ಇಂದಿನ ದೃಶ್ಯ ಮಾಧ್ಯಮಗಳ ಭರಾಟೆಯಲ್ಲಿ ಗ್ರಾಮೀಣ ಪ್ರದೇಶದ ದೊಡ್ಡಾಟ, ಬಯಲಾಟದಂತಹ ಕಲೆಗಳು ಮರೆಯಾಗುತ್ತಿದ್ದು, ಅವುಗಳನ್ನು ಉಳಿಸಿ ಪ್ರೋತ್ಸಾಹಿಸಬೇಕು ಎಂದು ಮುಖಂಡ ಮಿಥುನ ಪಾಟೀಲ ಹೇಳಿದರು.
ನರೇಗಲ್ಲ: ಇಂದಿನ ದೃಶ್ಯ ಮಾಧ್ಯಮಗಳ ಭರಾಟೆಯಲ್ಲಿ ಗ್ರಾಮೀಣ ಪ್ರದೇಶದ ದೊಡ್ಡಾಟ, ಬಯಲಾಟದಂತಹ ಕಲೆಗಳು ಮರೆಯಾಗುತ್ತಿದ್ದು, ಅವುಗಳನ್ನು ಉಳಿಸಿ ಪ್ರೋತ್ಸಾಹಿಸಬೇಕು ಎಂದು ಮುಖಂಡ ಮಿಥುನ ಪಾಟೀಲ ಹೇಳಿದರು. ಅವರು ಸಮೀಪದ ಜಕ್ಕಲಿ ಗ್ರಾಮದಲ್ಲಿ ಗ್ರಾಮದೇವತಿಗಳ ಜಾತ್ರಾ ಮಹೋತ್ಸವ ಅಂಗವಾಗಿ ಲಕ್ಷ್ಮೀದೇವಿ ಬನಶಂಕರಿ ದೇವಿ ಬಯಲಾಟ ಸಂಘದವರು ಹಾಗೂ ಕನ್ನಡ ಮತ್ತು ಸಾಂಸ್ಕೃತಿ ಇಲಾಖೆ ಗದಗ ಇವರ ಸಹಯೋಗದೊಂದಿಗೆ ಬುಧವಾರ ಆಯೋಜಿಸಲಾಗಿದ್ದ ಕಿರಾತ ಅರ್ಜುನರ ಕಾಳಗ ಬಯಲಾಟ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಗ್ರಾಮೀಣ ಪ್ರದೇಶದ ಕಲೆಗಳನ್ನು ಇಂದಿನ ಯುವ ಪೀಳಿಗೆಗೆ ಕಲಿಸುವತ್ತ ಕಲಾವಿದರು ಗಮನ ಹರಿಸಬೇಕು. ಹಿಂದಿನ ದಿನಗಳಲ್ಲಿ ದೊಡ್ಡಾಟ ಮತ್ತು ನಾಟಕಗಳನ್ನು ಪ್ರದರ್ಶಿಸುವುದು ಸಂಪ್ರದಾಯವನ್ನಾಗಿಸಿಕೊಳ್ಳಲಾಗಿತ್ತು. ಆ ಮೂಲಕ ತಮ್ಮ ಕಲೆ, ಸಂಸ್ಕೃತಿ ಮತ್ತು ಪರಂಪರೆಯನ್ನು ಮೆರೆಯುತ್ತಿದ್ದರು. ಜತೆಗೆ ಐತಿಹಾಸಿಕ ದಿನಗಳನ್ನು ಮೆಲುಕು ಹಾಕುತ್ತಿದ್ದರು. ಆದರೆ ಇಂದಿನ ಯುವ ಪೀಳಿಗೆ ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರು ಹೋಗಿದ್ದು, ಎಲ್ಲ ಪರಂಪರೆಗಳಿಗೂ ಧಕ್ಕೆ ಬರುತ್ತಿದೆ. ಆದ್ದರಿಂದ ಗ್ರಾಮೀಣ ಪ್ರದೇಶದಲ್ಲಿ ನಡೆಯುವ ಇಂತಹ ಕಲೆಗಳನ್ನು ಸರಕಾರ ಪ್ರೋತ್ಸಾಹಿಸುತ್ತಿದೆ ಎಂದರು.