ಕನ್ನಡಪ್ರಭ ವಾರ್ತೆ ಮೈಸೂರುಅಂತಾರಾಷ್ಟ್ರೀಯ ಖ್ಯಾತಿಯ ಸರೋದ್ ವಾದಕ, ಪದ್ಮಶ್ರೀ ಪುರಸ್ಕೃತ ಪಂಡಿತ ರಾಜೀವ ತಾರಾನಾಥ್ (92) ಅವರು ಮಂಗಳವಾರ ಸಂಜೆ ಇಲ್ಲಿನ ಮಣಿಪಾಲ ಆಸ್ಪತ್ರೆಯಲ್ಲಿ ನಿಧನರಾದರು.
ರಾಜೀವ ತಾರನಾಥರ ಪುತ್ರ ಚೇತನ್ ತಾರಾನಾಥ್ ಅಮೆರಿಕದಲ್ಲಿದ್ದಾರೆ. ಹೀಗಾಗಿ ಅವರ ಶಿಷ್ಯೆ ಹಾಗೂ ಸಾಕು ಮಗಳಂತಿರುವ ಪ್ರೊ.ಕೃಷ್ಣಾ ಮನವಲ್ಲಿ ಅವರು ರಾಜೀವ ತಾರಾನಾಥ್‌ರನ್ನು ನೋಡಿಕೊಳ್ಳುತ್ತಿದ್ದರು.
ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರು ಇತ್ತೀಚೆಗೆ ಆಸ್ಪತ್ರೆಗೆ ಭೇಟಿ ನೀಡಿ, ಅವರ ಆರೋಗ್ಯ ವಿಚಾರಿಸಿ, ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನ ಸೆಳೆಯುವುದಾಗಿ ಭರವಸೆ ನೀಡಿದ್ದರು.ಪಂಡಿತ ತಾರಾನಾಥ್ ಹಾಗೂ ಸುಮತಿಬಾಯಿ ಅವರ ಪುತ್ರರಾಗಿ 1932 ಅ.17ರಂದು ಬೆಂಗಳೂರಿನಲ್ಲಿ ಜನಿಸಿದ ತಾರಾನಾಥರು ಒಂಬತ್ತನೇ ವಯಸ್ಸಿನಲ್ಲೇ ಸಂಗೀತ ಕಚೇರಿ ನೀಡಿದವರು. ಸರೋದ್ ವಾದಕರಾಗಿ ದೇಶ, ವಿದೇಶಗಳಲ್ಲಿ ಅಪಾರ ಸಂಗೀತ ಪ್ರೇಮಿಗಳನ್ನು ಹೊಂದಿದ್ದ ಅವರು ಕನ್ನಡ ಸಿನಿಮಾಗಳಾದ ಸಂಸ್ಕಾರ, ಪಲ್ಲವಿ, ಖಂಡವಿದಕೋ ಮಾಂಸವಿದಕೋ, ಅನುರೂಪ, ಪೇಪರ್ ಬೋಟ್ಸ್, ಶೃಂಗಾರ ಮಾಸ, ಆಗುಂತಕ ಹಾಗೂ ಕಡವು, ಪೊಕ್ಕವೇಯಿಲ್, ಕಾಂಚನಸೀತಾದಂಥ ಮಲೆಯಾಳಂ ಚಲನಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿದ್ದರು.
ಪಂ.ರಾಜೀವ ತಾರಾನಾಥ್ ಅವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.