ಕನ್ನಡಪ್ರಭ ವಾರ್ತೆ ಹನೂರು ರೈತರು ಬೆಳೆದ ದವಸಧಾನ್ಯ ತರಕಾರಿಗಳನ್ನು ಮಾರಾಟ ಮಾಡಲು ಸಂತೆ ತೆರೆಯಲು ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್ ತಿಳಿಸಿದರು.
ರೈತರಿಗೆ ನೇರವಾಗಿ ಮಾರಾಟ ಮಾಡಲು ಅನುಕೂಲವಾಗುವ ನಿಟ್ಟಿನಲ್ಲಿ ಮತ್ತು ತಾವು ಬೆಳೆದ ಪ್ರತಿಯೊಂದು ಬೆಳೆಯ ದವಸ ಧಾನ್ಯ ಹಾಗೂ ತರಕಾರಿ ಇನ್ನಿತರ ವಸ್ತುಗಳನ್ನು ಮಾರಾಟ ಮಾಡಲು ಸಂಬಂಧಿಸಿದ ಜಿಲ್ಲಾಡಳಿತ ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ತಾಲೂಕಿನಲ್ಲಿ ರಸ್ತೆಗಳೆಲ್ಲ ಗುಂಡಿಮಯವಾಗಿ ಸಂಚರಿಸಲಾಗದೆ ಪ್ರಯಾಣಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಹನೂರು ಪಟ್ಟಣದಿಂದ ಲೊಕ್ಕನಹಳ್ಳಿ ರಸ್ತೆ ಮಾರ್ಗದಲ್ಲಿ ಸಿಗುವ ತಟ್ಟೆ ಹಳ್ಳಕ್ಕೆ ಸೇತುವೆ ನಿರ್ಮಾಣ ಮಾಡಲಾಗಿದೆ. ಆದರೆ ಪೂರ್ಣಗೊಳ್ಳದೆ ರಸ್ತೆಯ ಎರಡು ಬದಿಗಳಲ್ಲಿ ಭಾರಿ ಗಾತ್ರದ ಗುಂಡಿಗಳು ನಿರ್ಮಾಣವಾಗಿದ್ದು, ಅರ್ಧಕ್ಕೆ ನಿಂತಿರುವ ಸೇತುವೆ ಕಾಮಗಾರಿ ಪೂರ್ಣಗೊಳಿಸಿ ಪ್ರಯಾಣಿಕರಿಗೆ ಹಾಗೂ ಈ ಭಾಗದ ರೈತ ಬಾಂಧವರಿಗೆ ಅನುಕೂಲ ಕಲ್ಪಿಸಬೇಕು. ಈ ರಸ್ತೆ ಮಾರ್ಗವಾಗಿ ರಸ್ತೆಯ ಎರಡು ಬದಿಗಳಲ್ಲಿಯೂ ಹಲವಾರು ಒಣಮರಗಳು ಒಳಗೆ ನಿಂತಿವೆ. ಪ್ರಯಾಣಿಕರ ಮೇಲೆ ಬಿದ್ದು ಪ್ರಾಣ ಹಾನಿ ಸಂಭವಿಸುವ ಮುನ್ನ ಸಂಬಂಧ ಪಟ್ಟ ಅರಣ್ಯ ಇಲಾಖೆ ಪಿಡಬ್ಲ್ಯೂಡಿ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು. ನೀರಾವರಿ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಲು ಹುಬ್ಬೆ ಹುಣಸೆ ಜಲಾಶಯದ ನಾಲೆಗಳನ್ನು ದುರಸ್ತಿ ಪಡಿಸಿ ನೀರು ಬಿಡುವ ಮೂಲಕ ನೀರಾವರಿ ಯೋಜನೆಗೆ ರೈತರಿಗೆ ಅನುಕೂಲ ಕಲ್ಪಿಸಬೇಕು ಅಪಾರ ಪ್ರಮಾಣದ ನೀರು ತಟ್ಟೆಹಳ್ಳದ ಮೂಲಕ ತಮಿಳುನಾಡಿನ ಪಾಲಾಗುತ್ತಿದೆ. ಸಾಕಷ್ಟು ಮಳೆಯಾಗಿ ಜಲಾಶಯ ತುಂಬಿದ್ದರೂ ರೈತರಿಗೆ ಇದರ ಉಪಯೋಗ ಇಲ್ಲದಂತಾಗಿದೆ. ಕೂಡಲೇ ಸಂಬಂಧಿಸಿದ ನೀರಾವರಿ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು.ಮಹಾಲಿಂಗನ ಕಟ್ಟೆ ಸುತ್ತಮುತ್ತಲಿನ ರೈತರ ಜಮೀನಿಗೆ ತೆರಳುವ ರಸ್ತೆಗಳನ್ನು ದುರಸ್ತಿಪಡಿಸಿ. ಈ ಭಾಗದಲ್ಲಿರುವ ರೈತರು ವ್ಯವಸಾಯ ನಂಬಿ ಬದುಕುತ್ತಿರುವುದರಿಂದ ರೈತರಿಗೆ ಅನುಕೂಲವಾಗುವ ಬೆಳೆ ಬೆಳೆಯಲು ತೋಟಗಾರಿಕೆ ಹಾಗೂ ಕೃಷಿ ಇಲಾಖೆ, ಅಧಿಕಾರಿಗಳು ರೈತರಿಗೆ ಇಲಾಖೆ ವತಿಯಿಂದ ಸಿಗುವ ಪ್ರತಿಯೊಂದು ಸವಲತ್ತನ್ನು ತಲುಪಿಸಲು ವಿಫಲರಾಗಿದ್ದಾರೆ. ಹನೂರು ಪಟ್ಟಣದ ಕೃಷಿ ಇಲಾಖೆ ಅಧಿಕಾರಿಗಳು ಇದಕ್ಕೆ ಪೂರಕವಾಗಿ ರೈತರಿಗೆ ಸ್ಪಂದಿಸುತ್ತಿಲ್ಲ. ಹೀಗಾಗಿ ಸಂಬಂಧಪಟ್ಟ ಜಿಲ್ಲಾ ಮಟ್ಟದ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಕ್ರಮವಹಿಸಬೇಕು ಎಂದರು. ಜಲತ್ವ ಸಮಸ್ಯೆಗಳಿಗೆ ಜನಪ್ರತಿನಿಧಿ ಅಧಿಕಾರಿಗಳು ಮತ್ತು ಜಿಲ್ಲಾಡಳಿತ ಗಮನಹರಿಸಿ ಎಂದರು.