ಸತ್ಸಂಗಗಳು ಸಾಧನೆಗೆ ಪ್ರೇರಣೆ

KannadaprabhaNewsNetwork |  
Published : Aug 02, 2025, 12:00 AM IST
ಫೋಟೋ : ೧ಕೆಎಂಟಿ_ಎಯುಜಿ_ಕೆಪಿ೧ : ಚಾತುರ್ಮಾಸ್ಯ ನಿರತ ಸದ್ಗುರು ಬ್ರಹ್ಮಾನಂದ ಸರಸ್ವತಿ ಶ್ರೀಗಳಿಂದ ಯುವಾ ಬ್ರಿಗೇಡ್ ಮಾರ್ಗದರ್ಶಕ ಚಕ್ರವರ್ತಿ ಸೂಲಿಬೆಲೆ ಆಶೀರ್ವಾದ ಪಡೆದರು.  | Kannada Prabha

ಸಾರಾಂಶ

ಸಾಧುಗಳು, ಸಂತರು, ಸದ್ಗುರುಗಳು ನಮ್ಮನ್ನು ಭಗವಂತನ ಕಡೆಗೆ ಕರೆದೊಯ್ಯುವವರಾಗಿದ್ದಾರೆ.

ಕುಮಟಾ: ಸಾಧುಗಳು, ಸಂತರು, ಸದ್ಗುರುಗಳು ನಮ್ಮನ್ನು ಭಗವಂತನ ಕಡೆಗೆ ಕರೆದೊಯ್ಯುವವರಾಗಿದ್ದಾರೆ. ಆದರೆ ಆ ದಿಕ್ಕಿಗೆ ಹೋಗುವ ಪ್ರಾಮಾಣಿಕ ಪ್ರಯತ್ನ ಮಾಡಬೇಕಾಗುತ್ತದೆ. ಪದೇಪದೇ ಸತ್ಸಂಗಗಳಾದರೆ ಸಾಧನೆಯೆಡೆಗೆ ಪ್ರೇರಣೆಯಾಗುತ್ತದೆ. ಚಾತುರ್ಮಾಸ್ಯದ ಭಾಗ್ಯವನ್ನು ಬದುಕನ್ನು ರೂಪಿಸಿಕೊಳ್ಳಲು ಉಪಯೋಗಿಸಿಕೊಳ್ಳಬೇಕು ಎಂದು ಯುವ ಬ್ರಿಗೇಡ್ ಮಾರ್ಗದರ್ಶಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.ಕೋನಳ್ಳಿಯ ವನದುರ್ಗಾ ಮಂದಿರ ಪರಿಸರದಲ್ಲಿ ಶ್ರೀರಾಮಕ್ಷೇತ್ರದ ಪೀಠಾಧೀಶ ಮಹಾಮಂಡಲೇಶ್ವರ ಸದ್ಗುರು ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ೨೩ನೇ ದಿನದ ಚಾತುರ್ಮಾಸ ವ್ರತಾಚಾರಣೆಯಲ್ಲಿ ಶುಕ್ರವಾರದಂದು ಪಾಲ್ಗೊಂಡು ಗುರುಗಳ ದರ್ಶನ, ಆಶೀರ್ವಾದ ಪಡೆದು ಹಿತನುಡಿದರು.

ಸದ್ಗುರು ಬ್ರಹ್ಮಾನಂದ ಸರಸ್ವತಿಗಳ ಚಾತುರ್ಮಾಸ್ಯದಿಂದ ಕೋನಳ್ಳಿಯವರಿಗೆ ಅದೃಷ್ಟದ ಸಂದರ್ಭ ಒದಗಿದೆ. ಪ್ರತಿನಿತ್ಯ ಗುರುವಿನ ದರ್ಶನ ಮತ್ತು ಪ್ರವಚನದ ಶ್ರವಣದ ಮಹಾಭಾಗ್ಯ ಸಿಕ್ಕಿದೆ. ಇಂಥ ಅವಕಾಶ ಬಿಡಬಾರದು ಎಂದರು.

