ಕನ್ನಡಪ್ರಭ ವಾರ್ತೆ, ತರೀಕೆರೆ
ರಾಜ್ಯಮಟ್ಟದ ಶ್ರವಣ ದೋಷವುಳ್ಳವರ 20ನೇ ಚದುರಂಗ ಸ್ಫರ್ಧೆಯಲ್ಲಿ ಪಟ್ಟಣದ ಚೌಡೇಶ್ವರಿ ಕಾಲೋನಿ ನಿವಾಸಿ ಸಂತೋಷ್ ಎಚ್.ಎಸ್. ಮೂರನೇ ಸ್ಥಾನ ಪಡೆದು ತರೀಕೆರೆ, ಜಿಲ್ಲೆ ಮತ್ತು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.ಜು.3 ರಿಂದ 7ರ ವರೆಗೆ ಹುಬ್ಬಳ್ಳಿಯಲ್ಲಿ ನಡೆದ 20ನೇ ಕರ್ನಾಟಕ ರಾಜ್ಯ ಶ್ರವಣ ದೋಷವುಳ್ಳವರ ಚದುರಂಗ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಪಟ್ಟಣದ ಚೌಡೇಶ್ವರಿ ಕಾಲೋನಿ ನಿವಾಸಿ ಸಿದ್ದಪ್ಪ ಹಾಗೂ ಕಾಂತಮ್ಮಅವರ ಪುತ್ರ ಸಂತೋಷ್ ಈ ಸ್ಥಾನ ಪಡೆದಿದ್ದಾರೆ. ಕರ್ನಾಟಕದ ಎಲ್ಲಾ ಜಿಲ್ಲೆಗಳಿಂದ ಆಗಮಿಸಿದ್ದ ಸುಮಾರು 69 ಮಂದಿ 9ನೇ ಸುತ್ತಿನ ಚದುರಂಗ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. 18 ವರ್ಷ ಮೇಲ್ಪಟ್ಟ ಪುರುಷರ ವಿಭಾಗದಲ್ಲಿ 7.5 ಅಂಕಗಳನ್ನು ಪಡೆದರೆ, ದ್ವಿತೀಯ ಸ್ಥಾನವನ್ನು ಮೈಸೂರಿನ ಸ್ಪರ್ಧಿ ಪಡೆದಿದ್ದಾರೆ.ಹುಟ್ಟಿನಿಂದಲೇ ಶ್ರವಣದೋಷ ಹೊಂದಿರುವ ಸಂತೋಷ್ ಕುಟುಂಬದಲ್ಲಿ ಇರುವ ಎರಡನೆಯ ವಿಶೇಷ ಚೇತನರು. ಇವರ ಸಹೋದರ ವಿಶ್ವನಾಥ ಸಹ ವಿಷೇಶ ಚೇತನರಾಗಿದ್ದು ಅಣ್ಣನೂ ಪ್ರತಿವರ್ಷ ಚೆಸ್ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಿ ಹಲವಾರು ಪ್ರಶಸ್ತಿಗಳನ್ನು ತಮ್ಮದಾಗಿದಿಕೊಂಡಿದ್ದಾರೆ. ಅವರೇ ಸಂತೋಷ್‌ಗೆ ಸ್ಫೂರ್ತಿಯೂ ಆಗಿದ್ದಾರೆ ಎಂದರೆ ತಪ್ಪಿಲ್ಲ.
ಹೈಸ್ಕೂಲ್ ವರೆಗೆ ವಿದ್ಯಾಭ್ಯಾಸ ಮಾಡಿರುವ ಸಂತೋಷ್‌ಗೆ ಚೆಸ್ ಆಡುವುದರೊಂದಿಗೆ, ಚಿತ್ರಕಲೆ, ಪೈಂಟಿಂಗ್ ಗಳಲ್ಲೂ ಅತೀವ ಆಸಕ್ತಿ. ತರೀಕೆರೆಯಲ್ಲಿ ನಡೆಯುವ ದಸರಾ ಬಯಲು ಕುಸ್ತಿ ಪಂದ್ಯಗಳಲ್ಲಿ ಭಾಗವಹಿಸಿ ಬಹುಮಾನ ಗಳಿಸಿರುವ ಇವರು ಕಡೂರು ವಿಕಲಚೇತನರ ಸಂಘದಿಂದ ಕಳೆದ ವರ್ಷ ರಾಯಚೂರಿನಲ್ಲಿ ನಡೆದ ರಾಜ್ಯಮಟ್ಟದ ಚದುರಂಗ ಸ್ಫರ್ಧೆಯಲ್ಲೂ ಬಹುಮಾನ ಪಡೆದಿದ್ದರು.ತರೀಕೆರೆ ದುರ್ಗಾ ಕ್ಲಿನಿಕ್ ವೈದ್ಯರಾದ ಡಾ.ಎಸ್.ಎನ್. ಆಚಾರ್ಯ ಸ್ವತಃ ಚೆಸ್ ಆಟಗಾರರಾಗಿದ್ದು ಇವರ ಮಾರ್ಗ ದರ್ಶನ ದೊಂದಿಗೆ ತರಬೇತಿ ಪಡೆದು ರಾಜ್ಯಮಟ್ಟದಲ್ಲಿ ಸ್ಪರ್ಧಿಸುವ ಮಟ್ಟಕ್ಕೆ ಬೆಳೆದಿದ್ದಾರೆ.ಜೀವನ ನಿರ್ವಹಣೆಗಾಗಿ ಮನೆ, ಕಟ್ಟಡಗಳಿಗೆ ಪೇಂಟಿಂಗ್ ಮಾಡುವ ವೃತ್ತಿಯಲ್ಲಿ ಅಣ್ಣನೊಂದಿಗೆ ಕುಟುಂಬಕ್ಕೆ ನೆರವಾಗುತ್ತಿರುವ ಇಂತಹ ವಿಶೇಷ ಚೇತನ ಪ್ರತಿಭೆಯ ಭವಿಷ್ಯ ಉಜ್ಜಲವಾಗಬೇಕು. ಸಮಾಜದಲ್ಲಿ ಇನ್ನೂ ಉನ್ನತ ಸ್ಥಾನದಲ್ಲಿ ಮಿನುಗಬೇಕೆಂದು ತರೀಕೆರೆ ಸಹೃದಯ ಸೇವಾ ಸಮುದಾಯದ ಎಲ್ಲ ಸದಸ್ಯರ ಹೃದಯಾಂತರಾಳದ ಶುಭ ಹಾರೈಕೆ ಆಗಿದೆ ಎಂದು ಸಹೃದಯ ಸೇವಾ ಸಮುದಾಯ ಕಾರ್ಯದರ್ಶಿ ಕ್ರಿಸ್ತ ದಯಾ ಕುಮಾರ್ ತಿಳಿಸಿದ್ದಾರೆ.7ಕೆಟಿಆರ್.ಕೆ 05ಃ ಸಂತೋಷ್ ಎಚ್.ಎಸ್