ಸತ್ಯ ಧರ್ಮ ರಕ್ಷಿಸುವ ರಕ್ಷಾ ಕವಚ

KannadaprabhaNewsNetwork | Published : Oct 13, 2024 1:06 AM

ಸಾರಾಂಶ

ಅಧರ್ಮದ ವಿರುದ್ಧ ಧರ್ಮದ ದಂಡಯಾತ್ರೆ ಕೈಕೊಂಡು ಜನಮನದ ಶ್ರೇಯಸ್ಸಿಗಾಗಿ ಉಜ್ವಲ ಭವಿಷ್ಯಕ್ಕಾಗಿ ಸದಾ ಶ್ರಮಿಸಿದ್ದಾರೆ

ನರೇಗಲ್ಲ: ಬಾಳಿನ ಭಾಗ್ಯೋದಯಕ್ಕೆ ಧರ್ಮದ ಬೆಳಕು ಬೇಕು. ಭೌತಿಕ ಜೀವನದಲ್ಲಿ ಬಳಲಿ ಬಂದವರಿಗೆ ಶಾಂತಿ ನೆಮ್ಮದಿ ಕರುಣಿಸುವ ಶಕ್ತಿ ಧರ್ಮಕ್ಕಿದೆ. ಸತ್ಯ ಒಂದು ಧರ್ಮ. ಇದು ಧರ್ಮವನ್ನು ರಕ್ಷಿಸುವ ರಕ್ಷಾ ಕವಚ. ಸತ್ಯದ ರಕ್ಷಾ ಕವಚ ಕಳಚಿದರೆ ಈ ಧರ್ಮ ಸಂಸ್ಕೃತಿ ಪರಂಪರೆ ಮತ್ತು ಆದರ್ಶ ಮೌಲ್ಯ ಬೆಳೆದುಕೊಂಡು ಬರುವುದು ಕಷ್ಟವಾಗುತ್ತದೆ ಎಂದು ಬಾಳೆಹೊನ್ನೂರು ಶ್ರೀರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

ಅವರು ಶುಕ್ರವಾರ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದ ಒಂಭತ್ತನೇ ದಿನದ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ದೇವರು ಎಲ್ಲರಲ್ಲಿಯೂ ಇರುವನು. ಆದರೆ ದೇವರಲ್ಲಿ ಎಲ್ಲರೂ ಇಲ್ಲ. ಸಮಸ್ತ ಜನರ ಭೋಗ ಮೋಕ್ಷಗಳಿಗೆ ಧರ್ಮವೇ ಮೂಲವಾಗಿದೆ. ಸತ್ಯ ಸೈದ್ಧಾಂತಿಕ ನೆಲೆಗಟ್ಟಿನ ಮೇಲೆ ಭವ್ಯ ಬಾಳಿನ ಸೌಧ ಕಟ್ಟಿಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡಬೇಕಾಗಿದೆ. ಶ್ರೀಜಗದ್ಗುರು ರೇಣುಕಾಚಾರ್ಯರು ಶಿವತಪಸ್ಸು, ಶಿವಕರ್ಮ, ಶಿವಜ್ಞಾನ, ಶಿವಜಪ ಮತ್ತು ಶಿವಧ್ಯಾನ ಎಂಬ ಪಂಚ ಯಜ್ಞಗಳ ಮೂಲಕ ಸಂಸ್ಕಾರ ಸದ್ಬೋಧನೆ ಅರುಹಿ ಸಕಲರನ್ನು ಉದ್ಧರಿಸಿದ್ದಾರೆ. ಅಧರ್ಮದ ವಿರುದ್ಧ ಧರ್ಮದ ದಂಡಯಾತ್ರೆ ಕೈಕೊಂಡು ಜನಮನದ ಶ್ರೇಯಸ್ಸಿಗಾಗಿ ಉಜ್ವಲ ಭವಿಷ್ಯಕ್ಕಾಗಿ ಸದಾ ಶ್ರಮಿಸಿದ್ದಾರೆ. ಅವರು ಬೋಧಿಸಿದ ಅಹಿಂಸಾದಿ ಧ್ಯಾನ ಪರ್ಯಂತರ ದಶ ಧರ್ಮ ಸೂತ್ರಗಳು ಬದುಕಿ ಬಾಳುವ ಜನಾಂಗಕ್ಕೆ ದಾರಿ ದೀಪ ಎಂದರು.

