ಸಂಕ್ರಾಂತಿ: ಕೆರೆ-ಕಟ್ಟೆ ನದಿಗಳಲ್ಲಿ ಜನರ ಪುಣ್ಯಸ್ನಾನ

KannadaprabhaNewsNetwork | Published : Jan 16, 2024 1:45 AM

ಸಾರಾಂಶ

ಕರಿಯ ದಿನ ಸಾಮಾನ್ಯವಾಗಿ ಕರೆ-ಕಟ್ಟೆ-ಹೊಳೆ ಮತ್ತು ಸಮುದ್ರಗಳಿಗೆ ಹೋಗುವ ಸಂಪ್ರದಾಯವೂ ಇದೆ. ಕೆಲವರು ಭಾನುವಾರವೇ ಈ ಪದ್ಧತಿ ಮುಗಿಸಿದರೆ ಬಹುತೇಕರು ಸೋಮವಾರ ನೀರಿದ್ದ ಸ್ಥಳಗಳಿಗೆ ಹೋಗಿ ಹಬ್ಬ ಆಚರಿಸಿದರು.

ಧಾರವಾಡ:ಎಳ್ಳು-ಬೆಲ್ಲದ ಹಬ್ಬ ಸಂಕ್ರಮಣ ಭಾನುವಾರ ಹಾಗೂ ಸೋಮವಾರ ಎರಡು ದಿನಗಳ ಕಾಲ ಧಾರವಾಡದಲ್ಲಿ ಸಂಭ್ರಮದಿಂದ ನಡೆಯಿತು.

ಭಾನುವಾರ ಮನೆಯಲ್ಲಿಯೇ ಎಳ್ಳು-ಬೆಲ್ಲ ಮಿಶ್ರಣದೊಂದಿಗೆ ಪರಸ್ಪರ ಹಬ್ಬದ ಶುಭಾಶಯಗಳನ್ನು ಹಂಚಿಕೊಂಡರೆ, ಸೋಮವಾರ ಕರಿ ಹರಿಯುವ ಸಂಪ್ರದಾಯ ನಡೆಯಿತು. ಮನೆಯಲ್ಲಿ ಅಕ್ಕಿ ಹಿಟ್ಟಿನ ದೋಸೆ ಮಾಡಿ ಮಕ್ಕಳಿಗೆ ಯಾವುದೇ ತೊಂದರೆ ಬಾರದಿರಲಿ ಎಂದು ನೇಮಿಸಿ ಹಂಚುಗಳ ಮೇಲೆ ದೋಸೆಯನ್ನು ಒಗೆಯುವುದು ಸಂಪ್ರದಾಯ. ಅಲ್ಲದೇ, ಎಳ್ಳು-ಎಣ್ಣೆ ಹಚ್ಚಿಕೊಂಡು ಸ್ನಾನ ಮಾಡುವುದು ರೂಢಿ.

ನದಿ ಸ್ನಾನ

ಕರಿಯ ದಿನ ಸಾಮಾನ್ಯವಾಗಿ ಕರೆ-ಕಟ್ಟೆ-ಹೊಳೆ ಮತ್ತು ಸಮುದ್ರಗಳಿಗೆ ಹೋಗುವ ಸಂಪ್ರದಾಯವೂ ಇದೆ. ಕೆಲವರು ಭಾನುವಾರವೇ ಈ ಪದ್ಧತಿ ಮುಗಿಸಿದರೆ ಬಹುತೇಕರು ಸೋಮವಾರ ನೀರಿದ್ದ ಸ್ಥಳಗಳಿಗೆ ಹೋಗಿ ಬಂದರು. ಧಾರವಾಡದಲ್ಲಿ ಹೇಳಿಕೊಳ್ಳುವ ನದಿ, ನೀರಿನ ಮೂಲಗಳಿಲ್ಲ. ಹೀಗಾಗಿ ಬಹುತೇಕರ ಕುಟುಂಬ ಸಮೇತ ಮುರ್ಡೇಶ್ವರ, ಗೋಕರ್ಣ, ಸವದತ್ತಿ ಬಳಿಯ ನವಿಲುತೀರ್ಥ, ದಾಂಡೇಲಿ ಕರಿ ಹೊಳೆಯಂತಹ ಪ್ರದೇಶಗಳಿಗೆ ಹೋಗಿ ಸ್ನಾನ ಮಾಡಿ ಬಂದರು. ಮತ್ತಷ್ಟು ಮಂದಿ ಮನೆಯಲ್ಲೇ ಸ್ಥಾನ ಮಾಡಿ ಕುಟುಂಬ ಸಮೇತ ಸಮೀಪದ ಉದ್ಯಾನವನಗಳಿಗೆ ಹೋಗಿ ಹಬ್ಬ ಆಚರಿಸಿದರು.

ಕಿಕ್ಕಿರಿದ ಉದ್ಯಾನವನಗಳು

ಇಲ್ಲಿಯ ಸಾಧನಕೇರಿಯ ಬಾರೋ ಸಾಧನಕೇರಿ ಹಾಗೂ ಕೆ.ಸಿ. ಪಾರ್ಕ್‌ನಲ್ಲಿ ನಿತ್ಯ ಹೆಚ್ಚೆಂದರೆ ಐವತ್ತು ಜನರು ಭೇಟಿ ನೀಡಿದರೆ ಹೆಚ್ಚು. ಆದರೆ, ಭಾನುವಾರ ಹಾಗೂ ಸೋಮವಾರ ತಲಾ ಉದ್ಯಾನವನದಲ್ಲಿ ಸಾವಿರ ಗಡಿ ದಾಟಿದೆ. ಹಬ್ಬದ ಊಟ ಕಟ್ಟಿಕೊಂಡು ಬಂದ ಜನರು ಊಟ ಮುಗಿಸಿ ಸಂಜೆ ವರೆಗೂ ಹರಟೆ, ಆಟವಾಡಿ ನಂತರ ಮನೆಗೆ ವಾಪಸ್ಸಾದರು. ಕೆಲವರು ಗಾಳಿಪಟ ಹಾರಿಸಿ ಸಂಭ್ರಮಿಸಿದರು. ಸಾಮಾನ್ಯವಾಗಿ ಸಂಕ್ರಮಣ ಹಿಂದೂಗಳ ಹಬ್ಬ. ಆದರೆ, ಮುಸ್ಲಿಂ ಸಮುದಾಯದ ಜನರೂ ಆಚರಣೆ ಮಾಡಿದ್ದು ವಿಶೇಷ. ಇಲ್ಲಿಯ ಕೆ.ಸಿ. ಪಾರ್ಕ್‌ನಲ್ಲಿ ಸೋಮವಾರ ಮುಸ್ಲಿಂ ಕುಟುಂಬವೊಂದು ಕುಟುಂಬದೊಂದಿಗೆ ಅಡುಗೆಯೊಂದಿಗೆ ಬಂದು ಸಂಭ್ರಮಿಸಿತು.

ಇನ್ನು, ಪ್ರತಿ ಬಾರಿ ಸಂಕ್ರಮಣದ ದಿನ ಇಲ್ಲಿಯ ಸೋಮೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವ ನಡೆಯುತ್ತದೆ. ಅಂತೆಯೇ, ಸೋಮವಾರ ಅಪಾರ ಭಕ್ತರ ಸಮ್ಮುಖದಲ್ಲಿ ಜಾತ್ರೆ ನಡೆಯಿತು. ಸಂಜೆ 4ರ ಸುಮಾರಿಗೆ ರಥೋತ್ಸವ ಜರುಗಿತು.

Share this article