ದಿ. ಪಿ.ಎಸ್. ಕಾಮತ ಕುರಿತಾದ ಪುಸ್ತಕ ಬಿಡುಗಡೆ
ಸ್ವಾತಂತ್ರ್ಯ ಹೋರಾಟಗಾರರೂ, ಭಾಷಾವಾರು ರಾಜ್ಯಗಳ ರಚನೆಯ ಸಂದರ್ಭ ಕೇಂದ್ರ ಸರ್ಕಾರಕ್ಕೆ ವಿವಿಧ ಹಂತಗಳಲ್ಲಿ ಸಲಹೆಗಳನ್ನು ನೀಡುತ್ತ, ಗಡಿ ಪ್ರದೇಶಗಳಾದ ಕಾರವಾರ, ಹಳಿಯಾಳ, ಸುಪಾ ಮತ್ತು ಖಾನಾಪುರ ತಾಲೂಕುಗಳು ಕರ್ನಾಟಕಕ್ಕೆ ಸೇರಬೇಕು ಎಂದು ಮಹಾಜನ ಸಮಿತಿಯ ಎದುರು ವಾದಿಸಿ ಯಶಸ್ವಿಯಾದ ದಿ. ಪಿ.ಎಸ್. ಕಾಮತರು ಇಂದಿನ ಯುವಕರಿಗೆ ದಾರಿದೀಪವಾಗಿದ್ದಾರೆ ಎಂದು ಸಾಹಿತಿ ಮತ್ತು ಕರ್ನಾಟಕ ಕುಲಪುರೋಹಿತ ಆಲೂರ್ ವೆಂಕಟರಾವ್ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ನ ಅಧ್ಯಕ್ಷ ರಂಜಾನ್ ದರ್ಗಾ ಹೇಳಿದ್ದಾರೆ.
ಕರ್ನಾಟಕ ಕುಲಪುರೋಹಿತ ಆಲೂರ ವೆಂಕಟರಾವ್ ಸ್ಮಾರಕ ಟ್ರಸ್ಟ್ ಮತ್ತು ಕೆನರಾ ವೆಲ್ ಫೇರ್ ಟ್ರಸ್ಟಿನ ದಿವೇಕರ ವಾಣಿಜ್ಯ ಮಹಾ ವಿದ್ಯಾಲಯದ ಸಂಯುಕ್ತ ಆಶ್ರಯದಲ್ಲಿ ಸೋಮವಾರ ನಡೆದ ಕರ್ನಾಟಕ ಏಕೀಕರಣ ಹೋರಾಟಗಾರರ ವ್ಯಕ್ತಿ ಚಿತ್ರ ಮಾಲೆಯಡಿಯಲ್ಲಿ ರಚಿಸಲ್ಪಟ್ಟ ಪಿ.ಎಸ್.ಕಾಮತ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.ಪಿ.ಎಸ್. ಕಾಮತರ ಹೋರಾಟದ ವಿವಿಧ ಮಜಲು ವಿವರಿಸಿದ ಅವರು, ಕಾಮತರ ಮಾತೃಭಾಷೆ ಕೊಂಕಣಿಯಾದರೂ,ಅವರು ನೆಲದ ಭಾಷೆಯಾದ ಕನ್ನಡಕ್ಕಾಗಿ ಹೋರಾಡಿದರು. ಇಂಥ ಶ್ರೇಷ್ಠ ವ್ಯಕ್ತಿಗಳನ್ನು ನಾವಿಂದು ಮರೆತಿದ್ದೇವೆ. ಸ್ವಾತಂತ್ರ್ಯ ನಮ್ಮ ಜನ್ಮ ಸಿದ್ಧ ಹಕ್ಕು ಎಂದ ತಿಲಕರನ್ನು, ಭಾರತದ ವಿವಿಧ ಜನಾಂಗಗಳನ್ನು ಒಂದೇ ಛತ್ರದಡಿಗೆ ತಂದು ದೇಶದ ಸ್ವಾತಂತ್ರ್ಯಕ್ಕಾಗಿ ಪ್ರೇರೇಪಿಸಿದ ಮಹಾತ್ಮಾ ಗಾಂಧಿಯಂಥವರನ್ನು ಮರೆಯುತ್ತಿದ್ದೇವೆ. ಇಂಥ ವಾತಾವರಣ ಬದಲಾಗಬೇಕು ಮತ್ತು ಜನ ಸೌಹಾರ್ದದಿಂದ ಬದುಕುವಂತಾಗಬೇಕು ಎಂದು ಹೇಳಿದರು.
ಪಿ.ಎಸ್. ಕಾಮತರ ಕುರಿತು ಕಿರು ಪುಸ್ತಕವನ್ನು ಬರೆದ ಲೇಖಕಿ ಸುನಂದಾ ಕಡಿಮೆ ಪ್ರಾಸ್ತಾವಿಕವಾಗಿ ಮಾತನಾಡಿ, ಪುಸ್ತಕ ಪರಿಚಯಿಸಿದರು.
ದಿವೇಕರ ವಾಣಿಜ್ಯ ವಿದ್ಯಾಲಯದ ಪ್ರಾಚಾರ್ಯ ಬಿ.ಆರ್.ತೋಳೆ ಸ್ವಾಗತಿಸಿದರು. ಕನ್ನಡ ಪ್ರಾಧ್ಯಾಪಕ ರಾಜೇಶ ಮರಾಠೆ ವಂದಿಸಿದರು. ಬಿಸಿಎ ವಿಭಾಗದ ಮುಖ್ಯಸ್ಥ ಡಾ. ಹರೀಶ್ ಕಾಮತ ನಿರೂಪಿಸಿದರು. ನಿವೃತ್ತ ಪ್ರಾಚಾರ್ಯ ಆರ್.ಎಸ್. ಹಬ್ಬು ಇದ್ದರು.