ಸಂಸ್ಕೃತ-ಇಂಗ್ಲೀಷ್ ದಾಳಿಗೆ ಕನ್ನಡ ಪದಗಳ ನಾಶ: ಚಿಂತಕ ಶಿವಕುಮಾರ

KannadaprabhaNewsNetwork |  
Published : Feb 16, 2025, 01:46 AM IST
ಸ | Kannada Prabha

ಸಾರಾಂಶ

ಸಂಸ್ಕೃತ, ಇಂಗ್ಲೀಷ್ ಹಾಗೂ ತೆಲುಗು ಭಾಷೆಯ ದಾಳಿಯಿಂದಾಗಿ ಕನ್ನಡದ ಅನೇಕ ಪದಗಳು ನಾಶವಾಗಿವೆ

ಸಿರುಗುಪ್ಪ: ಸಂಸ್ಕೃತ, ಇಂಗ್ಲೀಷ್ ಹಾಗೂ ತೆಲುಗು ಭಾಷೆಯ ದಾಳಿಯಿಂದಾಗಿ ಕನ್ನಡದ ಅನೇಕ ಪದಗಳು ನಾಶವಾಗಿವೆ ಎಂದು ಹಿರಿಯ ಲೇಖಕ ಹಾಗೂ ಚಿಂತಕ ಶಿವಕುಮಾರ ಎಸ್.ಬಳಿಗಾರ ತಿಳಿಸಿದರು.ನಗರದಲ್ಲಿ ಶನಿವಾರ ಜರುಗಿದ 7ನೇ ಸಿರುಗುಪ್ಪ ತಾಲೂಕ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಂಸ್ಕೃತ ಹಾಗೂ ಇಂಗ್ಲೀಷ್ ಭಾಷೆಗಳು ಕನ್ನಡದ ಮೇಲೆ ದೊಡ್ಡ ಆಘಾತ ಸೃಷ್ಟಿಸಿವೆ. ಇವುಗಳ ದಾಳಿ-ಹಾವಳಿಗಳಿಂದ ಕನ್ನಡದ ಪದಗಳು ಕುತ್ತು ತಂದುಕೊಂಡಿವೆ. ಕನ್ನಡಿಗರು ಭಾಷೆಯ ಬಳಕೆ ವೇಳೆ ಸಂಸ್ಕೃತ ಹಾಗೂ ಇಂಗ್ಲೀಷ್ ಬಳಕೆ ಮಾಡುವುದರಿಂದ ಕನ್ನಡದ ಮೂಲ ಪದಗಳು ಮರೆಯಾಗಿವೆ ಎಂದು ಬೇಸರ ವ್ಯಕ್ತಪಡಿಸಿದರು.

ಬಳಕೆಯಿಂದ ಮಾತ್ರ ಭಾಷೆ ಉಳಿಯಲು ಸಾಧ್ಯ. ಹೀಗಾಗಿ ಸಾಧ್ಯವಾದಷ್ಟು ಕನ್ನಡ ಭಾಷೆ ಬಳಸಬೇಕು. ಇಂಗ್ಲೀಷ್ ಮೋಹದಿಂದ ಹೊರ ಬಂದು ಮಾತೃಭಾಷೆ ಪ್ರೀತಿ ಮಾಸದಂತೆ ನೋಡಿಕೊಳ್ಳಬೇಕು. ಎಷ್ಟೇ ಭಾಷೆ ಕಲಿಯಲಿ. ಅದಕ್ಕೆ ವಿರೋಧ ಬೇಡ. ಆದರೆ, ಮಾತೃಭಾಷೆಯಲ್ಲಿ ಸಂವಹನ ಮಾಡುವ ಕೆಲಸವಾಗಬೇಕು. ಮಕ್ಕಳಲ್ಲಿ ಭಾಷಾಭಿಮಾನ ಮೂಡಿಸಬೇಕು. ಪೋಷಕರು ಈ ಬಗ್ಗೆ ಹೆಚ್ಚು ಕಾಳಜಿ ವಹಸಿಬೇಕು ಎಂದರು.

ಯಾವುದೇ ಸಾಹಿತ್ಯ ಮಾನವೀಯ ಪರವಾಗಿರಬೇಕು. ದ್ವೇಷ ಭಾವನೆಗಳನ್ನು ಕೆರಳಿಸುವ ಸಾಹಿತ್ಯ ಜನಮುಖಿ ಅಥವಾ ಜನಪರ ಸಾಹಿತ್ಯ ಎನಿಸಿಕೊಳ್ಳುವುದಿಲ್ಲ. ಸಾಹಿತ್ಯ ಜಡಗೊಳ್ಳಬಾರದು. ಜನಪರವಾದ ಸಾಹಿತ್ಯ ಎಂದೂ ಜಡಗೊಳ್ಳುವುದಿಲ್ಲ. ಸದಾ ಕ್ರಿಯಾಶೀಲವಾಗಿರುತ್ತದೆ ಎಂದು ಹೇಳಿದರು. ಅಲ್ಲದೆ, ನಮಗೆ ಗೊತ್ತಿರದ ಕಾಣದ ಗುರು ಸಾಹಿತ್ಯದ ಕೃತಿಯಲ್ಲಿರುತ್ತಾನೆ. ಆ ಗುರು ನಮಗೆ ಸರಿಯಾದ ಪಥವನ್ನು ತೋರಿಸುತ್ತಾನೆ. ಆಧ್ಯಾತ್ಮಿಕ ವಿಚಾರಗಳನ್ನು ನೀಡುತ್ತಾನೆ ಎಂದು ತಿಳಿಸಿದರು.

ಭಾಷೆ ಶಸ್ತ್ರವಾಗಬಾರದು. ಭಾಷೆ ಶಾಸ್ತ್ರವಾಗಬಾರದು. ಭಾಷೆ ಜಡಗೊಳ್ಳಬಾರದು. ಭಾಷೆ ನಿರಂತರವಾಗಿ ಚಲನಶೀಲನೆಗೆ ಪೂರಕವಾಗಬೇಕು ಎಂದು ಶಿವಕುಮಾರ ಬಳಿಗಾರ ತಿಳಿಸಿದರು.

PREV

Recommended Stories

ಲಕ್ಷ್ಮಿ ಹಬ್ಬದ ಸಂದರ್ಭದಲ್ಲಿ ಗೃಹಲಕ್ಷ್ಮೀ ಯರಿಗೆ ಇಲ್ಲಿದೆ ಸಿಹಿ ಸುದ್ದಿ
''ಪ್ರಜ್ವಲ್‌ ಬಚಾವ್‌ಗೆ ಆತನ ಪೋಷಕರು ತಂತ್ರ ಮಾಡಿದ್ರು ''