ಪೂಜೆಗೆ ಸೀಮಿತವಾದ ಸಾಸಲು ಜಾತ್ರೆ; ಭಕ್ತರಿಗೆ ಬೇಸರ

KannadaprabhaNewsNetwork | Published : Apr 30, 2025 12:35 AM

ಸಾರಾಂಶ

ನಾಲ್ಕೈದು ವರ್ಷಗಳಿಂದ ರಥಗಳು ಶಿಥಿಲವಾಗಿದ್ದು, ಮುಜುರಾಯಿ ಇಲಾಖೆಗೆ ಸೇರಿದ ಸೋಮೇಶ್ವರ, ಶಂಭುಲಿಂಗೇಶ್ವರ, ಕುದುರೆ ಮಂಡಮ್ಮದೇವರ ರಥೋತ್ಸವಕ್ಕೆ ಈ ಬಾರಿಯೂ ಕಡಿವಾಣ ಹಾಕಿ ಸಾಂಕೇತಿಕವಾಗಿ ರಥಗಳಿಗೆ ಪೂಜಿಸಲು ಮಾತ್ರ ಅನುಮತಿ ನೀಡಲಾಗಿತ್ತು.

ಕನ್ನಡಪ್ರಭ ವಾರ್ತೆ ಕಿಕ್ಕೇರಿ

ಸಾಸಲು ಗ್ರಾಮದಲ್ಲಿ ಈ ಬಾರಿಯೂ ಜೋಡಿ ಬ್ರಹ್ಮರಥೋತ್ಸವ ನಡೆಯದೆ ರಥಗಳಿಗೆ ಪೂಜೆ ಮಾಡುವ ಮೂಲಕ ಭಕ್ತರು ಬೇಸರ ವ್ಯಕ್ತಪಡಿಸಿದರು.

ನಾಲ್ಕೈದು ವರ್ಷಗಳಿಂದ ರಥಗಳು ಶಿಥಿಲವಾಗಿದ್ದು, ಮುಜುರಾಯಿ ಇಲಾಖೆಗೆ ಸೇರಿದ ಸೋಮೇಶ್ವರ, ಶಂಭುಲಿಂಗೇಶ್ವರ, ಕುದುರೆ ಮಂಡಮ್ಮದೇವರ ರಥೋತ್ಸವಕ್ಕೆ ಈ ಬಾರಿಯೂ ಕಡಿವಾಣ ಹಾಕಿ ಸಾಂಕೇತಿಕವಾಗಿ ರಥಗಳಿಗೆ ಪೂಜಿಸಲು ಮಾತ್ರ ಅನುಮತಿ ನೀಡಲಾಗಿತ್ತು.

ಲಕ್ಷಾಂತರ ರು. ವರಮಾನ ದೇಗುಲಕ್ಕೆ ಬರಲಿದೆ. ಮುಜುರಾಯಿ ಇಲಾಖೆ 2 ವರ್ಷವಾದರೂ ಹೊಸ ರಥಗಳನ್ನು ಸಿದ್ಧಪಡಿಸಿಲ್ಲ. ಜೀರ್ಣೋದ್ಧಾರದ ನೆಪದಲ್ಲಿ ದೇಗುಲ ಕೆಡವಲಾಗಿದೆ. ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದೆ. ಅಧಿಕಾರಿಗಳ ನಿರ್ಲಕ್ಷವೇ ಎಲ್ಲಕ್ಕೂ ಕಾರಣ ಭಕ್ತರು ದೂರಿದರು.

ಸೋಮೇಶ್ವರ, ಶಂಭುಲಿಂಗೇಶ್ವರ ದೇಗುಲಗಳ ಜೀರ್ಣೋದ್ಧಾರ ಕಾರ್ಯ ನಡೆಯುತ್ತಿರುವ ಸಲುವಾಗಿ ಮೂಲ ದೇವರನ್ನು ಬಾಲಾಯದಲ್ಲಿ ಪ್ರತಿಷ್ಟಾಪಿಸಲಾಗಿದೆ. 2 ವರ್ಷಗಳಿಂದ ಕುಂಟುತ್ತ ದೇಗುಲ ನವೀಕರಣವಾಗುತ್ತಿದೆ. ಉತ್ಸವಮೂರ್ತಿಯನ್ನು ಗ್ರಾಮದಲ್ಲಿ ಮೆರವಣಿಗೆ ಮಾಡಲಾಗದೆ ಭಕ್ತರು ಬೇಸರ ವ್ಯಕ್ತಪಡಿಸಿದರು.

