ಧಾರವಾಡ:
ಜ. 24ರಿಂದ 29ರ ವರೆಗೆ ಇಲ್ಲಿಯ ವಿದ್ಯಾವರ್ಧಕ ಸಂಘದ ಚಿತ್ರಕಲಾ ಸಭಾಭವನದಲ್ಲಿ ಆಯೋಜಿಸಿದ್ದ ಸವಿತಾ ಬೆಣಗಿ ಅವರ ಚಿತ್ರಕಲಾ ಪ್ರದರ್ಶನ ವೀಕ್ಷಿಸಿದ ಕಲಾವಿದ ಡಾ. ಬಸವರಾಜ ಕಲೆಗಾರ ಮಾತನಾಡಿ, ಕೌದಿ ವಿಭಿನ್ನ ಬಣ್ಣದ ತುಂಡುಗಳಿಂದ ಹೊಲಿದ ಕಲಾತ್ಮಕ ವಿನ್ಯಾಸ. ಕೌದಿಯಲ್ಲಿ ನಮ್ಮ ಮನಸ್ಸು ಹಾಗೂ ಭಾವನೆಗಳ ಬೆಸುಗೆ ಇದೆ. ಕೌದಿಯನ್ನು ಮುಖದ ಮೇಲೆ ಹೊದ್ದು ಮಲಗಿದಾಗ ಸಿಗುವ ಆನಂದವೇ ಬೇರೆ. ನಮಗೆ ನಮ್ಮನ್ನಗಲಿದ ತಂದೆ-ತಾಯಿ ನೆನಪು ಕಣ್ಣು ಮುಂದೆ ಬರುವುದು ನಿಶ್ಚಿತ. ಕೌದಿ ನಮ್ಮ ಗ್ರಾಮೀಣ ಜಾನಪದ ಮಹಿಳೆಯರ ಭಾವನಾತ್ಮಕ ಸಂಬಂಧದ ಕಲಾನಿಧಿಯಾಗಿದೆ. ಅಂತಹ ಕಲಾ ಪ್ರಕಾರ ಬಳಸಿಕೊಂಡು ಚಿತ್ರ ತೆಗೆದು ಸವಿತಾ ಬೆಣಗಿ ಗಮನ ಸೆಳೆದಿದ್ದಾರೆ ಎಂದರು.
ಹಿರಿಯ ಚಿತ್ರಕಲಾವಿದ ಎಂ.ಆರ್. ಬಾಳಿಕಾಯಿ ಪ್ರದರ್ಶನಕ್ಕೆ ಚಾಲನೆ ನೀಡಿ, ಚಿತ್ರಕಲೆ ಬದುಕಿಗೆ ಬಣ್ಣ ತುಂಬುವ ಕಾರ್ಯ ಮಾಡುತ್ತದೆ. ಅದು ನಮ್ಮ ಜನಪದ ಸಂಸ್ಕೃತಿಯ ಅವಿಭಾಜ್ಯ ಕಲೆ. ಸವಿತಾ ಬೆಣಗಿ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನದಲ್ಲಿ ಕ್ಯಾನ್ವಾಸಿನೊಳಗೆ ಕೌದಿಯ ಚಿತ್ತಾರ ಚಿತ್ರಕಲಾ ಪ್ರದರ್ಶನ ಉದ್ಘಾಟಿಸಿದ್ದು ಖುಷಿ ತಂದಿದೆ. ಚಿತ್ರಕಲೆ ಕೇವಲ ಕಲೆಯಲ್ಲ. ಅದು ನಮ್ಮ ಅಂತರಂಗದ ಭಾವನೆಗಳನ್ನು ಚಿತ್ರದ ಮೂಲಕ, ರೇಖೆಗಳ ಮೂಲಕ ಅಭಿವ್ಯಕ್ತಿಗೊಳಿಸುವ ಮಾಧ್ಯಮವೂ ಹೌದು ಎಂದು ಹೇಳಿದರು.ಹಿರಿಯ ಚಿತ್ರಕಲಾವಿದ ಬಿ. ಮಾರುತಿ ಮಾತನಾಡಿದರು. ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸಿದ್ದರು. ಕಲಾವಿದೆ ಸವಿತಾ ಬೆಣಗಿ ಚಿತ್ರಕಲಾ ಬದುಕಿನ ಪಯಣದ ಬಗ್ಗೆ ಅನುಭವ ಹಂಚಿಕೊಂಡರು. ವೀರಣ್ಣ ಒಡ್ಡೀನ ಸ್ವಾಗತಿಸಿದರು. ಶಂಕರ ಹಲಗತ್ತಿ ಪ್ರಾಸ್ತಾವಿಕ ಮಾತನಾಡಿದದರು. ಆನಂದ ಬೆಣಗಿ ವಂದಿಸಿದರು.