ಕನ್ನಡಪ್ರಭ ವಾರ್ತೆ ವಿರಾಜಪೇಟೆ
ದೇವಾಲಯದ ಪ್ರಧಾನ ಗುರುಗಳಾದ ಫಾ. ಜೇಮ್ಸ್ ಡೋಮಿನಿಕ್ ಮತ್ತು ಸಹಾಯಕ ಧರ್ಮಗುರು ರೆ.ಫಾ. ಮದಲೈಮುತ್ತು ಅವರ ಸಾನಿಧ್ಯಲ್ಲಿ ವಿವಿಧ ಧಾರ್ಮಿಕ ಕಾರ್ಯಗಳು ನಡೆದವು. ಮಂಗಳವಾರ ರಾತ್ರಿ 11.30ಕ್ಕೆ ಜಪಸಾರ ಪಠಣದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ನಂತರ ಬೈಬಲ್ ಪಠಣ ಹಾಗೂ ಗಾಯನ ನಡೆಯಿತು. ಪ್ರಧಾನ ಧರ್ಮಗುರುಗಳು ಬಾಲಯೇಸುವಿನ ಮೂರ್ತಿಯನ್ನು ದೇವಾಲಯದಲ್ಲಿ ನಿರ್ಮಿಸಲಾದ ಗೋದಲಿಯಲ್ಲಿ ಪ್ರತಿಷ್ಠಾಪಿಸಿದರು. ಬಳಿಕ ಪ್ರಧಾನ ಬಲಿಪೂಜೆ ಆರಂಭಿಸಿ ಯೇಸುಕ್ರಿಸ್ತನ ದಿವ್ಯಗಾಯನದೊಂದಿಗೆ ಧಾರ್ಮಿಕ ಕಾರ್ಯಕ್ರಮ ಸಂಪನ್ನಗೊಂಡಿತು.
ಕ್ರಿಸ್‌ಮಸ್ ಸಂದೇಶ ನೀಡಿದ ಪ್ರಧಾನ ಧರ್ಮಗುರುಗಳು, ಕ್ರಿಸ್ತಜನನದ ಮೂಲ ಉದ್ದೆಶ ಮನುಷ್ಯನಿಗೆ ಆಧ್ಯಾತ್ಮಿಕ ಸ್ವಾತಂತ್ರವನ್ನು ನೀಡುವುದಾಗಿದೆ. ಆತನ ಪುನರುತ್ಥಾನ ಎಂದಿಗೂ ಮನುಕುಲಕ್ಕೆ ನಿರೀಕ್ಷೆ, ನಂಬಿಕೆ, ಭರವಸೆ ಹಾಗೂ ಅತಿ ಅವಶ್ಯಕವಾದ ಶಾಂತಿ ಸಮಾಧಾನ ಸಂತೃಪ್ತಿ ಮತ್ತು ನೆಮ್ಮದಿಯ ಬದುಕನ್ನು ನೀಡುತ್ತದೆ ಎಂದರು. ಬಳಿಕ ಹಬ್ಬದ ಶುಭಾಶಯ ಹೇಳಿದರು. ನೆರೆದಿದ್ದ ಕ್ರೈಸ್ತಬಾಂದವರು ಕೇಕ್ ಕತ್ತರಿಸಿ ಶುಭಾಶಯ ವಿನಿಮಯ ಮಾಡಿಕೊಂಡು ಸಂಭ್ರಮಿಸಿದರು.ಬುಧವಾರ ಬೆಳಗ್ಗೆ 10 ಗಂಟೆಗೆ ದೇವಾಲಯದಲ್ಲಿ ಪ್ರಧಾನ ಧರ್ಮಗುರುಗಳಾದ ರೆ.ಫಾ. ಜೇಮ್ಸ್ ಡೋಮಿನಿಕ್ ಸಾನಿಧ್ಯದಲ್ಲಿ ದಿವ್ಯಬಲಿಪೂಜೆ ನಡೆಯಿತು. ಗೀತಾಗಾಯನ ನಡೆಯಿತು. ಬಳಿಕ ಭಕ್ತರಿಗೆ ಕೇಕ್ ವಿತರಿಸಲಾಯಿತು.
ಶಾಸಕ ಪೊನ್ನಣ್ಣ ಭೇಟಿ: ಕ್ರಿಸ್ತಜಯಂತಿ ಅಂಗವಾಗಿ ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಸಂತ ಅನ್ನಮ್ಮ ದೇವಾಲಯಕ್ಕೆ ಭೇಟಿ ನೀಡಿ ಕ್ರಿಸ್ತಜಯಂತಿ ಕಾರ್ಯಕ್ರಮದಲ್ಲಿ ಭಾಗಿಯಾದರು. ಈ ಸಂದರ್ಭ ಮಾತನಾಡಿದ ಶಾಸಕರು, ಕ್ರಿಸ್ತಜಯಂತಿ ಶಾಂತಿ ಸುಭಿಕ್ಷೆಯನ್ನು ಕರುಣಿಸಲಿ, ಧರ್ಮಗಳ ಆಚರಣೆಯಲ್ಲಿ ಸರ್ವರು ಭಾಗಿಗಳಾಗಿ ಧಾರ್ಮಿಕ ಭಾವನೆಗಳಿಗೆ ಗೌರವ ಸೂಚಿಸುವಂತಾಗಬೇಕು ಎಂದರು.ವಿರಾಜಪೇಟೆ ಪುರಸಭೆ ಅಧ್ಯಕ್ಷೆ ದೇಚಮ್ಮ ಕಾಳಪ್ಪ, ಸದಸ್ಯರಾದ ಪಟ್ಡಡ ರಂಜಿ ಪೂಣಚ್ಚ, ರಾಜೇಶ್ ಪದ್ಮನಾಭ, ಎಸ್.ಎಚ್. ಮತೀನ್, ಪಕ್ಷದ ಮುಖಂಡರು ಉಪಸ್ಥಿತರಿದ್ದರು.