಸುವ ಈ ಹಬ್ಬವು ನಮ್ಮ ಜೀವನಕ್ಕೆ ಹೊಸ ಭರವಸೆ ಮತ್ತು ಉತ್ಸಾಹವನ್ನು ತುಂಬುತ್ತದೆ ಎಂದರು.

ಶಾಲೆಯ ಅಧ್ಯಕ್ಷ ಎಸ್.ವಿ. ಸಾಲಿಮಠ ಇದ್ದರು. ವಿದ್ಯಾರ್ಥಿಗಳು, ಪಾಲಕರು ಮತ್ತು ಶಿಕ್ಷಕರು ಸಾಂಪ್ರದಾಯಿಕ ಇಳಕಲ್ ಸೀರೆಯನ್ನು ಉಟ್ಟು ಗಮನವನ್ನು ಸೆಳೆದರು. ಆಧುನಿಕತೆಯ ಜೀವನಶೈಲಿಯಲ್ಲಿ ಹಬ್ಬ ಹರಿದಿನಗಳು ಮರೆಯಾಗುತ್ತಿದ್ದು, ಶಾಲಾ-ಕಾಲೇಜಿನಲ್ಲಿ ಹಬ್ಬ ಆಚರಿಸುತ್ತಿರುವುದರಿಂದ ಮಕ್ಕಳಿಗೆ ಅವುಗಳ ಪರಿಚಯ ಮಾಡಿಕೊಟ್ಟಂತಾಗುತ್ತದೆ. ಸಂಕ್ರಾಂತಿ ಸಂತೆಯಂತಹ ವಿಚಾರಗಳು ಮಕ್ಕಳಿಗೆ ವ್ಯವಹಾರ ಜ್ಞಾನ ನೀಡಿ ಸ್ವ-ಉದ್ಯೋಗದ ಮಹತ್ವನ್ನು ತಿಳಿಸಿಕೊಡುತ್ತವೆ.

ಮಹಾವೀರ ಉಪಾಧ್ಯೆ, ಪ್ರಾಚಾರ್ಯರು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮನರೇಗಾ ಯೋಜನೆ ಹೆಸರು ಬದಲಿಸುವ ಮೂಲಕ ಮತ್ತೊಮ್ಮೆ ಗಾಂಧಿ ಹತ್ಯೆ
ಶ್ರೀರಂಗಪಟ್ಟಣ: ಕೋಟ್ಪಾ ಕಾಯ್ದೆ ನಿಯಮದಡಿ ವಿಶೇಷ ಕಾರ್ಯಾಚರಣೆ