ಕಪ್ಪತ್ತಗುಡ್ಡದಲ್ಲಿರುವ ಔಷಧಿ, ಸುಗಂಧ ಸಸ್ಯಗಳನ್ನು ಉಳಿಸಿ: ಪ್ರೊ. ಡಾ. ಜಗನ್ನಾಥರಾವ್

KannadaprabhaNewsNetwork |  
Published : Oct 29, 2024, 01:01 AM IST
28ಜಿಡಿಜಿ15ಪಾಲುದಾರರ ಸಮ್ಮಿಲನ, ಸಂವಾದ ಮತ್ತು ಸಮನ್ವಯ ಕಾರ್ಯಕ್ರಮವನ್ನು ಅತಿಥಿಗಳು ಉದ್ಘಾಟಿಸಿದರು. | Kannada Prabha

ಸಾರಾಂಶ

ಕಪ್ಪತ್ತಗುಡ್ಡ ಪರಿಸರದಲ್ಲಿರುವ ಔಷಧಿ ಹಾಗೂ ಸುಗಂಧಿ ಸಸ್ಯಗಳನ್ನು ಉಳಿಸಿ ಬೆಳೆಸುವ ಅವಶ್ಯಕತೆ ಇದೆ ಎಂದು ಬೆಂಗಳೂರಿನ ಟ್ರಾನ್ಸ್ ಡಿಸಿಪ್ಲಿನರಿ ವಿಶ್ವವಿದ್ಯಾಲಯದ ಪ್ರೊ. ಡಾ. ಜಗನ್ನಾಥರಾವ್ ಹೇಳಿದರು.

ಗದಗ: ಕಪ್ಪತ್ತಗುಡ್ಡ ಪರಿಸರದಲ್ಲಿರುವ ಔಷಧಿ ಹಾಗೂ ಸುಗಂಧಿ ಸಸ್ಯಗಳನ್ನು ಉಳಿಸಿ ಬೆಳೆಸುವ ಅವಶ್ಯಕತೆ ಇದೆ ಎಂದು ಬೆಂಗಳೂರಿನ ಟ್ರಾನ್ಸ್ ಡಿಸಿಪ್ಲಿನರಿ ವಿಶ್ವವಿದ್ಯಾಲಯದ ಪ್ರೊ. ಡಾ. ಜಗನ್ನಾಥರಾವ್ ಹೇಳಿದರು.

ಸೋಮವಾರ ಸಸ್ಯ ಸಂಜೀವಿನಿ ಔಷಧಿ ಹಾಗೂ ಸುಗಂಧಿ ಸಸ್ಯಗಳ ಪಾಲುದಾರರ ಒಕ್ಕೂಟ, ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ ನಾಗಾವಿ, ಅರಣ್ಯ, ಆಯುಷ್, ತೋಟಗಾರಿಕೆ, ಮತ್ತು ಕೃಷಿ ಇಲಾಖೆ ಹಾಗೂ ಧರಿತ್ರಿ ಕೃಷಿ ಪರಿವಾರ ಗದಗ, ಶ್ರೀ ಕಪ್ಪತಮಲ್ಲೇಶ್ವರ ತೋಟಗಾರಿಕೆ ರೈತ ಉತ್ಪಾದಕ ಕಂಪನಿ ಕಡಕೋಳ ಸಂಯುಕ್ತ ಆಶ್ರಯದಲ್ಲಿ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ವಿಶ್ವವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ ಪಾಲುದಾರರ ಸಮ್ಮಿಲನ, ಸಂವಾದ ಮತ್ತು ಸಮನ್ವಯ ಕಾರ್ಯಕ್ರಮದಲ್ಲಿ ಮಾತನಾಡಿದರು.

