ಶಿವಾನಂದ ಗೊಂಬಿ
ಕಳೆದ 5 ದಿನಗಳ ಹಿಂದೆಯಷ್ಟೇ ರಾಜ್ಯದ 15ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಧಾರಾಕಾರ ಮಳೆ ಸುರಿಯಿತು. ಎಲ್ಲೆಡೆ ಆಲಿಕಲ್ಲು ಮಳೆಯೇ ಸುರಿದಿದೆ. ಆದರೆ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಲ್ಲಿ ಸುರಿದ ಆಲಿಕಲ್ಲು ಮಳೆಗೂ ಉಳಿದೆಡೆ ಸುರಿದ ಆಲಿಕಲ್ಲು ಮಳೆಗೂ ಭಾರೀ ವ್ಯತ್ಯಾಸ.
ಕಲಘಟಗಿ ಅರೆ ಮಲೆನಾಡು ತಾಲೂಕು. ಆದರೆ ಅಕ್ಷರಶಃ ಕಾಶ್ಮೀರದಂತಹ ಅನುಭವ ಕಲಘಟಗಿಯಲ್ಲಿ ಆಗಿದೆ. ರಸ್ತೆಗುಂಟ ಹಿಮಪಾತವಾದಂತೆ ಆಲಿಕಲ್ಲುಗಳ ರಾಶಿ ರಸ್ತೆಗೆ ಹಾಸಿಗೆ ಹಾಸಿದಂತೆ ಇತ್ತು. ರಸ್ತೆಯಲ್ಲಿ ಯಾವುದೇ ವಾಹನ ಸಂಚರಿಸಲು ಸಾಧ್ಯವಾಗದೇ ವಾಹನಗಳು ಗಂಟೆಗಟ್ಟಲೇ ನಿಂತಲ್ಲೇ ನಿಂತಿದ್ದವು. ಕಾಶ್ಮೀರದ ಯಾವುದಾದರೂ ಪ್ರದೇಶಕ್ಕೆ ಪ್ರವಾಸಕ್ಕೆ ತೆರಳಿ ಅಲ್ಲಿನ ಹಿಮಪಾತದಿಂದ ಸಿಲುಕಿದ ಪ್ರವಾಸಿಗರಂತೆ ಕಲಘಟಗಿ ಅಕ್ಷರಶಃ ಭಾಸವಾಗುತ್ತಿತ್ತು. ಅಷ್ಟೊಂದು ಘೋರ ಪ್ರಮಾಣದಲ್ಲಿ ಆಲಿಕಲ್ಲುಗಳ ರಾಶಿ ರಾಶಿ ರಸ್ತೆ, ಮನೆಗಳ ಚಾವಣೆ, ಗಿಡ ಮರಗಳ ಮೇಲೆಲ್ಲ ಬಿದ್ದಿದ್ದವು. ಮಾವು ಸೋಯಾಬಿನ್, ಕಬ್ಬು ಸೇರಿದಂತೆ ಹಲವು ಬೆಳೆಗಳೆಲ್ಲ ಹಾಳಾದರೆ, ಶಾಲಾ ಕೊಠಡಿ, ಮನೆಗಳೆಲ್ಲ ಜಖಂಗೊಂಡಿದ್ದುಂಟು.ಅಂದು ಅಲ್ಲಿ ಹಿಮಪಾತದ ದೃಶ್ಯದಂತೆ ಕಾಣುತ್ತಿದ್ದ ಆಲಿಕಲ್ಲುಗಳೆಲ್ಲ ಕರಗಿ ನೀರಾಗಲು ಸರಿಸುಮಾರು ಐದಾರು ಗಂಟೆಯೇ ಬೇಕಾಯಿತು. ಇದರಿಂದ ಅಲ್ಲಿನ ವಾತಾವರಣವೇ ಬದಲಾಗಿತ್ತು. ಜನತೆಯೆಲ್ಲ ಕಾಶ್ಮೀರ ಅಲ್ಲ ಕರ್ನಾಟಕದ ಕಲಘಟಗಿ ಎಂದೆಲ್ಲ ತಮ್ಮ ಸ್ಟೇಟಸ್ ಇಟ್ಟುಕೊಂಡಿದ್ದು ಆಯಿತು. ಧಾರವಾಡ ಜಿಲ್ಲೆಯ ಇತಿಹಾಸದಲ್ಲೇ ಇಷ್ಟೊಂದು ರಣಘೋರವೆನ್ನಲಾದ ಮಳೆ ಸುರಿದಿರಲಿಲ್ಲ. ಇದೇ ಮೊದಲು. ಇದಕ್ಕೆ ಕಾರಣವೇನು ಎಂದೆಲ್ಲ ಪರಿಸರವಾದಿಗಳು, ಹವಾಮಾನ ತಜ್ಞರು ತಮ್ಮದೇ ಆದ ಶೈಲಿಯಲ್ಲಿ ವಿಶ್ಲೇಷಣೆ ಮಾಡಿದ್ದುಂಟು. ಅದೆಲ್ಲ ಈಗ ಬೇಡ. ಆದರೆ ಅಂದು ಸುರಿದ ಮಳೆಯಿಂದ ಬರೋಬ್ಬರಿ 205 ಎಕರೆ ಪ್ರದೇಶದಲ್ಲಿನ ಮಾವು, ಸೇರಿದಂತೆ ಒಟ್ಟು 450 ಎಕರೆಗೂ ಅಧಿಕ ಪ್ರಮಾಣದ ವಿವಿಧ ಬೆಳೆಗಳೆಲ್ಲ ಹಾಳಾಗಿವೆ. ರೈತ ಅಕ್ಷರಶಃ ಕಣ್ಣೀರು ಸುರಿಸುತ್ತಿದ್ದಾನೆ. ಪರಿಹಾರಕ್ಕಾಗಿ ಅಂಗಲಾಚುತ್ತಿದ್ದಾನೆ.
ಸಚಿವರಿಗೆ ಏಕೆ ಇಷ್ಟೊಂದು ನಿಷ್ಕಾಳಜಿ ಎಂಬ ಪ್ರಶ್ನೆ ರೈತರದ್ದು. ಇನ್ನಾದರೂ ತಮ್ಮದೇ ಕ್ಷೇತ್ರಕ್ಕೆ ಭೇಟಿ ನೀಡಿ ಪರಿಶೀಲಿಸಿ ರೈತರಿಗೆ, ಮಳೆಯಿಂದ ಗಾಬರಿಯಾದವರಿಗೆ ಕೊಂಚ ಧೈರ್ಯ ಹೇಳುವ ಕೆಲಸ ಮಾಡಬೇಕು ಎಂಬುದು ಪ್ರಜ್ಞಾವಂತರ ಒಕ್ಕೊರಲಿನ ಆಗ್ರಹ.