ಶಿಗ್ಗಾಂವಿ: ಗಾಂಧಿ ತಮ್ಮ ಜೀವನದಲ್ಲಿ ಹೆಚ್ಚು ಉಪದೇಶಿಸಲಿಲ್ಲ ಆಚರಿಸಿದರು. ಹಾಗಾಗಿ ನಾವು ಗಾಂಧಿಯನ್ನು ಅರ್ಥಮಾಡಿಕೊಳ್ಳಲು ಅವರ ವಿಚಾರಗಳನ್ನು ಅಧ್ಯಯನ ಮಾಡಿ, ವಿಮರ್ಶೆಗೆ ಒಳಪಡಿಸಿ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಹಾವೇರಿ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ ಎಸ್.ಟಿ. ಬಾಗಲಕೋಟಿ ಹೇಳಿದರು.ಶಿಗ್ಗಾಂವಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬೆಂಗಳೂರಿನ ಗಾಂಧಿ ಸ್ಮಾರಕ ನಿಧಿ, ಬೆಂಗಳೂರಿನ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಬೆಂಗಳೂರಿನ ರಾಜ್ಯ ಎನ್‌ಎಸ್‌ಎಸ್ ಕೋಶದ ಸಹಯೋಗದಲ್ಲಿ ಗಾಂಧೀಜಿ: ನಿನ್ನೆ, ಇಂದು, ನಾಳೆ ಎಂಬ ವಿಷಯದ ಮೇಲೆ ನಡೆದ ಒಂದು ದಿನದ ರಾಜ್ಯ ಮಟ್ಟದ ಕಾರ್ಯಗಾರ ವನ್ನು ಉದ್ಘಾಟಿಸಿ ಮಾತನಾಡಿದರು.ಈ ಮೂರು ವಿಷಯಗಳಿಗಾಗಿ ಗಾಂಧಿ ಇರಬೇಕಾಗಿತ್ತು. ಒಂದು ಇಂದಿನ ರಾಜಕೀಯ ಪರಿಸ್ಥಿತಿ ಎರಡು ಸಂಪನ್ಮೂಲ ಹಂಚಿಕೆ, ಮೂರು ಯುದ್ಧದಿಂದ ಆಗುವ ಕಷ್ಟ್ಟನಷ್ಟಕ್ಕೆ ಹಾಗೂ ನಮ್ಮ ಪರಿಸರ ಉಳಿವಿಗಾಗಿ ಗಾಂಧಿ ಬದುಕಿರಬೇಕಾಗಿತ್ತು ಎಂದರು. ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಗಾಂಧಿ ಸ್ಮಾರಕ ನಿಧಿ ಸಂಘಟಕ ಡಾ. ಅಬಿದ ಬೇಗಂ ಮೋಹನ ಮಹಾತ್ಮ ವಿಷಯದ ಮೇಲೆ ಮಾತನಾಡುತ್ತಾ, ಗಾಂಧೀಜಿಯವರ ಬಾಲ್ಯ ಜೀವನ, ವಿದ್ಯಾರ್ಥಿ ಆಗಿದ್ದಾಗ ಮಾಡಿದ ತಪ್ಪುಗಳು, ಅದನ್ನು ತಿದ್ದಿಕೊಂಡ ಬಗೆ, ವಿದೇಶಿ ಪ್ರಯಾಣ ಮಾಡುವಾಗ ತಮ್ಮ ತಾಯಿಗೆ ನೀಡಿದ ವಚನ, ವಕೀಲಿ ವೃತ್ತಿ ಹಾಗೂ ದಕ್ಷಿಣ ಆಫ್ರಿಕಾದಲ್ಲಾದ ಅವಮಾನದ ವಿರುದ್ಧ ಸತ್ಯ ಮತ್ತು ಅಹಿಂಸಾ ಮಾರ್ಗದಿಂದ ಹೋರಾಟ ಹೀಗೆ ಅವರ ಜೀವನ ಮತ್ತು ಆದರ್ಶ ಮಾರ್ಗದ ಬಗ್ಗೆ ತಿಳಿಸಿದರು.