ತುಮಕೂರು: ತಮ್ಮ ಅಭಿನಯ ಸಾಮರ್ಥ್ಯದಿಂದ ಹಾಗೂ ಭಾಷಾ ನೈಪುಣ್ಯತೆಯಿಂದ ಭಾರತೀಯ ಬಹುತೇಕ ಚಲನಚಿತ್ರಗಳಲ್ಲಿ ಆಯಾ ಭಾಷೆಯ ಪ್ರಬುದ್ಧ ನಟರ ಜೊತೆ ಅಭಿನಯಿಸುವುದರ ಮೂಲಕ ಅಭಿನಯ ಸರಸ್ವತಿ ಎಂದು ಖ್ಯಾತಿ ಪಡೆದು, ಕನ್ನಡದ ಹಿರಿಮೆಯನ್ನು ದೇಶದೆಲ್ಲೆಡೆ ವಿಸ್ತರಿಸಿದ ಕೀರ್ತಿ ಪದ್ಮಭೂಷಣ ಡಾ. ಬಿ.ಸರೋಜಾದೇವಿಯವರಿಗೆ ಸಲ್ಲುತ್ತದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ತಿಳಿಸಿದರು. ಅವರು ಮಂಗಳವಾರ ಕನ್ನಡ ಭವನದಲ್ಲಿ ಡಾ. ಬಿ.ಸರೋಜಾದೇವಿಯವರಿಗೆ ಶ್ರದ್ಧಾಂಜಲಿ ಹಾಗೂ ನುಡಿನಮನ ಸಲ್ಲಿಸಿ ಮಾತನಾಡಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಂಚಾಲಕ ಕೆ.ಎಸ್.ಉಮಾಮಹೇಶ್ ನುಡಿನಮನ ಸಲ್ಲಿಸಿ, ನಾಯಕಿ ಪ್ರಧಾನ ಚಿತ್ರಗಳಲ್ಲಿ ಅಭಿನಯಿಸುವುದರ ಮೂಲಕ ತಮ್ಮದೇ ಛಾಪು ಮೂಡಿಸಿದವರು. ಪೌರಾಣಿಕ, ಐತಿಹಾಸಿಕ ಹಾಗೂ ಭಕ್ತಿಪ್ರಧಾನ ಪಾತ್ರಗಳಲ್ಲಿನ ಅವರ ಅಭಿನಯ ಇಂದಿಗೂ ಕನ್ನಡಿಗರ ಹೃದಯ ಸೂರೆಗೊಂಡಿದೆ. ಕಿತ್ತೂರು ರಾಣಿ ಚನ್ನಮ್ಮನ ಪಾತ್ರದ ಅಭಿನಯ ಹಾಗೂ ಸಂಭಾಷಣೆಗಳ ಮೂಲಕ ಸ್ವಾತಂತ್ರ್ಯದ ಕಿಚ್ಚಿಗೆ ಇಂದಿಗೂ ಸ್ಫೂರ್ತಿಯಾಗಿದ್ದಾರೆ ಎಂದು ತಿಳಿಸಿದರು.
ನುಡಿನಮನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಂಘಟನಾ ಕಾರ್ಯದರ್ಶಿ ಎಸ್.ಯೋಗಾನಂದ್, ಜಿ.ಎಚ್.ಮಹದೇವಪ್ಪ, ತಾಲೂಕು ಅಧ್ಯಕ್ಷ ಚಿಕ್ಕಬೆಳ್ಳಾವಿ ಶಿವಕುಮಾರ್, ಕಾರ್ಯದರ್ಶಿ ಬಿ.ರಾಜಶೇಖರಯ್ಯ, ಎಲೆರಾಂಪುರ ರುದ್ರಮೂರ್ತಿ, ನಟರಾಜು, ಉಪನ್ಯಾಸಕ ರಾಜಶೇಖರ್ ಮೊದಲಾದವರು ಹಾಜರಿದ್ದರು.