ಶಶಿಭೂಷಣ ಹೆಗಡೆಗೆ ಆರ್‌ಎಸ್‌ಎಸ್‌ ಬುಲಾವ್

KannadaprabhaNewsNetwork |  
Published : Jan 06, 2024, 02:00 AM ISTUpdated : Jan 06, 2024, 11:17 AM IST
Shashibhushan_Hegde

ಸಾರಾಂಶ

ರಾಮಕೃಷ್ಣ ಹೆಗಡೆ ಕುಟುಂಬದ ಕುಡಿ, ಅನುಭವಿ ರಾಜಕಾರಣಿ ಶಶಿಭೂಷಣ ಹೆಗಡೆ ಅವರನ್ನು ಆರ್‌ಎಸ್‌ಎಸ್‌ ಗುರುವಾರ ತುರ್ತಾಗಿ ಬೆಂಗಳೂರಿಗೆ ಕರೆಸಿಕೊಂಡಿದ್ದು, ಉತ್ತರ ಕನ್ನಡ ಜಿಲ್ಲಾ ಬಿಜೆಪಿಯಲ್ಲಿ ತೀವ್ರ ಸಂಚಲನ ಉಂಟಾಗಿದೆ.

ಮಂಜುನಾಥ ಸಾಯೀಮನೆ

ಶಿರಸಿ: ರಾಮಕೃಷ್ಣ ಹೆಗಡೆ ಕುಟುಂಬದ ಕುಡಿ, ಅನುಭವಿ ರಾಜಕಾರಣಿ ಶಶಿಭೂಷಣ ಹೆಗಡೆ ಅವರನ್ನು ಆರ್‌ಎಸ್‌ಎಸ್‌ ಗುರುವಾರ ತುರ್ತಾಗಿ ಬೆಂಗಳೂರಿಗೆ ಕರೆಸಿಕೊಂಡಿದ್ದು, ಉತ್ತರ ಕನ್ನಡ ಜಿಲ್ಲಾ ಬಿಜೆಪಿಯಲ್ಲಿ ತೀವ್ರ ಸಂಚಲನ ಉಂಟಾಗಿದೆ.

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಟಿಕೆಟ್ ಯಾರಿಗೆ? ಎಂಬ ಬಗ್ಗೆ ಚರ್ಚೆ ಜೋರಾಗಿ ನಡೆದಿರುವಾಗಲೇ ಈ ಬೆಳವಣಿಗೆ ಕದನ ಕೌತುಕವಾಗಿ ಪರಿಣಮಿಸಿದೆ.

ಉತ್ತರ ಕನ್ನಡ ಲೋಕಸಭಾ ಅಭ್ಯರ್ಥಿ ಅನಂತಕುಮಾರ ಹೆಗಡೆ ಕಳೆದ ಮೂರು ವರ್ಷಗಳಿಂದ ರಾಜಕೀಯದಿಂದ ದೂರ ಸರಿಯಲು ನಿರ್ಧರಿಸಿದ್ದರು. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಪಕ್ಷದಿಂದ ಬೇರೆ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕು ಎಂಬುದನ್ನು ಅವರು ಬಹಿರಂಗವಾಗಿಯೇ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಅದುವರೆಗೂ ಜೆಡಿಎಸ್‌ನಲ್ಲಿ ಸಕ್ರೀಯವಾಗಿದ್ದ ಶಶಿಭೂಷಣ ಹೆಗಡೆ ಅವರನ್ನು ಬಿಜೆಪಿಗೆ ಕರೆತರಲಾಗಿದ್ದು, ಅವರೇ ಮುಂದಿನ ಅಭ್ಯರ್ಥಿ ಎನ್ನುವ ಮಾತಗಳೂ ಕೇಳಿ ಬಂದಿದ್ದವು.