ಮಂಟಪದಿಂದ ಎರಡು ರಥಗಳನ್ನು ಸ್ವಲ್ಪ ಮುಂದೆ ಎಳೆದು ತರಲಾಯಿತು. ರಥಗಳನ್ನು ಶುಚಿಗೊಳಿಸಿ ಪುಷ್ಪಗಳಿಂದ ಅಲಂಕರಿಸಲಾಗಿತ್ತು. ರಥದ ಚಕ್ರಗಳಿಗೆ ಪೂಜಿಸಿ ಅರ್ಚಕರು ತ್ವರಿತವಾಗಿ ದೇಗುಲ ನಿರ್ಮಾಣ, ರಥ ನಿರ್ಮಾಣವಾಗಲಿ ಎಂದುದೇವರಲ್ಲಿ ಪ್ರಾರ್ಥಿಸಿ ಪೂಜಿಸಿದರು.

ಅರ್ಚಕರು ರಥಗಳಿಗೆ ಪೂಜಾ ವಿಧಿ ವಿಧಾನ ನೆರವೇರಿಸಿ ಭಕ್ತರಿಗೆ ತೀರ್ಥ ಪ್ರಸಾದ ವಿನಿಯೋಗ ಮಾಡಿದರು. ರಥ ಪೂಜೆಯಲ್ಲಿ ಉಪ ತಹಸೀಲ್ದಾರ್ ವೀಣಾ, ಗ್ರಾಮ ಆಡಳಿತಾಧಿಕಾರಿ ಪ್ರಸನ್ನ ಭಾಗಿಯಾಗಿದ್ದರು.

ಶ್ರೀವಿನಾಯಕ ದೇವಸ್ಥಾನ ಜೀರ್ಣೋದ್ಧಾರಕ್ಕೆ 1 ಲಕ್ಷ ರು. ದೇಣಿಗೆ

ಶ್ರೀರಂಗಪಟ್ಟಣ:

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ಪಟ್ಟಣದ ಕಾವೇರಿಪುರದ ಶ್ರೀವಿನಾಯಕ ದೇವಸ್ಥಾನ ಜೀರ್ಣೋದ್ಧಾರ ಕಾರ್ಯಕ್ರಮಕ್ಕೆ 1 ಲಕ್ಷ ರು. ದೇಣಿಗೆ ನೀಡಲಾಯಿತು.

ಸಂಸ್ಥೆ ಯೋಜನಾಧಿಕಾರಿ ಗಣಪತಿ ಭಟ್ ಮಾತನಾಡಿ, ಕ್ಷೇತ್ರದಾದ್ಯಂತ ಹಲವು ದೇವಸ್ಥಾನಗಳ ಜೀರ್ಣೋದ್ಧಾರ ಕಾರ್ಯಕ್ಕೆ ಸಂಸ್ಥೆ ಮುಂದಾಗುತ್ತಿದೆ. ವಿನಾಯಕ ಸೇವಾ ಸಂಸ್ಥೆಯಿಂದ ದೇವಸ್ಥಾನದ ಅಭಿವೃದ್ಧಿ ಕಾರ್ಯಕ್ಕೆ ಸಹಾಯ ಕೋರಿದ್ದರಿಂದ ಶ್ರೀ ಕ್ಷೇತ್ರದಿಂದ ದೇಣಿಗೆ ನೀಡಲಾಗಿದೆ ಎಂದರು.

ಈ ವೇಳೆ ವಿನಾಯಕ ಸೇವಾ ಸಂಸ್ಥೆ ಅಧ್ಯಕ್ಷ ವೆಂಕಟೇಶ್, ಪುರಸಭಾ ಸದಸ್ಯ ಶ್ರೀನಿವಾಸ್, ಮುಖಂಡರಾದ ರಮೇಶ, ಲೋಕೇಶ್ ಕುಮಾರ್, ಮಂಜುನಾಥ, ಜಯಣ್ಣ, ದಿವಾಕರ, ನಾಗರಾಜು, ಸಂಸ್ಥೆ ಮೇಲ್ವಿಚಾರಕರಾದ ಸ್ಮಜಾತ, ಸುಮತಿ ಸೇರಿದಂತೆ ಸೇವಾ ಪ್ರತಿನಿಧಿಗಳು ಇದ್ದರು.

Share this article