ಶೃಂಗೇರಿ ವರುಣಾರ್ಭಟದ ನಡುವೆಯೂ ಕಳೆಗಟ್ಟಿದ ದಸರಾ ಉತ್ಸವ । ದೇವಿ, ಪುಸ್ತಕ ಭಂಡಾರಕ್ಕೆ ವಿಶೇಷ ಪೂಜೆ
ಕನ್ನಡಪ್ರಭ ವಾರ್ತೆ, ಶೃಂಗೇರಿಶರನ್ನವರಾತ್ರಿ ಮಹೋತ್ಸವದ 8ನೇ ದಿನವಾದ ಸೋಮವಾರ ಪೀಠದ ಅಧಿದೇವತೆ ಶ್ರೀ ಶಾರದಾಂಬೆಗೆ ಮಾಡಿದ್ದ ವಿದ್ಯಾದೇವತೆ ಸರಸ್ವತಿ ಕೈಯಲ್ಲಿ ವೀಣೆ ಹಿಡಿದು ಭಕ್ತರನ್ನು ಅನುಗ್ರಹಿಸುತ್ತಿರುವ ಅಲಂಕಾರ ನಯನ ಮನೋಹರವಾಗಿತ್ತು. ಶಾರದೆಗೆ ವಿವಿಧ ಫಲಪುಷ್ಪ, ಆಭರಣಗಳಿಂದ ಸಿಂಗರಿಸಲಾಗಿತ್ತು. ಶ್ರೀ ಮಠದ ಪುಸ್ತಕ ಭಂಡಾರಕ್ಕೆ ವಿಶೇಷ ಪೂಜೆ ನಡೆಯಿತು.
ಶೃಂಗೇರಿ ಪೀಠದಲ್ಲಿ ವಿರಾಜಮಾನರಾಗಿದ್ದ ಶ್ರೀ ವಿದ್ಯಾರಣ್ಯರು ಸಂಗೀತ ಕೃತಿ ರಚಿಸಿ ಸಂಗೀತಕ್ಕೆ ಅನನ್ಯ ಕೊಡುಗೆ ಸಲ್ಲಿಸಿದ್ದರು. ಶ್ರೀ ಭಾರತೀ ತೀರ್ಥರ ಕೃತಿ ಶ್ರೀ ಶಾರದಾ ಗೀತಂ ಸಹ ಅತ್ಯುತ್ತಮ ಸಂಗೀತ ಕೃತಿಯಾಗಿದೆ. ಶ್ರೀ ಚಂದ್ರಶೇಖರ ಭಾರತೀ ಸ್ವಾಮೀಜಿ ಶಾರದೆಯ ಅನೇಕ ಗೀತೆಗಳನ್ನು ರಚಿಸಿದ್ದಾರೆ. ಇದಲ್ಲದೇ ಸೀತಾ ಗೀತೆ, ಚಂದ್ರಮೌಳೀಶ್ವರ ಗೀತೆ ರಚಿಸಿದ್ದಾರೆ. ಶ್ರೀ ಭಾರತೀ ತೀರ್ಥ ಸ್ವಾಮೀಜಿ ಗಣೇಶ ಗೀತಂ, ಸುಬ್ರಮಣ್ಯ ಗೀತಂ,ಶಂಕರಾಚಾರ್ಯ ಗೀತಂ, ಶ್ರೀ ರಾಮ ಗೀತಂ, ವಿಷ್ಣು ಗೀತಂ ಮತ್ತು ಶ್ರೀ ಅಭಿನವ ವಿದ್ಯಾ ತೀರ್ಥ ಗೀತಂ ಹೀಗೆ ಸಂಸ್ಕೃತದಲ್ಲಿ ಅನೇಕ ಅತ್ಯಮೂಲ್ಯ ಸಂಗೀತ ಗೀತೆಗಳನ್ನು ರಚಿಸಿದ್ದಾರೆ.ವೀಣಾಪಾಣಿ ಶಾರದೆ ಆರಾಧಕ ಜಗದ್ಗುರುಗಳೆಲ್ಲಾ ಸಂಗೀತ ರಚನೆ ಮೂಲಕವೂ ದೇವಿಯನ್ನು ಸ್ತುತಿಸಿದ್ದಾರೆ. ಕರದಲ್ಲಿ ವೀಣೆ ಹಿಡಿದಿರುವ ಶಾರದೆಯನ್ನು ಆರಾಧಿಸಿದ್ದಾರೆ.
