ಸುಬ್ರಹ್ಮಣ್ಯ: ಭಕ್ತಿಯ ಆರಾಧನೆ ಭಗವಂತನಿಗೆ ಪ್ರಿಯ. ದಯೆ ಮತ್ತು ಕರುಣೆಯೇ ಪರಮಧರ್ಮ. ಮಾನವೀಯ ಧರ್ಮವು ಸರ್ವರಲ್ಲೂ ಬೇರೂರಿರಬೇಕು. ಧರ್ಮ ಜಾಗೃತಿಗೆ ಇಂತಹ ಸಮ್ಮೇಳನಗಳು ಪೂರಕವಾಗಿದೆ ಎಂದು ಆದಿಚುಂಚನಗಿರಿ ಮಹಾಸಂಸ್ಥಾನದ ಮಂಗಳೂರು ಶಾಖಾ ಮಠದ ಶ್ರೀ ಧರ್ಮಪಾಲನಾಥ ಸ್ವಾಮೀಜಿ ನುಡಿದರು.ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಕಿರುಷಷ್ಠಿ ಮಹೋತ್ಸವದ ಅಂಗವಾಗಿ ನಡೆದ ಧರ್ಮಸಮ್ಮೇಳನದಲ್ಲಿ ಶ್ರೀಗಳು ಆಶೀರ್ವಚನ ನೀಡಿದರು.ನಾಗಾರಾಧನೆ ಅತ್ಯಂತ ಪವಿತ್ರ: ಶ್ರೀ ಸಂತೋಷ್ ಭಾರತೀ ಶ್ರೀಪಾದರುನಾಗಾರಾಧನೆಯು ಅತ್ಯಂತ ಪವಿತ್ರವಾದುದು. ಕುಕ್ಕೆ ಕ್ಷೇತ್ರ ದರುಶನದಿಂದಲೇ ಅರ್ಧದಷ್ಟು ನಾಗದೋಷ ನಿವಾರಣೆಯಾಗುತ್ತದೆ. ಅಷ್ಟೊಂದು ಪಾವನ ಪವಿತ್ರವಾದ ಪುಣ್ಯ ತಾಣ ಸುಬ್ರಹ್ಮಣ್ಯವಾಗಿದೆ. ಇಲ್ಲಿನ ಮಣ್ಣಿನಲ್ಲಿ ಪಾವಿತ್ರತೆ ಇದೆ. ಕುಕ್ಕೆಯು ನಾಗಗಳಿಗೆ ಮುಕ್ತಿ ನೀಡಿದ ಶ್ರೇಷ್ಠ ಕ್ಷೇತ್ರ ಎಂದು ಶ್ರೀ ಬಾರ್ಕೂರು ಮಹಾಸಂಸ್ಥಾನದ ಪೀಠಾಧ್ಯಕ್ಷ ಡಾ.ವಿಶ್ವ ಸಂತೋಷ ಭಾರತೀ ಶ್ರೀಪಾದರು ನುಡಿದರು.ಸಭೆಯ ಅಧ್ಯಕ್ಷತೆಯನ್ನು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ವಹಿಸಿದ್ದರು. ಬೆಂಗಳೂರು ಮಹಾ ನಗರ ಸಾರಿಗೆ ಸಂಸ್ಥೆ ಅಧ್ಯಕ್ಷ ನಿಕೇತ್ ರಾಜ್ ಮೌರ್ಯ ಧಾರ್ಮಿಕ ಉಪನ್ಯಾಸ ನೀಡಿದರು. ಸುಬ್ರಹ್ಮಣ್ಯ ಗ್ರಾ.ಪಂ ಅಧ್ಯಕ್ಷೆ ಸುಜಾತ ಕಲ್ಲಾಜೆ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯರಾದ ರಾಜಗುರು ದ್ವಾರಕನಾಥ್ ಗೂರೂಜಿ, ರವಿ ಶಂಕರ ಶೆಟ್ಟಿ, ಉದ್ಯಮಿ ಕಿರಣ್ ಬುಡ್ಲೆಗುತ್ತು, ನ್ಯಾಯವಾದಿ ಎಂ.ವೆಂಕಪ್ಪ ಗೌಡ, ಗೋಕರ್ಣನಾಥ ದೇವಸ್ಥಾನದ ಆಡಳಿತ ಮಂಡಳಿ ಕೋಶಾಧಿಕಾರಿ ಪದ್ಮರಾಜ್. ಆರ್, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಲಕ್ಷ್ಮೀಶ ಗಬ್ಲಡ್ಕ ಮುಖ್ಯ ಅತಿಥಿಗಳಾಗಿದ್ದರು.