ರಾಜ್ಯದ ಕುಣಬಿಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಆಗ್ರಹಿಸಿ ಜಿಲ್ಲಾ ಕುಣಬಿ ಸಮಾಜದಿಂದ ಒಂದು ದಿನದ ಉಪವಾಸ ಸತ್ಯಾಗ್ರಹ ದುರ್ಗಾದೇವಿ ಮೈದಾನದಲ್ಲಿ ನಡೆಯಿತು.
ಜೋಯಿಡಾ:
ರಾಜ್ಯದ ಕುಣಬಿಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಆಗ್ರಹಿಸಿ ಜಿಲ್ಲಾ ಕುಣಬಿ ಸಮಾಜದಿಂದ ಒಂದು ದಿನದ ಉಪವಾಸ ಸತ್ಯಾಗ್ರಹ ದುರ್ಗಾದೇವಿ ಮೈದಾನದಲ್ಲಿ ನಡೆಯಿತು. ತಹಸೀಲ್ದಾರ್ ಮೂಲಕ ಪ್ರಧಾನಿಗೆ ಮನವಿ ಸಲ್ಲಿಸಿದ್ದು ಪರಿಶಿಷ್ಟ ಪಂಗಡದ ಸ್ಥಾನಮಾನ ನೀಡದಿದ್ದರೆ ಉಗ್ರ ಪ್ರತಿಭಟನೆ ಮತ್ತು ಚುನಾವಣೆ ಬಹಿಷ್ಕಾರ ಅನಿವಾರ್ಯ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ.ಜಿಲ್ಲಾ ಕುಣಬಿ ಸಮಾಜ ಅಧ್ಯಕ್ಷ ಸುಭಾಷ ಗಾವಡಾ ಮಾತನಾಡಿ, ಕುಣಬಿಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸದೇ 30 ವರ್ಷಗಳಿಂದ ಅನ್ಯಾಯ ಮಾಡಲಾಗಿದೆ. ಬೃಹತ್ ಪಾದಯಾತ್ರೆ, ಉಪವಾಸ ಸತ್ಯಾಗ್ರಹ ಮಾಡಿದರು ಉಪಯೋಗಕ್ಕೆ ಬಂದಿಲ್ಲ. ನಿಯೋಗಗಳು ಮನವಿ ನೀಡಿದರು ಕಾಟಾಚಾರಕ್ಕೆ ಸೀಮಿತ ಆಗಿದೆ. ಮುಂದಿನ ದಿನಗಳಲ್ಲಿ ಹೋರಾಟ ನಿಲ್ಲುವುದಿಲ್ಲ. ಲೋಕಸಭೆ ಚುನಾವಣೆ ಬಹಿಷ್ಕಾರ ನಿರ್ಣಯ ಅನಿವಾರ್ಯ ಆಗಲಿದೆ ಎಂದರು.ತಾಲೂಕಾಧ್ಯಕ್ಷ ಅಜಿತ್ ಮಿರಾಶಿ ಮಾತನಾಡಿ, ನ್ಯಾಯಕ್ಕಾಗಿ ಹೋರಾಟ ನಿರಂತರ ಮುಂದುವರಿಯುತ್ತದೆ. ಯಾವುದೇ ಸರ್ಕಾರ ನಮ್ಮ ಹೋರಾಟ ಹಗುರವೆಂದು ಪರಿಗಣಿಸಬಾರದು ಎಂದು ಹೇಳಿದರು.ಗೋವಾದಂತೆ ಸ್ಥಾನ ಸಿಗಲಿ:
ಗೋವಾ ಮತ್ತು ರಾಜ್ಯ ಗಡಿರೇಖೆ ಇರುವುದರಿಂದ ಇಲ್ಲಿನ ಕುಣಬಿಗಳಿಗೆ ಎಸ್‌ಟಿ ಸೌಲಭ್ಯ ವಂಚಿತವಾಗಿದೆ. ಇವರನ್ನು ಗೋವಾದಂತೆ ಸ್ಥಾನಮಾನ ಸಿಗಬೇಕಾಗಿದೆ ಎಂದು ಗ್ರಾಮ ಪಂಚಾಯಿತಿ ಸದಸ್ಯ ಅರುಣ್ ಕಾಮರೆಕರ ಆಗ್ರಹಿಸಿದರು.ರಾಜಕೀಯ ಪಕ್ಷಗಳಿಗೆ ಚುನಾವಣೆ ಬಂದಾಗ ಮಾತ್ರ ಕುಣಬಿಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ನೆನಪಾಗುತ್ತದೆ. ನಾವುಗಳು ಚುನಾವಣೆಗೆ ಮಾತ್ರ ಸೀಮಿತವಾಗಿದೆ ಎಂದು ನಾರಾಯಣ ಕುಣಬಿ ಆಕ್ರೋಶ ವ್ಯಕ್ತಪಡಿಸಿದರು.ಮರಾಠಾ ಸಮಾಜದ ಅಧ್ಯಕ್ಷ ಚಂದ್ರಕಾಂತ ದೇಸಾಯಿ, ದೇವಿದಾಸ ದೇಸಾಯಿ, ಸುಭಾಷ್ ಮಾಂಜ್ರೇಕರ, ಸಂತೋಷ ಸಾವಂತ್ ಮಾತನಾಡಿದರು. ಮನವಿ ಸ್ವೀಕರಿಸಿದ ತಹಸೀಲ್ದಾರ್ ಮಂಜುನಾಥ ಮುನ್ನಳ್ಳಿ ರಾಜ್ಯಪಾಲರಿಗೆ ಕಳುಹಿಸುತ್ತೇವೆ ಎಂದರು. ಇದಕ್ಕೂ ಮೊದಲು ಕುಣಬಿ ಭವನದಲ್ಲಿ ಸಭೆ ನಡೆಯಿತು. ವಿವಿಧ ಘೋಷಣೆಗಳನ್ನು ಕೂಗುತ್ತ ತಾಲೂಕು ಕ್ರೀಡಾಂಗಣದಲ್ಲಿ ಉಪವಾಸ ಸತ್ಯಾಗ್ರಹ ಮುಂದುವರಿದಿತ್ತು.ಈ ವೇಳೆ ಕುಣಬಿ ಪ್ರಮುಖರಾದ ಲಕ್ಷ್ಮಣ ಗಾಂವಕರ, ಚಂದ್ರಿಮಾ ಮಿರಾಶಿ, ಮಾಬಳು ಕುಕಡಲಕರ, ಚಂದ್ರಶೇಖರ ಸಾವರ್ಕರ್, ರವಿ ಮಿರಾಶಿ, ಬುಧೊ ಕಾಲೇಕರ, ಪ್ರೇಮಾನಂದ ವೆಳಿಪ, ಸೋಮಣ್ಣ ಹನ್ನೋಲಕರ, ಸುಭಾಷ್ ವೆಳಿಪ್, ಪ್ರಸನ್ನ ಗಾವಡಾ, ಶುಭಾಂಗಿ ಗಾವಡಾ, ಸುಷ್ಮಾ ಮಿರಾಶಿ, ಪ್ರಕಾಶ ವೆಳಿಪ್, ಪುಟ್ಟಾ ಕುಣಬಿ, ಮಾಬಳೇಶ್ವರ ಕುಣಬಿ, ವಿಷ್ಣು ಭಿರಂಗತ್ ಇದ್ದರು. ಪಿಎಸ್‌ಐ ಮಾಳಿ ಪೊಲೀಸ್ ಬಂದೋಬಸ್ತ್ ಕಲ್ಪಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.