ಶೃಂಗೇರಿ ಪೀಠದ ಪೀಠಾಧಿಪತಿಗಳಾದವರೆಲ್ಲ ಅಪ್ರತಿಮ ಶಾಸ್ತ್ರಪಂಡಿತರು. ಮಹತ್ವದ ವೇದಾಂತ ಕೃತಿಕರ್ತರು ಆಗಿರುವುದರಿಂದ ಇಲ್ಲಿ ನಡೆಯುವ ಸಿಂಹಾಸನ ಪೂಜೆ ಕೂಡ ಮಹತ್ವದ್ದಾಗಿದೆ. ಶಾರದೆ ಆಕರ ರೂಪದಲ್ಲಿ ಪುಸ್ತಕ ಸೇರಿ ಮುಂದೆ ಮಸ್ತಿಕ ಸೇರಬೇಕೆಂಬ ಪ್ರಾರ್ಥನೆ ಸಲ್ಲುತ್ತದೆ. ಸದ್ಬುದ್ಧಿ ಕರುಣಿಸೆಂಬ ಈ ಪ್ರಾರ್ಥನೆ ವೀಣಾಪಾಣಿಗೆ ಸಲ್ಲುತ್ತದೆ. ಆದ್ದರಿಂದಲೇ ವಿವಿಧೆಡೆಗಳಿಂದ ಮಕ್ಕಳನ್ನು ಕರೆತಂದು ಇಲ್ಲಿ ಅಕ್ಷರಾಭ್ಯಾಸ ಮಾಡಿಸುತ್ತಾರೆ.ಶ್ರೀ ಶಾರದಾಂಬೆ ಸನ್ನಿದಿಯಲ್ಲಿ ಸಂಪ್ರದಾಯದಂತೆ ಜಗದ್ಗುರು ಸೋಮವಾರ ಶ್ರೀ ಶಾರದಾಂಬೆಗೆ ನವರಾತ್ರಿಯ ವಿಶೇಷ ಪೂಜೆ, ಮಹಾಮಂಗಳಾರತಿ ನೆರವೇರಿಸಿದರು. ಶ್ರೀ ಶಂಕರಾಚಾರ್ಯ,ಶ್ರೀ ತೋರಣಗಣಪತಿ,ಶ್ರೀ ವಿದ್ಯಾಶಂಕರ,ಶ್ರೀ ಜನಾರ್ದನ ಸ್ವಾಮಿ,ಶ್ರೀ ಸುಬ್ರಮಣ್ಯ ಸ್ವಾಮಿ ಸನ್ನಿದಿಗಳಲ್ಲಿ ನವರಾತ್ರಿಯ ವಿಶೇಷ ಪೂಜೆ ನೆರವೇರಿತು. ನವರಾತ್ರಿ ಅಂಗವಾಗಿ ಶ್ರೀ ಚಕ್ರಕ್ಕೆ ಪೂಜೆ ,ಶ್ರೀ ಚಂದ್ರಮೌಳಿಶ್ವರ ಪೂಜೆ,ಸುವಾಸಿನಿ,ಕೌಮಾರಿ ಪೂಜೆ ನೆರವೇರಿತು.ನಾಲ್ಕು ವೇದಗಳ ಪಠಣ ನಡೆಯಿತು.ಜಗದ್ಗುರುಗಳ ನವರಾತ್ರಿಯ ದರ್ಬಾರ್ ನಡೆಯಿತು.
ರಾಜಬೀದಿ ಉತ್ಸವದಲ್ಲಿ ಶೃಂಗೇರಿ ಪಟ್ಟಣ ವ್ಯಾಪ್ತಿಯ ಭಕ್ತಾದಿಗಳೊಂದಿಗೆ ವಿವಿಧ ಸಂಘ ಸಂಸ್ಥೆಗಳು, ಭಜನಾ ತಂಡಗಳು, ಸಾಂಸ್ಕೃತಿಕ ಕಲಾ ತಂಡಗಳು, ಪಾಲ್ಗೊಂಡು ಮೆರವಣಿಗೆಗೆ ವಿಶೇಷ ಮೆರಗು ನೀಡಿತು. ಶ್ರೀ ಮಠದ ಪ್ರವಚನ ಮಂದಿರದಲ್ಲಿ ನಡೆಯುತ್ತಿರುವ ಸಾಂಸ್ಕೃತಿ ಮಹೋತ್ಸವದಲ್ಲಿ ವಿಶಾಖಪಟ್ಟಣಂನ ಡಾ.ನಿಶ್ಕಲಾ ಕೃಷ್ಣವೇಣಿ ಹಾಗೂ ಬೆಂಗಳೂರಿನ ವಿಧುಷಿ ಮೀನಾ ಮೂರ್ತಿ ತಂಡದವರಿಂದ ವೀಣಾವಾದನ ನಡೆಯಿತು. ಮಂಗಳವಾರ ಶಾರದೆಗೆ ರಾಜರಾಜೇಶ್ವರಿ ಅಲಂಕಾರ ನಡೆಯಲಿದೆ. ಸಾಂಸ್ಕೃತಿಕ ಮಹೋತ್ಸವದಲ್ಲಿ ಚೆನ್ನೈನ ವಿದುಷಿ ಗಾಯಿತ್ರಿ ತಂಡದವರಿಂದ ಹಾಡುಗಾರಿಕೆ ನಡೆಯಲಿದೆ.29 ಶ್ರೀ ಚಿತ್ರ 1-
ಶೃಂಗೇರಿ ಶಾರದೆಗೆ ಸೋಮವಾರ ವೀಣಾಶಾರದಾಲಂಕಾರ ಮಾಡಲಾಗಿತ್ತು.