ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಸ್ಥಳೀಯ ನಗರಸಭೆಯು 2024-25ನೇ ಸಾಲಿಗೆ ಒಟ್ಟು 125 ಕೋಟಿ ರು, ಆದಾಯ ನಿರೀಕ್ಷಿಸುವ 122.56 ಕೋಟಿ ರು, ಖರ್ಚಿನ ಬರೋಬ್ಬರಿ 2.84 ಕೋಟಿ ರು, ಉಳಿತಾಯ ಬಜೆಟ್ ಮಂಡಿಸಿದೆ. ನಗರಸಭೆಯ ಸರ್.ಎಂ.ವಿ ಸಭಾಂಗಣದಲ್ಲಿ ಸೋಮವಾರ ನಡೆದ ಬಜೆಟ್ ಸಭೆಯಲ್ಲಿ ನಗರಸಭೆಯ ಆಡಳಿತಾಧಿಕಾರಿಗಳಾದ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ರವರ ಅಧ್ಯಕ್ಷತೆಯಲ್ಲಿ ನಗರಸಭೆಯ ಪರಿಸರ ಅಭಿಯಂತರ ಉಮಾಶಂಕರ್ ಮಂಡಿಸಿದರು.ಎಲ್ಲಲ್ಲಿಂದ ಆದಾಯ ನಿರೀಕ್ಷೆ:
ವಿಶೇಷವಾಗಿ ನಗರಸಭೆಗೆ 2024-25ನೇ ಸಾಲಿನ ಆರ್ಥಿಕ ವರ್ಷದಲ್ಲಿ ಒಟ್ಟು 625 ಲಕ್ಷ ಆಸ್ತಿ ತೆರಿಗೆ ಆದಾಯವನ್ನು ನಿರೀಕ್ಷಿಸಿದೆ. ಅಲ್ಲದೇ ಆಸ್ತಿಗಳ ತೆರಿಗೆಗಳ ಮೇಲಿನ ದಂಡದಿಂದ 150 ಲಕ್ಷ ರು. ಆದಾಯ ನಿರೀಕ್ಷಿಸಿದೆ. ನಗರಸಭೆ ವ್ಯಾಪ್ತಿಯಲ್ಲಿನ ಜಾಹೀರಾತು ಲಕಗಳಿಂದ ಒಟ್ಟು 4 ಲಕ್ಷ ರು, ಅಕ್ರಮ, ಸಕ್ರಮದಿಂದ ಬರುವ ದಂಡದ ಮೊತ್ತವನ್ನು 2 ಲಕ್ಷ ರು, ವಿಶೇಷವಾಗಿ ನಗರಸಭೆ 10 ಸಾವಿರ ಮನೆಗಳಿಂದ ನೀರಿನ ಸಂಪರ್ಕ ಹಾಗೂ ಹೊಸ ಸಂಪರ್ಕದಿಂದ 180 ಲಕ್ಷ ರು, ಹೊಸದಾಗಿ 1 ಸಾವಿರ ಮನೆಗಳಿಗೆ ನೀರು ಸಂಪರ್ಕದಿಂದ 30 ಲಕ್ಷ ರು, ನಗರಸಭೆಗೆ ಸೇರಿರುವ ನಿರುಪಯುಕ್ತ ವಸ್ತುಗಳ ಹರಾಜಿನಿಂದ 10 ಲಕ್ಷ ರು,ನಗರಸಭೆಯ 300 ಕ್ಕೂ ಹೆಚ್ಚು ಮಳಿಗೆಗಳ ಬಾಡಿಗೆಯಿಂದ 1 ಕೋಟಿ, ಖಾಸಗಿ ಬಸ್ ನಿಲ್ದಾಣದಲ್ಲಿನ ಸಾರ್ವಜನಿಕ ಶೌಚಾಲಯ, ವಾಹನಗಳ ಶುಲ್ಕದಿಂದ 7 ಲಕ್ಷ ರು, ಆದಾಯ ನಿರೀಕ್ಷಿಸಲಾಗಿದೆ.ನಗರದ ಸಮಗ್ರ ಅಭಿವೃದ್ಧಿಗೆ ಒತ್ತು
ಈ ವೇಳೆ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಮಾತನಾಡಿ, ವಿಶೇಷವಾಗಿ ನಗರದ ಮೂಲ ಸೌಕರ್ಯ, ಅಭಿವೃದ್ದಿ ದೃಷ್ಠಿಕೋನದಿಂದ ಎಲ್ಲಾ ಸದಸ್ಯರ ಅಭಿಪ್ರಾಯ, ಸಲಹೆಗಳನ್ನು ಪಡೆದು ಪೂರಕವಾಗಿ ಬಜೆಟ್ ಮಂಡನೆ ಮಾಡಲಾಗಿದೆ. ಜಕ್ಕಲಮಡಗು ಜಲಾಶಯ ಅಭಿವೃದ್ದಿಗೆ, ನಗರದ ಸೌಂದರ್ಯಕ್ಕೆ, ಉದ್ಯಾನವನಗಳ ಪುನಶ್ಚೇತನಕ್ಕೆ, ರಸ್ತೆ, ಯುಜಿಡಿ, ಪಾದಚಾರಿಗಳ ಮಾರ್ಗ ಅಭಿವೃದ್ದಿಗೆ ಆದ್ಯತೆ ನೀಡಲಾಗಿದೆ. ನಗರಕ್ಕೆ ಈ ಬಾರಿ ವಿಶೇಷ ಅನುದಾನ ಹಲವು ಯೋಜನೆಗಳಿಂದ ಬರಲಿದ್ದು ಮುಖ್ಯವಾಗಿ ನಗರದ ಪಾದಚಾರಿ ಹಾಗೂ ಹಲವು ಪ್ರಮುಖ ವೃತ್ತಗಳ ಅಭಿವೃದ್ದಿಗೆ ಡಲ್ಟ್ ಯೋಜನೆಯಡಿ 12 ಕೋಟಿ ರು, ಹಾಗೂ ಅಮೃತ 2.0 ಯೋಜನೆಯಿಂದ 13 ಕೋಟಿ ರು. ಅನುದಾನ ಹಾಗೂ ಎಸ್.ಎಫ್.ಸಿ ಮತ್ತಿತರ ಯೋಜನೆಗಳಿಂದ ಅನುದಾನ ಬರಲಿದ್ದು, ನಗರದ ಸಮಗ್ರ ಅಭಿವೃದ್ದಿಗೆ ಒತ್ತು ಕೊಡಲಾಗುವುದೆಂದರು. ಇದೊಂದು ಆಶಾದಾಯಕವಾದ ಬಜೆಟ್ ಆಗಿದೆ ಎಂದರು.