ಒಕ್ಕೂಟದ ಉದ್ದೇಶ, ನಡೆದುಬಂದ ದಾರಿ ಕುರಿತು, ಕಪ್ಪತಗುಡ್ಡದಲ್ಲಿ ಅಳಿವಿನಂಚಿನಲ್ಲಿರುವ ವಿವಿಧ ಸಸ್ಯಗಳು ಅವುಗಳ ಮಹತ್ವ, ಅದಕ್ಕಾಗಿ ಮಾಡಬೇಕಿರುವ ಕ್ರಮಗಳು ಹಾಗೂ ಜೀವ ವೈವಿಧ್ಯ ಸಂರಕ್ಷಣೆಯಲ್ಲಿ ಆಗಬೇಕಾಗಿರುವ ಕೆಲಸ ಕಾರ್ಯಗಳು ಕುರಿತು ಮಾತನಾಡಿದರು.

ಸಸ್ಯ ಸಂಜೀವಿನಿಯ ಪ್ರಧಾನ ಸಂಚಾಲಕ ಡಿ.ಕೆ. ಮಹೇಶಕುಮಾರ ಅವರು ಒಕ್ಕೂಟದ ಧ್ಯೇಯೋದ್ದೇಶ, ಕ್ರಮಿಸಿದ ದಾರಿ, ರಾಜ್ಯಾದ್ಯಂತ ಹಮ್ಮಿಕೊಂಡ ಸಂಘಟನಾ ಸಭೆಗಳು, ಸಿದ್ಧತಾ ಸಭೆಗಳ ವಿವರಗಳನ್ನು ಸಭೆಯಲ್ಲಿ ಮಂಡಿಸಿದರು.

ಜಿಲ್ಲಾ ಆಯುಷ್ ಅಧಿಕಾರಿ ಡಾ. ಎಂ.ಎಸ್. ಉಪ್ಪಿನ ಆಯುಷ್ ಇಲಾಖೆಯು ಒಕ್ಕೂಟದ ಕಾರ್ಯಕ್ರಮಗಳ ಅನುಷ್ಠಾನಗೊಳಿಸುವ ಕುರಿತು ಮಾತನಾಡಿದರು.

ಪ್ರಗತಿಪರರ ರೈತ ಗುರುನಾಥಗೌಡ ಓದುಗೌಡರ ಮಾತನಾಡಿ, ಔಷಧೀಯ ಸಸ್ಯಗಳ ಅಭಿವೃದ್ಧಿಗಾಗಿ ವ್ಯವಸ್ಥಿತ ಅಧ್ಯಯನದ ಅವಶ್ಯಕತೆಯಿದ್ದು, ಆ ನಿಟ್ಟಿನಲ್ಲಿ ಗ್ರಾಮೀಣ ವಿಶ್ವವಿದ್ಯಾಲಯದಲ್ಲಿ ಪದವಿ ಹಾಗೂ ಸ್ನಾತಕೋತ್ತರ ಪದವಿ ಕೋರ್ಸ್‌ಗಳನ್ನು ಪ್ರಾರಂಭಿಸಿ ಕಪ್ಪತಗುಡ್ಡದಲ್ಲಿಯ ಅಪರೂಪದ ಔಷಧೀಯ ಸಸ್ಯಗಳ ಸಂರಕ್ಷಣೆ ಸುಲಭಗೊಳ್ಳುವುದಲ್ಲದೆ ಯುವಕರಿಗೆ ಉದ್ಯೋಗಾವಕಾಶ ಸೃಷ್ಟಿಸಬಹುದು ಎಂದರು.

ಹುಲಕೋಟಿಯ ಕೆ.ವಿ.ಕೆ. ವಿಜ್ಞಾನಿ ಡಾ. ಎಚ್.ಆರ್. ಹಿರೇಗೌಡರ ಹಾಗೂ ಪಾರಂಪರಿಕ ವೈದ್ಯ ಡಾ. ಚನಮಲ್ಲಯ್ಯ ಕಂಬಿ ವಿಷಯ ಮಂಡಿಸಿದರು.

ಸಂವಾದದಲ್ಲಿ ಭಾಗಿಯಾಗಿದ್ದ ಒಕ್ಕೂಟದ ನಿರ್ದೇಶಕ ಬಾಲಚಂದ್ರ ಜಾಬಶೆಟ್ಟಿ ಮಾತನಾಡಿ, ಒಕ್ಕೂಟದ ರೂಪರೇಷೆಗಳ ಬಗ್ಗೆ ವಿವರಿಸಿದರು. ಶಿರಸಿಯ ಪ್ರಶಾಂತ ಜೋಶಿ ಸಾವಯವ ಹಾಗೂ ನೈಸರ್ಗಿಕ ಕೃಷಿಯ ಅನುಭವ ಹಂಚಿಕೊಂಡರು.

