ಶ್ರೀಶೈಲ ಮಠದ
ರಾಜ್ಯ ರಾಜಕಾರಣದಲ್ಲಿ ಉತ್ತರ ಕರ್ನಾಟಕದ ಪ್ರಭಾವಿ ನಾಯಕರಲ್ಲಿ ಒಬ್ಬರಾಗಿರುವ ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ಐದನೇ ಬಾರಿಗೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಉಪ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನಗಳ ಕುರಿತ ಚರ್ಚೆಗಳ ನಡುವೆಯೂ ಸಚಿವ ಸಂಪುಟದಲ್ಲಿ ಸ್ಥಾನ ಪಡೆಯುವ ಮೂಲಕ ತಮ್ಮ ಪ್ರಭಾವ ಮತ್ತು ಮಹತ್ವ ಉಳಿಸಿಕೊಂಡಿದ್ದಾರೆ. ಅವರ ರಾಜಕೀಯ ಜೀವನ ಸಹಕಾರಿ ಕ್ಷೇತ್ರದಿಂದ ಆರಂಭವಾಗಿ ರಾಜ್ಯದ ಆಡಳಿತ ವ್ಯವಸ್ಥೆಯ ಕೇಂದ್ರದವರೆಗೆ ತಲುಪಿದ ನಿರಂತರ ಹೋರಾಟ, ಸಂಘಟನೆ ಮತ್ತು ಜನಸಂಪರ್ಕವನ್ನು ಅವರು ಹೊಂದಿದ್ದಾರೆ.
ಸಹಕಾರಿ ಕ್ಷೇತ್ರದಿಂದ ರಾಜಕೀಯಕ್ಕೆ:1992ರಲ್ಲಿ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕರಾಗಿ ಆಯ್ಕೆಯಾಗುವ ಮೂಲಕ ಸತೀಶ ಜಾರಕಿಹೊಳಿ ಸಾರ್ವಜನಿಕ ಜೀವನಕ್ಕೆ ಕಾಲಿಟ್ಟರು. ಉತ್ತರ ಕರ್ನಾಟಕದಲ್ಲಿ ಸಹಕಾರಿ ಸಂಸ್ಥೆಗಳು ರಾಜಕೀಯದ ಪ್ರಮುಖ ವೇದಿಕೆಗಳಾಗಿದ್ದು, ಇದೇ ವೇದಿಕೆ ಅವರನ್ನು ರಾಜ್ಯ ರಾಜಕಾರಣದತ್ತ ಕೊಂಡೊಯ್ದಿದೆ. 1998ರಲ್ಲಿ ಮೊದಲ ಬಾರಿಗೆ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದರು. 2004ರಲ್ಲಿ ಧರ್ಮಸಿಂಗ್ ನೇತೃತ್ವದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಜವಳಿ ಖಾತೆ ಸಚಿವರಾಗಿ ಮೊದಲ ಬಾರಿಗೆ ಸಚಿವ ಸಂಪುಟ ಪ್ರವೇಶಿಸಿದರು. ಅಲ್ಲಿಂದ ಆರಂಭವಾದ ಸಚಿವ ಪಯಣ ಈಗ ಐದನೇ ಅವಧಿಯವರೆಗೆ ಮುಂದುವರಿದಿದೆ.
ಕ್ಷೇತ್ರ ಪುನರ್‌ವಿಂಗಡಣೆಯ ನಂತರ ರಚನೆಯಾದ ಯಮಕನಮರಡಿ ಪರಿಶಿಷ್ಟ ಪಂಗಡ(ಎಸ್‌ಟಿ) ಮೀಸಲು ಕ್ಷೇತ್ರದಿಂದ 2008ರಲ್ಲಿ ಮೊದಲ ಬಾರಿಗೆ ವಿಧಾನಸಭೆಗೆ ಆಯ್ಕೆಯಾದ ಸತೀಶ ಜಾರಕಿಹೊಳಿ, ನಂತರ 2013, 2018 ಮತ್ತು 2023ರಲ್ಲಿಯೂ ಸತತವಾಗಿ ಗೆಲುವು ಸಾಧಿಸಿದರು. ಯಮಕನಮರಡಿ ಕ್ಷೇತ್ರದಲ್ಲಿ ಅವರ ಪ್ರಭಾವಕ್ಕೆ ಪ್ರಮುಖ ಕಾರಣ ಸ್ಥಳೀಯ ಸಂಘಟನೆ, ಸಮುದಾಯಗಳೊಂದಿಗೆ ನಿರಂತರ ಸಂಪರ್ಕ, ಅಭಿವೃದ್ಧಿ ಕಾರ್ಯಗಳು ಮತ್ತು ಕಾರ್ಯಕರ್ತರ ಬಲಿಷ್ಠ ಜಾಲ. 2004ರಲ್ಲಿ ಜವಳಿ ಸಚಿವರಾಗಿ ಮೊದಲ ಅವಕಾಶ ಪಡೆದ ಅವರು, ನಂತರ ಅಬಕಾರಿ, ಸಣ್ಣ ಕೈಗಾರಿಕೆ, ಅರಣ್ಯ, ಲೋಕೋಪಯೋಗಿ ಸೇರಿದಂತೆ ಹಲವು ಪ್ರಮುಖ ಇಲಾಖೆಗಳ ಹೊಣೆ ಹೊತ್ತಿದ್ದಾರೆ. ಈಗ ಯಾವ ಖಾತೆ ಎಂಬುವುದು ತೀವ್ರ ಕುತೂಹಲ ಮೂಡಿಸಿದೆ.