ಗೋಷ್ಠಿ ಒಂದರ ಸಂಪನ್ಮೂಲ ವ್ಯಕ್ತಿಗಳಾದ ಗಾಂಧಿ ಅಧ್ಯಯನ ವಿಭಾಗ ಕರ್ನಾಟಕ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಶಿವಾನಂದ ಶೆಟ್ಟರ್ ಶತಮಾನದ ಆಚೆ ಗಾಂಧಿ ಆತ್ಮಕಥೆ ಎಂಬ ವಿಷಯದ ಮೇಲೆ ಮಾತನಾಡಿದರು. ಆತ್ಮಕಥೆ ಓದುವುದರ ಪ್ರಯೋಜನ ಮತ್ತು ಆತ್ಮಕತೆ ಮತ್ತು ಜೀವನ ಚರಿತ್ರೆಗಿರುವ ವ್ಯತ್ಯಾಸವನ್ನು ತಿಳಿಸಿದರು. ಗಾಂಧೀಜಿಯವ ಆತ್ಮಕಥೆ ಬೇರೆಯವರಿಗಿಂತ ಭಿನ್ನವಾಗಿ ಶ್ರೇಷ್ಠ ಆತ್ಮಕತೆ ಎನಿಸಿಕೊಂಡಿದೆ. ಅಲ್ಲದೆ ಕೇವಲ ಪ್ರಶಂಸನೀಯ ಸಂದರ್ಭಗಳನ್ನು ಚಿತ್ರಿಸದೆ ತಮ್ಮ ನ್ಯೂನತೆಗಳನ್ನು ಹೇಳಿಕೊಂಡಿದ್ದಾರೆ. ಬಾಲ್ಯ ಜೀವನ, ಶಿಕ್ಷಣ, ವಿದೇಶಿ ಪ್ರಯಾಣ, ವಕೀಲಿ ವೃತ್ತಿ, ದಕ್ಷಿಣ ಆಫ್ರಿಕಾದಲ್ಲಿ ಆರಂಭಿಸಿದ ಸತ್ಯಾಗ್ರಹ, ಭಾರತಕ್ಕೆ ಮರಳಿ ಬ್ರಿಟಿಷರ ದೌರ್ಜನ್ಯದ ವಿರುದ್ಧ ಹೋರಾಟ ಹೀಗೆ ತಮ್ಮ ಸತ್ಯಾನ್ವೇಷಣೆಗೆ ನಡೆಸಿದ ಪ್ರಯೋಗಗಳನ್ನು ತಿಳಿಸಿದರು.
ಸಂಜೆ ಸಮರೂಪ ಸಮಾರಂಭದಲ್ಲಿ ಹಾವೇರಿ ವಿಶ್ವವಿದ್ಯಾಲಯದ ಎನ್‌ಎಸ್‌ಎಸ್ ಕೋಶದ ನೂಡಲ್ ಅಧಿಕಾರಿ ಡಾ. ಶಮಂತ್ ಕುಮಾರ್ ಸಮಾರೋಪ ನುಡಿಗಳನಾಡುತ್ತಾ ಇಂದಿನ ಯುವಜನರು ವಾಟ್ಸಾಪ್ ಯುನಿವರ್ಸಿಟಿಯಲ್ಲಿನ ಸಂದೇಶಗಳಿಗೆ ಗಮನಕೊಡದೆ ಓದಿನ ಮೂಲಕ ಗಾಂಧಿಯನ್ನು ಅರ್ಥೈಸಿಕೊಳ್ಳಬೇಕು ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಡಾ. ಎ.ಸಿ. ವಾಲಿ ಮಾತನಾಡುತ್ತಾ, ನಮ್ಮ ಆಸೆಗಳನ್ನು ಪೂರೈಸಲು ಪರಿಸರದಲ್ಲಿ ಎಲ್ಲವೂ ಇದೆ ದುರಾಸೆಗಳಿಗೆ ಅಲ್ಲ ಎಂದರು.ಕಾರ್ಯಗಾರದ ಸಂಚಾಲಕ ಡಾ. ಆನಂದ ಇಂದೂರ ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ಇತಿಹಾಸದಲ್ಲಿ ಗಾಂಧಿಯ ಹೋರಾಟ, ವಾಸ್ತವದಲ್ಲಿ ಗಾಂಧಿ ಮೇಲಿನ ಅಪಪ್ರಚಾರ, ಭವಿಷತ್ತಿನಲ್ಲಿ ಗಾಂಧಿ ವಿಚಾರಗಳನ್ನು ತಲುಪಿಸುವ ರೀತಿ ಬಗ್ಗೆ ಮಾತನಾಡಿದರು. ಪ್ರೊ ಡಿ.ಎಸ್. ಭಟ್, ಪ್ರೊ. ಡಿ.ಎಸ್. ಸೊಗಲದ, ವಿವಿಧ ಕಾಲೇಜಿನ ೫೦ಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿದರು.ಪ್ರೊ. ಮೇಘ ಚಲವಾದಿ. ಡಾ. ಅಂಬಿಳಿ ಪಿಳ್ಳೆ, ಡಾ. ಮುತ್ತು ಸುಣಗಾರ, ಪ್ರೊ, ಆರ್. ಪಿ. ನದಾಫ್, ಡಾ.ಲತಾ, ಪ್ರೊ. ಶುಭ ಹಿರೇಮಠ, ಡಾ. ಪ್ರಬಲ್ ರೋಡ್ಡಣ್ಣನವರ್ ಸೇರಿದಂತೆ ಇನ್ನಿತರರು ಇದ್ದರು. ಪ್ರೊ ಇಮ್ತಿಯಾಜ್ ಖಾನ್ ನಿರೂಪಿಸಿದರು. ಪ್ರೊ. ಡಿ. ಎಸ್. ಭಟ್ ಸ್ವಾಗತಿಸಿದರು ಪ್ರೊ. ಪ್ರತಿಮಾ ಗುಂಜಳ ವಂದಿಸಿದರು.