ಕನ್ನಡಪ್ರಭ ವಾರ್ತೆ ನಂಜನಗೂಡುಪಟ್ಟಣದ ಹುಲ್ಲಹಳ್ಳಿ ರಸ್ತೆಯ ಗೌಸಿಯಾ ರೈಸ್ ಮಿಲ್ ನಲ್ಲಿ ಸೋಮವಾರ ಅಕ್ರಮವಾಗಿ ಸಂಗ್ರಹಿಸಿದ್ದ 200 ಮೂಟೆ ಯೂರಿಯಾ ದಾಸ್ತಾನನ್ನು ರೈತ ಸಂಘದ ಕಾರ್ಯಕರ್ತರು ದಾಳಿ ನಡೆಸಿ ಪತ್ತೆ ಹಚ್ಚಿದ್ದಾರೆ.ರೈತ ಸಂಘದ ತಾಲೂಕು ಅಧ್ಯಕ್ಷ ಸತೀಶ್ ರಾವ್, ಕೃಷಿ ಇಲಾಖೆ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದರು, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಕೆ. ರವಿ ಅಕ್ರಮ ಯೂರಿಯಾ ಮೂಟೆಗಳನ್ನು ವಶಕ್ಕೆ ಪಡೆದರು.ರೈತ ಸಂಘದ ಜಿಲ್ಲಾಧ್ಯಕ್ಷ ವಿದ್ಯಾಸಾಗರ್ ಮಾತನಾಡಿ, ಕಳೆದ 20 ದಿನಗಳಿಂದ ರೈಸ್ ಮಿಲ್ ನಲ್ಲಿ ಅಕ್ರಮವಾಗಿ ಸಂಗ್ರಹಿಸಿರುವ ಯೂರಿಯಾವನ್ನು ಕೇರಳಕ್ಕೆ ವಯನಾಡಿನ ಮಹಮ್ಮದ್ ಫಾಜಿಲ್ ಎಂಬಾತ ಸಾಗಿಸುತ್ತಿದ್ದಾನೆ ಎಂಬ ಮಾಹಿನಿ ಲಭ್ಯವಾಗಿತ್ತು, ಕಾರ್ಯಕರ್ತರೊಂದಿಗೆ ಸ್ಥಳಕ್ಕೆ ತೆರಳುವ ವೇಳೆ ಟ್ರಕ್ ನಲ್ಲಿ ಒಂದು ಲೋಡ್ ಯೂರಿಯಾ ಸಾಗಿಸಿಯಾಗಿತ್ತು, ಸಂಬಂಧಪಟ್ಟ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ಮಿಲ್ ನಲ್ಲಿ ಸಂಗ್ರಹಿಸಿದ್ದ 200 ಕ್ಕೂ ಹೆಚ್ಚು ಮೂಟೆ ಯೂರಿಯಾವನ್ನು ವಶಕ್ಕೆ ಪಡೆಯಲಾಗಿದೆ.ಕೇಂದ್ರ ಸರ್ಕಾರ 1,477 ರು. ಬೆಲೆಯ 50 ಕೆ.ಜಿ ಯೂರಿಯಾವನ್ನು ರೈತರಿಗೆ 266 ರು. ಸಬ್ಸಿಡಿ ದರದಲ್ಲಿ ನೀಡುತ್ತಿದೆ, ಯೂರಿಯಾ ಪಡೆಯಲು ರೈತರು ದಾಖಲೆ ನೀಡಿ ಎರಡು ದಿನಗಳ ಕಾಲ ಸರದಿಯಲ್ಲಿ ನಿಂತು ಪಡೆಯಬೇಕಾಗಿದೆ, ಆದರೆ ನೂರಾರು ಮೂಟೆ ಯೂರಿಯಾ ಕಳ್ಳಸಾಗಾಣಿಕೆದಾರರಿಗೆ ಸಿಗುವುದು ಹೇಗೆ, ನಮ್ಮ ಸರ್ಕಾರದ ವ್ಯವಸ್ಥೆಯಲ್ಲಿ ಲೋಪವಿದೆ, ಅಕ್ರಮವನ್ನು ಕಂಡು ಹಿಡಿದು ತಡೆಯಬೇಕಾದ ಅಧಿಕಾರಿಗಳು ಸುದೀರ್ಘ ನಿದ್ದೆಯಲ್ಲಿದ್ದಾರೆ.ಈ ರೀತಿಯ ಅಕ್ರಮಗಳಿಂದಾಗಿ ರಾಜ್ಯದಲ್ಲಿ ರೈತರಿಗೆ ಯೂರಿಯಾ ದೊರೆಯದೆ ಕೃತಕ ಅಭಾವ ಉಂಟಾಗುತ್ತಿದೆ, ಸರ್ಕಾರ ಅಕ್ರಮ ಯೂರಿಯಾ ಸಾಗಾಣಿಕೆಯನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮವಹಿಸಬೇಕು ಎಂದು ಹೇಳಿದರು.ಸಹಾಯಕ ಕೃಷಿ ನಿರ್ದೇಶಕ ಎಸ್.ಕೆ. ರವಿ ಮಾತನಾಡಿ, ರೈಸ್ ಮಿಲ್ ನಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ 200 ಯೂರಿಯಾ ಮೂಟೆಗಳನ್ನು ವಶಕ್ಕೆ ಪಡೆದು, ಎಪಿಎಂಸಿ ಗೆ ಸಾಗಿಸಲಾಗಿದೆ, ಜಿಲ್ಲಾಧಿಕಾರಿಗಳಿಗೆ ವರದಿ ನೀಡಲಾಗಿದೆ, ಸೂಕ್ತ ಕ್ರಮವಹಿಸಲಾಗುವುದು ಎಂದು ಹೇಳಿದರು.ಸಿಪಿಐ ಸುನಿಲ್ ಕುಮಾರ್, ರೈತ ಸಂಘದ ತಾಲೂಕು ಅಧ್ಯಕ್ಷ ಸತೀಶ್ ರಾವ್, ಜಿಲ್ಲಾ ಕಾರ್ಯದರ್ಶಿ ಹಿಮ್ಮಾವು ರಘು, ಮಹದೇವನಾಯ್ಕ, ತಿಮ್ಮನಾಯಕ, ಮಾದೇವ ನಾಯ್ಕ , ವೇಣು ಗೋಪಾಲ್, ನಾಗರಾಜು ಇದ್ದರು.