ಧಾರವಾಡ: 16ನೇ ಶತಮಾನದಲ್ಲಿ ಕರ್ನಾಟಕ ಕಂಡ ಒಬ್ಬ ಶ್ರೇಷ್ಠ ಶಿವಶರಣ ವಚನಕಾರ, ದಾರ್ಶನಿಕ ಕವಿ ಸರ್ವಜ್ಞನು ತ್ರಿಪದಿಗಳನ್ನು ರಚಿಸುವ ಮೂಲಕ ವಚನ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಸರ್ವಜ್ಞನ ತ್ರಿಪದಿಗಳು ಕನ್ನಡ ಸಾಹಿತ್ಯಕ್ಕೆ ಅಮೂಲ್ಯ ಕೊಡುಗೆ ಎಂದು ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಹೇಳಿದರು.
ಸರ್ವಜ್ಞ ಎಂದರೆ ಎಲ್ಲವನ್ನು ತಿಳಿದವನು. ಸಮಾಜದ ಜ್ಞಾನವನ್ನು ಅರಿತವನು. ಸರ್ವಜ್ಞ ಕವಿಯು ಜೀವನದ ನೈತಿಕತೆ, ವಿದ್ಯೆ, ಕೃಷಿ ಹಾಗೂ ಜೀವನದ ಕುರಿತ ಆಳವಾದ ಜ್ಞಾನವನ್ನು ಬೆಳೆಸಿಕೊಳ್ಳುವುದರ ಮೂಲಕ ದೊಡ್ಡ ವ್ಯಕ್ತಿತ್ವವನ್ನು ಹೊಂದಿದ್ದರು ಎಂದರು.
ಸರ್ವಜ್ಞ ಸಮಾಜ ಸುಧಾರಣೆಗೆ ವೈವಿಧ್ಯಮಯ ವಿಚಾರಗಳು, ವಚನಗಳು ಹಾಗೂ ಕನ್ನಡ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಸರ್ವಜ್ಞನ ವಿಚಾರಧಾರೆಗಳು ವಿದ್ಯಾರ್ಥಿಗಳಿಗೆ ಮಾದರಿ ಆಗಬೇಕು. ವಿದ್ಯಾರ್ಥಿಗಳು ಕೇವಲ ಅಂಕಪಟ್ಟಿ ಪಡೆಯಲು ವಿದ್ಯಾಭ್ಯಾಸ ಮಾಡುವುದಲ್ಲದೆ ಜೀವನದಲ್ಲಿ ಮೌಲ್ಯ, ಆದರ್ಶ, ನೈತಿಕತೆಯನ್ನು ಅಳವಡಿಸಿಕೊಳ್ಳಬೇಕು. ಮನಸ್ಸಿದ್ದರೆ ಮಾರ್ಗ ಎನ್ನುವ ವಿಚಾರ ಎಲ್ಲರಿಗೂ ತಿಳಿದಿದೆ. ಆದರಿಂದ ವಿದ್ಯಾರ್ಥಿಗಳು ಉತ್ತಮ ಮನಸ್ಸಿನಿಂದ ವಿದ್ಯಾಭ್ಯಾಸ ಮಾಡಬೇಕು. ಅಭ್ಯಾಸ ಮಾಡುವುದಕ್ಕೆ ಶಾಂತಿಯ ಸ್ಥಳ ಹಾಗೂ ಮನಸ್ಸು ಇರಬೇಕು. ಆಸ್ತಿ-ಅಂತಸ್ತು ಕಳ್ಳತನ ಮಾಡಬಹುದು. ಆದರೆ ವಿದ್ಯಾಭ್ಯಾಸದಿಂದ ಪಡೆದ ಜ್ಞಾನವನ್ನು ಯಾರು ಕಳ್ಳತನ ಮಾಡಲು ಸಾಧ್ಯವಿಲ್ಲ ಎಂದರು.ರಾಯಾಪುರದ ಜಿ.ಟಿ.ಟಿ.ಸಿ. ಪ್ರಾಂಶುಪಾಲ ಶಿವಾನಂದ ಕುಂಬಾರ ವಿಶೇಷ ಉಪನ್ಯಾಸ ನೀಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ನಿರೂಪಿಸಿದರು. ಕರ್ನಾಟಕ ಪ್ರದೇಶ ಕುಂಬಾರ ಸಂಘದ ಅಧ್ಯಕ್ಷ ಬಸವಂತಪ್ಪ ಚಕ್ರಸಾಲಿ, ನಿವೃತ್ತ ನ್ಯಾಯಾಧೀಶ ಜಿ. ಎಂ. ಕುಂಬಾರ ಹಾಗೂ ಎಂ.ಎಂ. ಕಲ್ಬುರ್ಗಿ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ನ ಅಧ್ಯಕ್ಷ ವೀರಣ್ಣ ರಾಜೂರ ಇದ್ದರು.