ಕೇಂದ್ರದ ಆಹಾರ ಮತ್ತು ಗಣಿ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಷಿ ಮಾತನಾಡಿ, ರುದ್ರಗಣಾಧಿಪ ವೀರಭದ್ರ ಎಂಬ ಅಮೂಲ್ಯ ಕೃತಿ ಬಿಡುಗಡೆ ಮಾಡಿ, ಭಾರತೀಯ ಪುಣ್ಯ ನಾಡಿನಲ್ಲಿ ಎಲ್ಲರಿಗೂ ಬದುಕಿ ಬಾಳುವ ಅವಕಾಶ ಕೊಟ್ಟಿದೆ. ಅವರವರ ಧರ್ಮ ಅವರಿಗೆ ಶ್ರೇಷ್ಠವಾದರೂ ಇನ್ನೊಂದು ಧರ್ಮದ ಬಗ್ಗೆ ಸಹಿಷ್ಣುತಾ ಮನೋಭಾವ ಬೆಳೆದುಕೊಂಡು ಬರಬೇಕಾಗಿದೆ. ಆಧುನಿಕ ಕಾಲದಲ್ಲಿ ಜಾತಿಗಳು ಬೆಳೆಯುತ್ತಿವೆ ಹೊರತು ಧರ್ಮ ಸಂಸ್ಕೃತಿ ಉಳಿಸಿ ಬೆಳೆಸಲು ಹಿಂಜರಿಯುತ್ತಿದ್ದಾರೆ. ಪರಸ್ಪರ ದ್ವೇಷ ಅಸೂಯೆಗಳು ಬೆಳೆದು ಸಂಘರ್ಷಕ್ಕೆ ಕಾರಣವಾಗುತ್ತಿವೆ. ಶ್ರೀ ರಂಭಾಪುರಿ ಧರ್ಮ ಪೀಠ ವಿಶಾಲ ಮನೋಭಾವನೆ ಹೊಂದಿ ಸರ್ವ ಜನಾಂಗದ ಒಳಿತಿಗಾಗಿ ಸದಾ ಶ್ರಮಿಸುತ್ತಾ ಬಂದಿದೆ ಎಂದರು.

ಕವಲೇದುರ್ಗ ಭುವನಗಿರಿ ಮಠದ ಮರುಳಸಿದ್ಧ ಶಿವಾಚಾರ್ಯ ಶಿವಾಚಾರ್ಯರು ನೇತೃತ್ವ ವಹಿಸಿ ಮಾತನಾಡಿ, ಧರ್ಮವಿಲ್ಲದೇ ಯಾರೂ ಬದುಕಿ ಬಾಳಲು ಸಾಧ್ಯವಿಲ್ಲ. ಧರ್ಮದಿಂದ ದೂರವಾದರೆ ನೀರಿನಿಂದ ಮೀನನ್ನು ಹೊರ ತೆಗೆದರೆ ಪ್ರಾಣ ಹೇಗೆ ಹೋಗುವುದೋ ಹಾಗೆಯೇ ಧರ್ಮ ಉಲ್ಲಂಘಿಸಿ ನಡೆದವರ ಜೀವನ ಪತನಗೊಳ್ಳುತ್ತದೆ ಎಂದರು.

ಸಮ್ಮುಖ ವಹಿಸಿದ ಜಕ್ಕಲಿ ಹಿರೇಮಠದ ವಿಶ್ವಾರಾಧ್ಯ ಶಿವಾಚಾರ್ಯರು ಮಾತನಾಡಿ, ಭವ ಬಂಧನ ಕಳೆಯಲು ಗುರುವಿಗೆ ಮಾತ್ರ ಸಾಧ್ಯ ಹೊರತು ಬೇರಾರಿಂದಲೂ ಸಾಧ್ಯವಾಗದು. ಪರಶಿವನ ಇನ್ನೊಂದು ಸಾಕಾರ ರೂಪವೇ ಗುರುವಾಗಿ ಬಾಳ ಬದುಕಿಗೆ ಬೆಳಕು ತೋರುವನೆಂದರು.

ಪ್ರಾಸ್ತಾವಿಕ ಮಾತನಾಡಿದ ನೆಗಳೂರು ಹಿರೇಮಠದ ಗುರುಶಾಂತೇಶ್ವರ ಶಿವಾಚಾರ್ಯರು, ಶಾಸ್ತ್ರದಲ್ಲಿ ನಿರೂಪಿಸಿದ ತತ್ವ ಸಿದ್ಧಾಂತ ಆಚರಿಸಿಕೊಂಡು ಬಂದರೆ ಆರೋಗ್ಯ ಪೂರ್ಣ ಜೀವನ ಕಟ್ಟಿಕೊಳ್ಳಲು ಸಾಧ್ಯ. ನವರಾತ್ರಿ ಶಕ್ತಿ ಆರಾಧನೆಯ ನಾಡಹಬ್ಬದಲ್ಲಿ ಯತಾರ್ಥ ಜ್ಞಾನ ಅರಿತು ನಡೆಯುವಂತಾಗಬೇಕೆಂದರು.

