ಕನ್ನಡಪ್ರಭ ವಾರ್ತೆ ಭಾಲ್ಕಿ
12ನೇ ಶತಮಾನದಲ್ಲೇ ಬಸವಾದಿ ಶರಣರು ಮನುಕುಲದ ಸಮಾನತೆಗಾಗಿ ಹೋರಾಟ ನಡೆಸಿದ್ದರು ಎಂದು ಜಿಲ್ಲಾಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು.ಪಟ್ಟಣದ ಹಿರೇಮಠ ಸಂಸ್ಥಾನದಲ್ಲಿ ಮರಣವೇ ಮಹಾನವಮಿ ಮತ್ತು ಕಲ್ಯಾಣ ಕ್ರಾಂತಿ ವಿಜಯೋತ್ಸವ ನಿಮಿತ್ತ ಶನಿವಾರ ಆಯೋಜಿಸಿದ್ದ ವಚನ ಸಾಹಿತ್ಯದ ಪಲ್ಲಕ್ಕಿಗೆ ಪೂಜೆ ನೆರವೇರಿಸಿ ಮಾತನಾಡಿ, ಶರಣರು ಜಾತಿ ವ್ಯವಸ್ಥೆ, ಕಂದಾಚಾರ, ಮೌಢ್ಯತೆ ವಿರುದ್ಧ ಸಮರ ಸಾರಿದ್ದರು. ಅಂತರ್ಜಾತಿ ವಿವಾಹ ನಡೆಸಿ ಮನುಕುಲ ಒಂದೇ ಎಂಬುದನ್ನು ಸಾರಿದರು ಇದು ಕಲ್ಯಾಣ ಕ್ರಾಂತಿಗೆ ಕಾರಣವಾಯಿತು ಎಂದು ಹೇಳಿದರು.
ಮಹಾನವಮಿ ದಿನದಂದು ಶರಣರು ಎಳಹೋಟಿ ಶಿಕ್ಷೆ ಅನುಭವಿಸಿದರು. ಶರಣರ ಮೇಲೆ ದಬ್ಬಾಳಿಕೆ, ಹತ್ಯೆ ನಡೆಯಿತು. ಆದರೂ ಶರಣರು ಯಾವುದಕ್ಕೂ ಭಯ ಪಡದೇ ಎಲ್ಲವನ್ನೂ ಮೆಟ್ಟಿನಿಂತೂ ವಿಜಯೋತ್ಸವ ಸಾರಿದ್ದಾರೆ ಎಂದು ಹೇಳಿದ್ದಾರೆ.ಬಸವ ಗುರುವಿನ ಪೂಜೆ ನೆರವೇರಿಸಿದ ಮಾಜಿ ಶಾಸಕ ಪ್ರಕಾಶ ಖಂಡ್ರೆ ಮಾತನಾಡಿ, ಮನುಕುಲದ ಸಾರ್ಥಕ ಜೀವನಕ್ಕೆ ಬಸವಾದಿ ಶರಣರ ವಚನ ಸಾಹಿತ್ಯ ಪೂರಕವಾಗಿದೆ ಎಂದು ತಿಳಿಸಿದರು.
ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್‌ನ ಅಧ್ಯಕ್ಷ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು ಸಾನ್ನಿಧ್ಯ ವಹಿಸಿ ಮಾತನಾಡಿ, ಬಸವಾದಿ ಶರಣರು ತತ್ವ ಸಿದ್ದಾಂತಕ್ಕಾಗಿ ಹೋರಾಟ ನಡೆಸಿದರು. ಸಮಾನತೆ, ಜಾತಿ ರಹಿತ ಸಮಾಜ ಕಟ್ಟುವ ಪ್ರಯತ್ನ ಮಾಡಿದರು. ವಚನ ಸಾಹಿತ್ಯದ ರಕ್ಷಣೆಗಾಗಿ ಹೋರಾಟ ನಡೆಸಿದರು ಎಂದು ತಿಳಿಸಿದರು.ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ನೇತೃತ್ವ ವಹಿಸಿ ಮಾತನಾಡಿ, ಡಾ.ಚನ್ನಬಸವ ಪಟ್ಟದ್ದೇವರು ಪಲ್ಲಕ್ಕಿಯಲ್ಲಿ ವಚನ ಸಾಹಿತ್ಯದ ಮೆರವಣಿಗೆ ನಡೆಸಿ ಹೊಸ ಪರಂಪರೆಗೆ ನಾಂದಿ ಹಾಡಿದರು ಅದನ್ನು ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು ಮುನ್ನಡೆಸಿಕೊಂಡು ಬರುತ್ತಿದ್ದಾರೆ ಎಂದು ತಿಳಿಸಿದರು.
ಮಹಾಲಿಂಗ ಸ್ವಾಮೀಜಿ ಅನಿಲ ಮಹಾರಾಜರು, ಶಂಕರಲಿಂಗ ಸ್ವಾಮಿ ಸಮ್ಮುಖ ವಹಿಸಿದರು. ಈ ಸಂದರ್ಭದಲ್ಲಿ ಸಂಸದ ಸಾಗರ ಖಂಡ್ರೆ, ಶಶಿಧರ ಕೋಸಂಬೆ, ಬಸವರಾಜ ಮರೆ, ಸಂಗಮೇಶ ಹುಣಜೆ ಮದಕಟ್ಟಿ, ರವೀಂದ್ರ ಚಿಡಗುಪ್ಪೆ, ರಾಜಕುಮಾರ ಬಿರಾದಾರ್, ಕಾಶಿನಾಥ ಲದ್ದೆ, ಮಲ್ಲಮ್ಮ ನಾಗನಕೇರೆ, ಚಂದ್ರಕಲಾ ಪ್ರಭು ಡಿಗ್ಗೆ ಸೇರಿದಂತೆ ಹಲವರು ಇದ್ದರು.