ಕೇಣಿ ವಾಣಿಜ್ಯ ಬಂದರಿಗೆ ತೀವ್ರ ವಿರೋಧ । ಗ್ರಾಪಂ ಮಟ್ಟದಲ್ಲಿ ಸರಣಿ ಪ್ರತಿಭಟನೆಗೆ ನಿರ್ಧಾರ
ಕನ್ನಡಪ್ರಭ ವಾರ್ತೆ ಅಂಕೋಲಾಕೇಣಿಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಗ್ರೀನ್ ಫೀಲ್ಡ್ ಸರ್ವಋತು ಬೃಹತ್ ವಾಣಿಜ್ಯ ಬಂದರು ಯೋಜನೆಗೆ ತೀವ್ರ ವಿರೋಧ ವ್ಯಕ್ತವಾಗಿದ್ದು, ಯೋಜನೆಯನ್ನು ವಿರೋಧಿಸುವ ಅಭಿಯಾನವಾಗಿ ಅಂಕೋಲೆ ಉಳಿಸಿ ಅಭಿಯಾನಕ್ಕೆ ಚಾಲನೆ ದೊರೆಯಿತು.
ಪಟ್ಟಣದ ಸ್ವಾತಂತ್ರ್ಯ ಸಂಗ್ರಾಮ ಭವನದಲ್ಲಿರುವ ಗಾಂಧಿ ಪ್ರತಿಮೆಗೆ ಹಾರ ಸಮರ್ಪಿಸುವ ಮೂಲಕ ಅಭಿಯಾನಕ್ಕೆ ಪ್ರತಿಭಟನಾಕಾರರು ಚಾಲನೆ ನೀಡಿದರು.ಪ್ರತಿ ಗ್ರಾಪಂ ಮಟ್ಟದಲ್ಲಿ ಸರಣಿ ಪ್ರತಿಭಟನೆ:
ಕೇಣಿಯಲ್ಲಿ ಸರ್ಕಾರದ ಸಹಭಾಗಿತ್ವದಲ್ಲಿ ಜಿಂದಾಲ ಕಂಪನಿಯವರು ನಿರ್ಮಿಸಲು ಮುಂದಾಗಿರುವ ವಾಣಿಜ್ಯ ಬಂದರು ಯೋಜನೆಗೆ ಭಾವಿಕೇರಿ ಪಂಚಾಯಿತಿಯಲ್ಲಿ ನಡೆದ ಗ್ರಾಮಸಭೆಯಲ್ಲಿ ನೆರೆದ ಸಾರ್ವಜನಿಕರಿಂದ ವಿರೋಧಾಭಿಪ್ರಾಯ ವ್ಯಕ್ತವಾಗಿತ್ತು. ಹಾಗೆ ಪ್ರತಿಭಟನಾ ಸಬೆಯಲ್ಲಿ ಅಲಗೇರಿ ಪಂಚಾಯಿತಿ ವ್ಯಾಪ್ತಿಯ ಕೃಷ್ಣಾಪುರ, ಒಡ್ಡರ ಕಾಲನಿ, ಶಿರಕುಳಿ, ಅಂಬಾರಕೊಡ್ಲ, ಜನತಾ ಕಾಲನಿ, ಕಂತ್ರಿ, ಖಂಡುಗದ್ದೆ, ಬೊಗ್ರಿಬೈಲ್, ಶಿರೂರು ಪಂಚಾಯಿತಿ ವ್ಯಾಪ್ತಿಯ ತಳಗದ್ದೆ, ಬೊಬ್ರವಾಡಾ ಪಂಚಾಯಿತಿ ವ್ಯಾಪ್ತಿಯ ಶೇಡಿಕುಳಿ, ಹಾರವಾಡಾ, ಮುದಗಾ, ಬೆಲೇಕೇರಿ ಹೀಗೆ ಹಲವು ಭಾಗಗಳಿಂದ ಹಂತ ಹಂತವಾಗಿ ತಾಲೂಕು ತಹಸೀಲ್ದಾರರ ಕಚೇರಿಯ ಎದುರಿನಲ್ಲಿ ನಡೆಯಲಿರುವ ಅನಿರ್ದಿಷ್ಟಾವಧಿ ಪ್ರತಿಭಟನಾ ಹೋರಾಟದಲ್ಲಿ ವಿವಿಧ ಪಂಚಾಯಿತಿಯವರು ಪಾಲ್ಗೊಳ್ಳಲು ತೀರ್ಮಾನಿಸಲಾಯಿತು.ಕಡಲುಶಾಸ್ತ್ರ ವಿಜ್ಞಾನಿ ಡಾ. ವಿ.ಎನ್. ನಾಯಕ ಮಾತನಾಡಿ, ದೇಶ ಕೊಳ್ಳೆ ಹೊಡೆಯಲು ಬಂದ ಬ್ರಿಟಿಷರ ವಿರುದ್ಧ ಜೀವದ ಹಂಗು ತೊರೆದು ಹೋರಾಟಕ್ಕಿಳಿದ ಅಂಕೋಲೆಯ ನೆಲದಲ್ಲಿ, ಇಂದು ಬಂಡವಾಳಶಾಹಿಗಳ ಸ್ವಾರ್ಥದ ವಿರುದ್ಧ ಪ್ರತಿಭಟನೆಗಿಳಿದು ನಮ್ಮ ನೆಲ, ಜಲ ಉಳಿಸಿಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ ಎಂದರು.
ಪ್ರತಿಭಟನಾಕಾರ ಸಂಜೀವ ಬಲೆಗಾರ ಮಾತನಾಡಿ, ಸಾರ್ವಜನಿಕರ ಅಹವಾಲು ಆಲಿಕೆ ಸಭೆಯಲ್ಲಿ ಬಂದರು ಯೋಜನೆಗೆ ತೀವ್ರ ವಿರೋಧ ವ್ಯಕ್ತವಾಗಿದ್ದರೂ ಸ್ಪಷ್ಟ ಅಭಿಪ್ರಾಯವನ್ನು ವ್ಯಕ್ತಪಡಿಸಲು ಅಧಿಕಾರಿಗಳು ಹಿಂದೇಟು ಹಾಕುತ್ತಿರುವುದು ನೋವಿನ ಸಂಗತಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಪತ್ರಕರ್ತ ಕೆ. ರಮೇಶ ಮಾತನಾಡಿ, ಕೇಣಿ ಬಂದರು ಯೋಜನೆಯಿಂದ ಎದುರಾಗಲಿರುವ ಸಮಸ್ಯೆಗಳ ಕುರಿತು ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ ಅವರ ಗಮನಕ್ಕೂ ತರಲಾಗಿದ್ದು, ಹೋರಾಟದ ಹೆಜ್ಜೆಗಳು ಇನ್ನಷ್ಟು ಗಟ್ಟಿಯಾಗಲಿದೆ ಎಂದರು. ಯಾವುದೇ ಕಾರಣಕ್ಕೂ ನಾವು ಹುಟ್ಟಿ ಬೆಳೆದ ಭೂಮಿಯನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ ಎಂದರು.