ಪ್ರಸ್ತುತ ಕಾಲಘಟ್ಟದಲ್ಲಿ ಗುರಿಯನ್ನು ಬಿಟ್ಟು ಪಕ್ಕಕ್ಕೆ ಚಲಿಸೋದು ಜನರ ಸಾಮಾನ್ಯತೆಯಾಗಿದೆ. ಜಗನ್ಮಾತೆ ನಮ್ಮನ್ನು ಪರಮಾತ್ಮನೊಂದಿಗೆ ಒಂದು ಮಾಡಲು ಜಗತ್ತಿಗೆ ಕೈ ಹಿಡಿದು ಕರೆದುಕೊಂಡು ಬಂದಿದ್ದಳು. ಆದರೆ ನಾವು ಕೈ ಕೊಸರಿ ಪ್ರಾಪಂಚಿಕ ಸೌಂದರ್ಯ, ಸುಖ, ವೈಭೋಗಗಳಲ್ಲಿ ನಿಂತು ಬಿಟ್ಟಿದ್ದೇವೆ. ಇದನ್ನೇ ಜಗತ್ತು ಎಂದು ಭಾವಿಸಿದ್ದೇವೆ. ಹೀಗಾಗಿ ಜಗನ್ಮಾತೆ ಕಣ್ಣೀರು ಹಾಕುತ್ತಾ ಗುರುಗಳ ಬಳಿ ಮಕ್ಕಳನ್ನು ಭಗವಂತನೆಡೆಗೆ ದಾರಿ ತೋರಿಸಲು ಹೇಳಿ ಹೋಗಿದ್ದಾಳೆ. ಆದರೆ ಈ ಜಗತ್ತನ್ನು ನಾವು ಎಷ್ಟರ ಮಟ್ಟಿಗೆ ನಂಬಿದ್ದೇವೆಂದರೆ ಗುರುಗಳ ಬಳಿಗೆ ಹೋಗುತ್ತಿಲ್ಲ. ಭಗವಂತನ ದಿಕ್ಕಿಗೆ ಹೋಗುವ ಮಾರ್ಗವೇ ತಿಳಿದಿಲ್ಲವಾದರೆ ಇನ್ನೇನು ಮಾಡಲು ಸಾಧ್ಯ. ಗುರುವಿನ ಮಾರ್ಗದರ್ಶನದಿಂದ ಭಗವಂತನ ಕೃಪೆಗೆ ಪಾತ್ರರಾಗಿ ಎಂದರು.

ಮಹಾಮಂಡಲೇಶ್ವರ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡಿ, ಬದುಕಿನಲ್ಲಿ ಪೂರ್ಣ ಆನಂದ ಗಳಿಕೆಗೆ ಸಾತ್ವಿಕತೆ ಅನಿವಾರ್ಯ. ಜ್ಞಾನವನ್ನು ಹೃದಯ, ಆತ್ಮದೊಳಗೆ ತುಂಬಿಸಿ ಮನಸ್ಸು, ಬುದ್ಧಿ, ಚಿತ್ತವನ್ನು ಏಕೀಕರಣಗೊಳಿಸಿ ಸಾತ್ವಿಕತೆಯ ಪ್ರವಾಹದೊಂದಿಗೆ ಸಾಗಬೇಕು. ನಮ್ಮೊಳಗಿನ ಮತ್ಸರಾದಿ ಕಲ್ಮಷಗಳು ಹೊರಹೋಗಬೇಕು. ಭಗವದ್ಭಕ್ತಿಗಾಗಿ ಸರಳತೆ ಸಾತ್ವಿಕತೆ ಸಜ್ಜನತೆಯ ಒಂದೇ ಮುಖ ಬೇಕು. ಭಯ ಹೋಗಲಾಡಿಸಬೇಕು. ಆಧ್ಯಾತ್ಮದ ತಳಹದಿಯಲ್ಲಿ ಜೀವನ ಕಟ್ಟಬೇಕೆಂದು ನಾರಾಯಣ ಗುರುಗಳು ಹೇಳಿದರು. ಸಮಾಜ ಕಟ್ಟಲು ಸ್ವಾರ್ಥ ಕ್ಕಿಂತ ಧರ್ಮ-ಆಧ್ಯಾತ್ಮ ಬೇಕು ಎಂದು ಹರಸಿದರು.

ಮಾಗೋಡು ಮತ್ತು ಕುದ್ರಗಿ ಗ್ರಾಪಂ ವ್ಯಾಪ್ತಿಯ ಮಾಗೋಡು-೧, ಮಾಗೋಡು-೨, ಮಳ್ಳಿಕೇರಿ, ಬಜೆಕೇರಿ, ಕೊಡ್ಲಗದ್ದೆ, ಬಾಳೆಮೆಟ್ಟು, ಕುದ್ರಗಿ ಹಾಗೂ ತೆಂಗಾರ ಗ್ರಾಮದ ನಾಮಧಾರಿ ಸಮಾಜದವರು ಗುರುಪಾದುಕಾ ಪೂಜೆ ಸಲ್ಲಿಸಿದರು. ಹೊನ್ನಾವರ ರಜತಗಿರಿಯ ಅಕ್ಷಯ ಏಕನಾಥ ನಾಯ್ಕ ದಂಪತಿ ವೈಯಕ್ತಿಕ ಪಾದಪೂಜೆ ನೆರವೇರಿಸಿದರು.

ಚಾತುರ್ಮಾಸ್ಯ ಸಮಿತಿ ಅಧ್ಯಕ್ಷ ಎಚ್.ಆರ್.ನಾಯ್ಕ, ನಾಮಧಾರಿ ಸಂಘದ ಅಧ್ಯಕ್ಷ ಮಂಜುನಾಥ ಆರ್.ನಾಯ್ಕ, ಟಿ.ಟಿ.ನಾಯ್ಕ ಹೊನ್ನಾವರ, ಸುರೇಶ ನಾಯ್ಕ ಹೆರವಟ್ಟಾ, ಪ್ರಶಾಂತ ನಾಯ್ಕ, ವೈಭವ ನಾಯ್ಕ, ವಿಶ್ವನಾಥ ನಾಯ್ಕ, ರಾಘವೇಂದ್ರ ನಾಯ್ಕ, ನಿತ್ಯಾನಂದ ನಾಯ್ಕ ಇದ್ದರು. ಯಶವಂತ ನಾಯ್ಕ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''