ಅಧ್ಯಕ್ಷತೆಯನ್ನು ವಹಿಸಿದ್ದ ಗ್ರಾಪಂ ಮಾಜಿ ಅಧ್ಯಕ್ಷ ಎಂ.ಎಂ. ಮೇಟಿ ಮಾತನಾಡಿ, ಪ್ರಾಚೀನ ಕಾಲದ ಕಲೆ, ಸಂಸ್ಕೃತಿಯನ್ನು ಬಿತ್ತರಿಸುವ ಇಂತಹ ಬಯಲಾಟದ ಕಲೆಯನ್ನು ಪ್ರದರ್ಶಿಸುವ ಮೂಲಕ ನಮ್ಮ ಸಂಸ್ಕೃತಿಯನ್ನು ಇಂದಿನ ನವಪೀಳಿಗೆಗೆ ಪರಿಚಯಿಸುವ ಕಾರ್ಯಕ್ಕೆ ಯಶಸ್ಸು ಲಭಿಸಲಿ ಎಂದು ಶುಭ ಹಾರೈಸಿದರು. ಮುಖ್ಯ ಅತಿಥಿಯಾಗಿ ಮಾತನಾಡಿದ ಅನಿಲಕುಮಾರ ಹೊಸಮನಿ ಉತ್ತರ ಕರ್ನಾಟಕದ ಗಂಡು ಕಲೆಯಾದ ಜಾನಪದ ಬಯಲಾಟಗಳು ಈ ಹಿಂದೆ ಜಾತ್ರೆ, ಉತ್ಸವ ಸಂದರ್ಭಗಳಲ್ಲಿ ಪ್ರತಿ ಗ್ರಾಮಗಳಲ್ಲಿ ವರ್ಷದಲ್ಲಿ ಎರಡು-ಮೂರು ಬಾರಿ ನಡೆದು ಗ್ರಾಮೀಣ ಭಾಗದ ಕಲಾವಿದರಿಗೆ ಪ್ರೋತ್ಸಾಹ, ಮನರಂಜನೆ ದೊರೆಯುತ್ತಿತ್ತು. ಆದರೆ, ಇತ್ತೀಚೆಗೆ ಮೊಬೈಲ್, ಸಿನಿಮಾ ಮತ್ತು ಟಿ.ವಿ. ಹಾವಳಿಯಿಂದ ಜೀವಂತ ಕಲೆಯಾದ ನಾಟಕ ಮತ್ತು ಬಯಲಾಟಗಳು ಅಪರೂಪವಾಗುತ್ತಿವೆ. ಗ್ರಾಮೀಣ ಭಾಗದ ಹಿರಿಯ ಕಲಾವಿದರು ಅಮೂಲ್ಯ ಕಲೆ ನಶಿಸಿ ಹೋಗದಂತೆ ಮುಂದಿನ ಜನಾಂಗಕ್ಕೆ ತರಬೇತಿ ನೀಡುವ ಮೂಲಕ ಜೀವಂತವಾಗಿ ಇಡಬೇಕು ಎಂದರು. ಈ ವೇಳೆಯಲ್ಲಿ ಅನೇಕ ಗಣ್ಯರನ್ನು, ಕಲಾವಿದರನ್ನು ಸನ್ಮಾನಿಸಲಾಯಿತು. ಮುಖ್ಯ ಅತಿಥಿಗಳಾಗಿ ರವೀಂದ್ರನಾಥ ದೊಡ್ಡಮೇಟಿ, ಅಶೋಕಪ್ಪ ಯಾವಗಲ್ಲ, ಶೇಖಣ್ಣವರ ಮೇಟಿ, ಡಾ. ಎ.ವಿ. ನರೇಗಲ್ಲ, ಗುರುಲಿಂಗಯ್ಯ ಮಂಟಯ್ಯನಮಠ, ಸುಭಾಷಚಂದ್ರ ಪಲ್ಲೇದ ಮಹೇಶ್ವರಪ್ಪ ಕೋರಿ, ರಮೇಶ ಪಲ್ಲೇದ, ಶರಣಪ್ಪಮಾಸ್ತಾರ ಬೂದಿಹಾಳ, ಅಡಿವೆಪ್ಪ ರೋಣದ, ಬಸವರಾಜ ಶ್ಯಾಶೆಟ್ಟಿ, ಫಕೀರಪ್ಪ ಮಾದರ ಸೇರಿದಂತೆ ಇನ್ನು ಅನೇಕರು ಭಾಗವಹಿಸಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.