ಬೆಂಗಳೂರಿನ ಮಾರುತಿ ರಾವ್ ಮಾತನಾಡಿ, ರೈತರು, ಖರೀದಿದಾರರು, ಮೌಲ್ಯ ವರ್ಧಕರ ಮಧ್ಯೆ ಸಮನ್ವಯ ಸಾಧಿಸಲು ಆ್ಯಪ್ ಸಿದ್ಧಗೊಳಿಸಲಾಗಿದ್ದು, ಅದರಿಂದಾಗುವ ಲಾಭಗಳ ಬಗ್ಗೆ ತಿಳಿಸಿದರು.

ಕಳೆದ 30 ವರ್ಷಗಳಿಂದ ಕಪ್ಪತಗುಡ್ಡದಲ್ಲಿ ಔಷಧೀಯ ಸಸ್ಯಗಳನ್ನು ವೈಜ್ಞಾನಿಕ ಪದ್ಧತಿಯಿಂದ ಸಂಗ್ರಹಿಸಿ ಆಯುರ್ವೇದ, ಸಾಂಪ್ರದಾಯಿಕ ಹಾಗೂ ಪಾರಂಪರಿಕ ವೈದ್ಯರಿಗೆ ಪೂರೈಸಿ ಜನಸಾಮಾನ್ಯರ ಆರೋಗ್ಯ ಸಂರಕ್ಷಣೆಯಲ್ಲಿ ತೊಡಗಿರುವ ಹೊಸಳ್ಳಿಯ ಕಸ್ತೂರೆವ್ವ ಹಾರೂಗೇರಿ ಅವರ ಸೇವೆ ಗುರುತಿಸಿ ಸನ್ಮಾನಿಸಲಾಯಿತು.

ವಿವಿಯ ತೋಟಗಾರಿಕೆ ವಿಭಾಗದ ಡಾ. ಉಡಚಪ್ಪ ಪೂಜಾರ ಮುಂತಾದವರು ಮಾತನಾಡಿದರು. ಕುಲಪತಿ ಡಾ. ಎಸ್.ವಿ. ನಾಡಗೌಡ್ರ ಅಧ್ಯಕ್ಷೀಯ ಮಾತುಗಳನ್ನಾಡಿದರು. ನಂದಿವೇರಿ ಸಂಸ್ಥಾನ ಮಠದ ಶಿವಕುಮಾರ ಶ್ರೀಗಳು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಡಾ. ಬಸವರಾಜ ನಾವಿ ರೈತ ಗೀತೆ ಹಾಡಿದರು. ರುದ್ರಣ್ಣ ಗುಳಗುಳಿ ಸ್ವಾಗತಿಸಿದರು.

ಡಾ. ನಾಭೂಷಣ, ನೈಸರ್ಗಿಕ ಕೃಷಿಕ ದೇವರಡ್ಡಿ ಅಗಸನಕೊಪ್ಪ, ಬಸವರಾಜ ಶೈಲಪ್ಪನವರ ನಿರೂಪಿಸಿದರು. ಡಾ. ದೀಕ್ಷಿತ, ವಿಶ್ವವಿದ್ಯಾಲಯದ ಸಿಬ್ಬಂದಿ, ನೂರಾರು ರೈತರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೀರಿನಲ್ಲಿ ಕಾಳು ಹಾಕಿ ಕಲಬೆರಿಕೆ ಪತ್ತೆ ಮಾಡಿ
ಭಾಷಣ ಮಾಡಿಕೊಂಡು ಹೋದವನಲ್ಲ, ಪಕ್ಷದ ಎಲ್ಲಾ ಕೆಲ್ಸ ಮಾಡಿದ್ದೇನೆ: ಡಿಕೆಶಿ