ರಾಣಿಬೆನ್ನೂರು: ಸಂಸತ್ತಿನಲ್ಲಿ ಶೇ. 33ರಷ್ಟು ಮಹಿಳಾ ಮೀಸಲಾತಿ ಅಂಗೀಕಾರಕ್ಕೆ ಅಡ್ಡಿಪಡಿಸಿದ ಕಾಂಗ್ರೆಸ್ ನಡೆ ಖಂಡಿಸಿ ಬಿಜೆಪಿ ಮಹಿಳಾ ಕಾರ್ಯಕರ್ತರು ಸೋಮವಾರ ನಗರದ ಬಸವೇಶ್ವರ ವೃತ್ತದ (ಕೋರ್ಟ್ ಸರ್ಕಲ್) ಬಳಿ ಪ್ರತಿಭಟನೆ ನಡೆಸಿದರು. ನಗರದ ಸ್ಟೇಷನ್ ರಸ್ತೆ ಬಿಜೆಪಿ ಕಚೇರಿ ಬಳಿಯಿಂದ ಪಾದಯಾತ್ರೆ ಮೂಲಕ ಕೋರ್ಟ್ ಸರ್ಕಲ್‌ವರೆಗೆ ಸಾಗಿ ಬಂದರು. ದಾರಿಯುದ್ದಕ್ಕೂ ಕಾಂಗ್ರೆಸ್ ನಡೆ ಖಂಡಿಸಿ ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗಿದರು. ಮಾಜಿ ಶಾಸಕ ಅರುಣಕುಮಾರ ಪೂಜಾರ ಮಾತನಾಡಿ, ಮಹಿಳೆಯರು ಶಾಸನ ಸಭೆಗಳಲ್ಲಿ ಶೇ.33 ಮೀಸಲಾತಿ ಕಲ್ಪಿಸುವ ಉದ್ದೇಶದಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಮಸೂದೆ ಮಂಡಿಸಿತ್ತು. ಸರ್ವಾನುಮತದಿಂದ ಮಸೂದೆಗೆ ಸಮ್ಮತಿ ಸೂಚಿಸುವ ಬದಲು ಕಾಂಗ್ರೆಸ್ ನೇತೃತ್ವದ ವಿಪಕ್ಷಗಳು ಅದು ಅಂಗೀಕಾರವಾಗದಂತೆ ನೋಡಿಕೊಂಡರು. ರಾಹುಲ್ ಗಾಂಧಿಯವರ ಅಜ್ಜಿ ಕೂಡ ಒಬ್ಬ ಮಹಿಳೆಯಾಗಿದ್ದು ದೇಶದ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದಾರೆ. ಇದಲ್ಲದೆ ಅವರ ತಾಯಿ ಕೂಡ ಈ ಹಿಂದೆ ಲೋಕಸಭೆ ಸದಸ್ಯೆಯಾಗಿದ್ದು ಇದೀಗ ರಾಜ್ಯಸಭೆ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಸಹೋದರಿ ಕೂಡ ಸಂಸದೆಯಾಗಿದ್ದಾರೆ. ಇದನ್ನು ಗಮನಿಸಿದಾಗ ತಮ್ಮ ಕುಟುಂಬದ ಮಹಿಳೆಯರು ಮಾತ್ರ ಶಾಸನ ಸಭೆಗಳ ಸದಸ್ಯರಾಗಬಹುದು. ಆದರೆ ದೇಶದ ಬೇರೆ ಮಹಿಳೆಯರಿಗೆ ಇಂತಹ ಅವಕಾಶ ಲಭಿಸಬಾರದು ಎಂಬ ಧೋರಣೆ ಹೊಂದಿದ್ದಾರೆ. ಮುಂದಿನ ದಿನಗಳಲ್ಲಿ ಪುನಃ ಸಂಸತ್ತಿನಲ್ಲಿ ಮಸೂದೆ ಅಂಗೀಕಾರಕ್ಕೆ ಬಿಜೆಪಿ ನೇತೃತ್ವದ ಎನ್‌ಡಿಎ ಶ್ರಮಿಸಲಿದೆ ಎಂದರು. ಕಾರವಾರ ಜಿಲ್ಲಾ ಉಸ್ತುವಾರಿ ಭಾರತಿ ಜಂಬಗಿ ಮಾತನಾಡಿ, ಮಹಿಳಾ ಮೀಸಲಾತಿ ಲಾಭ ಕೇವಲ ಬಿಜೆಪಿ ಮಹಿಳೆಯರಿಗೆ ಸಿಗುವುದಿಲ್ಲ. ಎಲ್ಲಾ ರಾಜಕೀಯ ಪಕ್ಷಗಳ ಮಹಿಳೆಯರಿಗೂ ಇದು ಪ್ರಯೋಜನಕಾರಿಯಾಗಿದೆ. ಆದ್ದರಿಂದ ನಮ್ಮ ಹೋರಾಟಕ್ಕೆ ಕಾಂಗ್ರೆಸ್ ಪಕ್ಷದ ಮಹಿಳೆಯರೂ ಕೈ ಜೋಡಿಸಬೇಕು ಎಂದರು. ರಾಜ್ಯ ಬಿಜೆಪಿ ಘಟಕದ ಉಪಾಧ್ಯಕ್ಷ ಡಾ. ಬಸವರಾಜ ಕೇಲಗಾರ, ನಗರ ಘಟಕದ ಅಧ್ಯಕ್ಷ ಮಂಜುನಾಥ ಕಾಟಿ, ಗ್ರಾಮೀಣ ಘಟಕದ ಅಧ್ಯಕ್ಷ ಸುಭಾಸ ಶಿರಗೇರಿ, ಚೋಳಪ್ಪ ಕಸವಾಳ, ಎ.ಬಿ. ಪಾಟೀಲ, ಅನ್ನಪೂರ್ಣ ಕಿಚಡಿ, ಗಂಗಮ್ಮ ಹಾವನೂರ, ಶಾರದಾ ಇಚ್ಚಂಗಿ, ಅಕ್ಷತಾ ಮಾಳಗಿಮನಿ, ಸುಮಲತಾ ಮಳ್ಳೂರ, ಭಾಗ್ಯ ಬೆನ್ನೂರ, ಮಮತಾ ಕಟ್ಟಪ್ಪನವರ, ಸರೋಜಾ ಕೊಟ್ರಪ್ಪನವರ, ಗಿರಿಜಮ್ಮ ನಿಡಗುಂದಿ, ಗೌರಮ್ಮ, ಲಿಂಗರಾಜ ಬೂದನೂರ, ರಾಜು ಬಣಕಾರ, ಮೌನೇಶ ತಳವಾರ, ಪವನಕುಮಾರ ಮಲ್ಲಾಡದ, ಸಿದ್ಧು ಚಿಕ್ಕಬಿದರಿ, ಅಶೋಕ ಪಾಸಿಗಾರ, ನವೀನ ಅಡ್ಡಿ, ರಮೇಶ ಕರಡೆಣ್ಣನವರ, ಶಿವಕುಮಾರ ಹರ್ಕನಾಳ, ಮೈಲಪ್ಪ ಗೋಣಿಬಸಮ್ಮನವರ, ಪ್ರಭುಸ್ವಾಮಿ ಕರ್ಜಗಿಮಠ, ಮಲ್ಲಿಕಾರ್ಜುನ ಅಂಗಡಿ, ಬಸವರಾಜ ರೊಡ್ಡನವರ, ಸಂತೋಷ ತೇವರಿ, ಮೃತ್ಯುಂಜಯ ಪಾಟೀಲ, ಅನಿಲ ಸಿದ್ದಾಳಿ ಮತ್ತಿತರರಿದ್ದರು.