ಎರಡು ಧ್ರುವಗಳು: ಜಿಲ್ಲಾ ಬಿಜೆಪಿಯಲ್ಲಿ ಎರಡು ಪ್ರಬಲ ಶಕ್ತಿಗಳಾಗಿ ಬೆಳೆದವರು ಸಂಸದ ಅನಂತಕುಮಾರ ಹೆಗಡೆ ಮತ್ತು ವಿಧಾನಸಭಾ ಮಾಜಿ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ. ತಮ್ಮ ನೆರಳಿನಲ್ಲಿ ಬೆಳೆಯುವವರನ್ನು ಪ್ರೋತ್ಸಾಹಿಸದೇ ಎರಡು ಧ್ರುವಗಳಂತೆ ಬೆಳೆದ ಈ ಇಬ್ಬರಿಗೂ ತಮ್ಮ ರಾಜಕೀಯ ಪ್ರಾಬಲ್ಯವನ್ನು ಸಾಬೀತು ಮಾಡುವ ಕಾಲ ಎದುರಾಗಿದೆ ಎನ್ನಬಹುದು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹಿರಿಯ ನಾಯಕರಿಗೆ ವಿಶ್ರಾಂತಿ ನೀಡುವ ಬಿಜೆಪಿ ಹೈಕಮಾಂಡ್ ನಿರ್ಧಾರ ಒಂದು ಹಂತದಲ್ಲಿ ಸೋಲಿಲ್ಲದ ಸರದಾರ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೂ ಅನ್ವಯವಾಗುವ ಸಾಧ್ಯತೆ ಇತ್ತು. ಅಂತೂ ಅಂತಿಮ ಕ್ಷಣದಲ್ಲಿ ಟಿಕೆಟ್ ಸಿಕ್ಕರೂ ಗೆಲುವು ದಕ್ಕಲಿಲ್ಲ. ಆರು ಬಾರಿ ಶಾಸಕರಾಗಿ, ಶಿಕ್ಷಣ ಸಚಿವರಾಗಿ, ವಿಧಾನಸಭಾ ಅಧ್ಯಕ್ಷರಾಗಿ ಸೋಲು ಕಂಡಿರುವ ಅವರಿಗೆ ವಿಧಾನಸಭೆಗೆ ಮತ್ತೆ ಟಿಕೆಟ್ ನೀಡುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ. ಅವರ ಅನುಭವಕ್ಕೆ ಸಂಸದ ಸ್ಥಾನವೇ ಸೂಕ್ತ ಎನ್ನುವ ಅಭಿಪ್ರಾಯವಿದೆ.

ಇನ್ನೊಂದೆಡೆ ಸಂಸದ ಅನಂತಕುಮಾರ ಹೆಗಡೆ ರಾಜಕೀಯ ವೈರಾಗ್ಯದ ಬಗ್ಗೆ ಹೇಳುತ್ತಿದ್ದರೂ ವಿಶ್ವೇಶ್ವರ ಹೆಗಡೆ ಅವರಿಗೆ ಟಿಕೆಟ್ ಸಿಗುವ ಸಾಧ್ಯತೆ ಇದೆ ಎಂಬ ಹಿನ್ನೆಲೆಯಲ್ಲಿ ಅವರ ಕಾರ್ಯಕರ್ತರು, ಅಭಿಮಾನಿಗಳು ಮತ್ತೆ ಸ್ಪರ್ಧಿಸುವಂತೆ ಮನೆ ಬಾಗಿಲಿಗೇ ಬಂದು ಒತ್ತಾಯಿಸುತ್ತಿದ್ದಾರೆ. ಹೀಗಾಗಿ, ಈ ಇಬ್ಬರಿಗೂ ಮುಂಬರುವ ಲೋಕಸಭೆ ಚುನಾವಣೆ ರಾಜಕೀಯ ಭವಿಷ್ಯದ ದೃಷ್ಟಿಯಿಂದಲೂ ಮಹತ್ವದ್ದು ಎನ್ನಬಹುದು.

ಮನೆಬಾಗಿಲಿಗೆ ಬಂದ ಕಾರ್ಯಕರ್ತರಿಗೆಲ್ಲ "ಯೋಗ್ಯ ಆಕಾಂಕ್ಷಿಗಳು ಪಕ್ಷದಲ್ಲಿದ್ದಾರೆ " ಎಂದು ಅನಂತಕುಮಾರ ಹೆಗಡೆ ಹೇಳಿದ್ದರು. ಇದೀಗ ಶಶಿಭೂಷಣ ಹೆಗಡೆ ಅವರಿಗೆ ಆರ್‌ಎಸ್‌ಎಸ್‌ನ ತುರ್ತು ಬುಲಾವ್ ನೀಡಿರುವುದು ನಿಜಕ್ಕೂ ಕಾಕತಾಳೀಯ.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