ಇತ್ತೀಚಿನ ರಾಜಕೀಯ ಬೆಳವಣಿಗೆಗಳಲ್ಲಿ ಸತೀಶ ಜಾರಕಿಹೊಳಿ ಹೆಸರು ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನಗಳಿಗೆ ಬಲವಾಗಿ ಕೇಳಿಬಂದಿತ್ತು. ವಾಲ್ಮೀಕಿ ಸಮುದಾಯದ ನಾಯಕತ್ವ, ಉತ್ತರ ಕರ್ನಾಟಕದ ಪ್ರಾತಿನಿಧ್ಯ ಮತ್ತು ಸಂಘಟನಾ ಸಾಮರ್ಥ್ಯವನ್ನು ಗಮನದಲ್ಲಿಟ್ಟುಕೊಂಡು ಅವರಿಗೆ ಹೆಚ್ಚಿನ ಜವಾಬ್ದಾರಿ ಸಿಗಬಹುದು ಎಂಬ ನಿರೀಕ್ಷೆ ಇತ್ತು. ಆದರೆ, ಅಂತಿಮವಾಗಿ ಆ ಹುದ್ದೆಗಳು ಕೈತಪ್ಪಿದವು.
ರಾಜಕೀಯದ ಜೊತೆಗೆ ಮಾನವ ಬಂಧುತ್ವ ವೇದಿಕೆ ಮೂಲಕ ಸತೀಶ ಜಾರಕಿಹೊಳಿ ವಿಭಿನ್ನವಾಗಿ ತಮ್ಮನ್ನು ಗುರುತಿಸಿಕೊಂಡಿದ್ದಾರೆ. ಮೂಢನಂಬಿಕೆ ವಿರೋಧಿ ಕಾರ್ಯಕ್ರಮಗಳು, ಸಾಮಾಜಿಕ ಜಾಗೃತಿ ಅಭಿಯಾನಗಳು ಮತ್ತು ವೈಚಾರಿಕ ಸಭೆಗಳ ಮೂಲಕ ರಾಜ್ಯಾದ್ಯಂತ ಕಾರ್ಯಕರ್ತರ ಜಾಲವನ್ನು ನಿರ್ಮಿಸಿದ್ದಾರೆ. ಸಾಮಾಜಿಕ ಚಿಂತನೆ ಮತ್ತು ರಾಜಕೀಯ ಸಂಘಟನೆಯನ್ನು ಸಮಾನಾಂತರವಾಗಿ ಬೆಳೆಸಿರುವ ಕೆಲವೇ ನಾಯಕರಲ್ಲಿ ಅವರು ಒಬ್ಬರೆಣಿಸಿಕೊಂಡಿದ್ದಾರೆ.
ಬಾಕ್ಸ್
ಬೆಳಗಾವಿ ಜಿಲ್ಲೆಯ ರಾಜಕೀಯ ಸಮೀಕರಣದಲ್ಲಿ ಜಾರಕಿಹೊಳಿ ಕುಟುಂಬ ಒಂದು ಪ್ರತ್ಯೇಕ ಶಕ್ತಿ ಕೇಂದ್ರವಾಗಿದೆ. ರಮೇಶ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ, ಲಖನ್ ಜಾರಕಿಹೊಳಿ, ಪ್ರಿಯಾಂಕಾ ಜಾರಕಿಹೊಳಿ ಸೇರಿದಂತೆ ಕುಟುಂಬದ ಹಲವು ಸದಸ್ಯರು ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.