ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
‘ವಾತ್ಸಲ್ಯ’ ಮನೆ ನಿವಾಸಿಗಳ ಸಂತೃಪ್ತ ಮತ್ತು ನೆಮ್ಮದಿಯ ಜೀವನ ನಮಗೆ ಹೆಚ್ಚಿನ ಸಂತೋಷ ಮತ್ತು ತೃಪ್ತಿ ನೀಡಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.ಪೂಜಾ ಪ್ರಶಾಂತ್ ಶೆಟ್ಟಿ ರಚಿಸಿದ ‘ವತ್ಸಲೆ’ ಕೃತಿಯನ್ನು ಬುಧವಾರ ಧರ್ಮಸ್ಥಳದಲ್ಲಿ ಬೀಡಿನಲ್ಲಿ ನಡೆದ ಸರಳ ಸಮಾರಂಭದಲ್ಲಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಮಹಿಳಾ ಸಬಲೀಕರಣದ ರೂವಾರಿ ಹೇಮಾವತಿ ವೀ. ಹೆಗ್ಗಡೆ ಕನಸಿನ ಕೂಸು ‘ವಾತ್ಸಲ್ಯ’ ಯೋಜನೆ. ಬದುಕಿನುದ್ದಕ್ಕೂ ಶ್ರಮ ಜೀವನ ಮಾಡಿ ಹೋರಾಡಿ ಬಳಲಿ ಬೆಂಡಾದ ಹಿರಿಯ ಜೀವಗಳಿಗೆ ಅಂತಿಮ ದಿನಗಳಲ್ಲಿ ಗೌರವದ, ನೆಮ್ಮದಿಯ ಸಂತೃಪ್ತ ಜೀವನ ಮಾಡಲು ಸೂರನ್ನು ಕಟ್ಟಿ ಕೊಡುವ ಕಾರ್ಯಕ್ರಮವೇ ‘ವಾತ್ಸಲ್ಯ’. ರಾಜ್ಯದೆಲ್ಲೆಡೆ ಈಗಾಗಲೆ ೬೧೦ ಮನೆಗಳನ್ನು ಈ ಯೋಜನೆಯಡಿ ನಿರ್ಮಿಸಿದ್ದು ಬಡವರ ಪಾಲಿಗೆ ಆಶಾಜ್ಯೋತಿಯಾಗಿದೆ ಎಂದು ಅವರು ಮಾಹಿತಿ ನೀಡಿದರು.ಲೇಖಕಿ ಪೂಜಾಪ್ರಶಾಂತ್ ಶೆಟ್ಟಿ ಫಲಾನುಭವಿಗಳ ಅನುಭವ, ಅನಿಸಿಕೆಗಳನ್ನು ಕಥೆಗಳ ಮೂಲಕ ಸಾದರಪಡಿಸಿದ್ದಾರೆ. ಇವರಿಗೆ ಸಂದೀಪ್ ದೇವ್ ಸಹಕರಿಸಿದ್ದಾರೆ.
ಹೇಮಾವತಿ ವೀ. ಹೆಗ್ಗಡೆ ಮಾತನಾಡಿ ಯೋಜನೆಯ ಅನುಷ್ಠಾನದಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕರ್ತರ ನಿಷ್ಠೆ, ಕಾಳಜಿ ಹಾಗೂ ಶ್ರಮವನ್ನು ಶ್ಲಾಘಿಸಿ ಅಭಿನಂದಿಸಿದರು. ಲೇಖಕಿ ಪೂಜಾ ಪ್ರಶಾಂತ್ ಶೆಟ್ಟಿ ಅವರನ್ನು ಹೇಮಾವತಿ ವೀ. ಹೆಗ್ಗಡೆ ಸನ್ಮಾನಿಸಿ ಅಭಿನಂದಿಸಿದರು.ಡಿ. ಸುರೇಂದ್ರ ಕುಮಾರ್, ಅನಿತಾ ಸುರೇಂದ್ರ ಕುಮಾರ್, ಸೋನಿಯಾ ಯಶೋವರ್ಮ, ಅಮಿತ್, ಶ್ರದ್ಧಾ ಅಮಿತ್, ಡಿ. ಹರ್ಷೇಂದ್ರ ಕುಮಾರ್, ಡಿ. ಶ್ರೇಯಸ್ ಕುಮಾರ್, ನಿಶ್ಚಲ್ ಕುಮಾರ್, ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ಅಧಿಕಾರಿ ಅನಿಲ್ ಕುಮಾರ್ ಎಸ್.ಎಸ್. ಪ್ರಾದೇಶಿಕ ಹಣಕಾಸು ನಿರ್ದೇಶಕರು ಶಾಂತಾರಾಮ ಪೈ, ಕೇಂದ್ರ ಕಚೇರಿಯ ಪ್ರಾದೇಶಿಕ ನಿರ್ದೇಶಕರು, ನಿರ್ದೇಶಕರು ಹಾಗೂ ಸಿಬ್ಬಂದಿ ಹಾಜರಿದ್ದರು.
ಚಿತ್ರ: ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಅವರು ಕೃತಿ ಬಿಡುಗಡೆಗೊಳಿಸಿದರು.