ಅಬ್ಬಿಗೇರಿ-ಸಿದ್ಧರಬೆಟ್ಟದ ವೀರಭದ್ರ ಶಿವಾಚಾರ್ಯರು ಮಾತನಾಡಿದರು. ಇದೇ ಸಂದರ್ಭದಲ್ಲಿ ಲಿಂ.ಸೋಮಶೇಖರ ಶಿವಾಚಾರ್ಯರ ಕುರಿತ ಕೃತಿಯನ್ನು ಶಾಸಕ ಜಿ.ಎಸ್. ಪಾಟೀಲ ಬಿಡುಗಡೆಗೊಳಿಸಿದರು.

ಶ್ರೀ ಪೀಠದ ವಾರ್ತಾ ಸಂಕಲನ ಬಿಡುಗಡೆ ಮಾಡಿದ ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಮನುಷ್ಯ ಜೀವನದಲ್ಲಿ ಮೂರು ತತ್ವಗಳಿವೆ. ಅವುಗಳನ್ನು ಅರಿಯುವ ಪ್ರಾಮಾಣಿಕ ಪ್ರಯತ್ನ ಮಾಡಬೇಕಾಗಿದೆ. ನೀರು ಅನ್ನ ಸಜ್ಜನರ ಒಳ್ಳೆಯ ಮಾತು ಜೀವನದ ಉನ್ನತಿಗೆ ಮತ್ತು ಶ್ರೇಯಸ್ಸಿಗೆ ಉತ್ತೇಜನ ನೀಡುತ್ತವೆ. ಶ್ರೀರಂಭಾಪುರಿ ಜಗದ್ಗುರುಗಳು ಧರ್ಮ ಸಮಾರಂಭದಲ್ಲಿ ನುಡಿದ ಮಾತುಗಳು ವಾರ್ತಾ ಪತ್ರಿಕೆಗಳಲ್ಲಿ ಸುದ್ದಿ ರೂಪದಲ್ಲಿ ಪ್ರಕಟವಾಗಿ ಒಂದೆಡೆ ಸೇರಿಸಿ ಪ್ರಕಟಗೊಳ್ಳುತ್ತಿರುವುದು ಜಗದ್ಗುರುಗಳ ಕ್ರಿಯಾಶೀಲತೆಗೆ ಸಾಕ್ಷಿಯಾಗಿವೆ ಎಂದರು.

ಮುಖ್ಯ ಅತಿಥಿಗಳಾಗಿ ಆಂಧ್ರ ಪ್ರದೇಶದ ಅ.ಭಾ.ವೀರಶೈವ ಮಹಾಸಭಾ ಅಧ್ಯಕ್ಷ ಶಿವಾನಂದಪ್ಪ ಡಾ. ಐ.ಎಸ್. ಪಾಟೀಲ ಭಾಗವಹಿಸಿದ್ದರು.

ಚಲನಚಿತ್ರ ನಟ ದೊಡ್ಡಣ್ಣ ಮಾತನಾಡಿ, ಕನ್ನಡ ಜಗತ್ತಿನಲ್ಲಿ ಅತಿ ಸುಂದರ ಭಾಷೆ, ಕನ್ನಡ ಉಳಿಸಿ ಬೆಳೆಸುವ ಕೆಲಸವಾಗಬೇಕು. ನಮ್ಮ ಧರ್ಮದಲ್ಲಿ ಗುರುವಿಗೆ ಉನ್ನತ ಸ್ಥಾನ ನೀಡಿದೆ. ಗುರುವನ್ನು ನರನೆಂದವಗೆ ಲಿಂಗಕ್ಕೆ ಶಿಲೆಯೆಂದವಗೆ ನಾಯಕ ನರಕ ತಪ್ಪದು ಎಂದು ಸರ್ವಜ್ಞ ಕವಿ ಎಚ್ಚರಿಸಿದ್ದಾನೆ ಎಂದರು.

ಮದ್ವೀರಶೈವ ಸ.ಸಂ. ಬೆಂಗಳೂರು ಜಿಲ್ಲಾ ಘಟಕದ ಅಧ್ಯಕ್ಷ ಬೀರೂರು ಶಿವಸ್ವಾಮಿ ಸರ್ವರನ್ನು ಸ್ವಾಗತಿಸಿದರು. ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲದ ಸಾಧಕರಿಂದ ವೇದಘೋಷ, ಗದಗಿನ ಗಾನಭೂಷಣ ವೀರೇಶ ಕಿತ್ತೂರರಿಂದ ಸಂಗೀತ ಜರುಗಿತು. ಶಿವಮೊಗ್ಗದ ಶಾಂತಾ ಆನಂದ ಹಾಗೂ ಸವಣೂರಿನ ಡಾ.ಗುರುಪಾದಯ್ಯ ಸಾಲಿಮಠ ನಿರೂಪಿಸಿದರು. ಸಮಾರಂಭದ ಕೊನೆಗೆ ಆಕರ್ಷಕ ನಜರ್ ಸಮರ್ಪಣೆ ಕಾರ್ಯಕ್ರಮ ಜರುಗಿತು.

Share this article