ಹುಬ್ಬಳ್ಳಿ: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸಮುದಾಯ ಸೇರಿದಂತೆ ಎಲ್ಲರಿಗೂ ಸಮಾನ ಅವಕಾಶ ಸಿಗಬೇಕು. ಈ ಮೂಲಕ ಭಾರತ ವಿಕಸಿತ ಆಗಬೇಕು ಎಂಬುವುದು ಏಕೈಕ ಕಲ್ಪನೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ್ದು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ಪ್ರಧಾನಿ ಮೋದಿ ಅವರ ಆಶಯ ದೇಶ ಆರ್ಥಿಕವಾಗಿ ಬೆಳೆಯುವುದರ ಮೂಲಕ ದೇಶದಲ್ಲಿರುವ ಪ್ರತಿಯೊಬ್ಬರಿಗೂ ಸಾಮಾಜಿಕ ಸಮಾನತೆ ಸಿಗುವುದು ಹಾಗೂ ಬಡತನ ನಿರ್ಮೂಲನೆ ಮಾಡುವುದಾಗಿದೆ ಎಂದರು.
ಹಿಂದೆ ದೇಶವನ್ನು ಆಳಿದ ಕಾಂಗ್ರೆಸ್ ಯಾರಿಗೂ ಒಳ್ಳೆಯದು ಮಾಡಿಲ್ಲ. ದೇಶಕ್ಕೆ ಪವಿತ್ರವಾದ ಸಂವಿಧಾನ ನೀಡಿದ ಡಾ. ಬಿ.ಆರ್. ಅಂಬೇಡ್ಕರ್ ಅವರ ಸಮಾಧಿಗೆ ಜಾಗವನ್ನು ನೀಡಲಿಲ್ಲ. ಅವರು ಬದುಕಿದಾಗ ಚಿತ್ರಹಿಂಸೆ ನೀಡಿದರು. ಅತ್ಯಂತ ಅಗೌರವವಾಗಿ ನಡೆದುಕೊಂಡ ಪಕ್ಷ ಕಾಂಗ್ರೆಸ್ ಎಂದು ಹರಿಹಾಯ್ದರು.ಪ್ರಮುಖ ರಾಜ್ಯಗಳಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಅವಕಾಶ ನೀಡದಂತೆ ಮಾಡಿದ ದಲಿತ ದ್ರೋಹದ ಪಕ್ಷ ಕಾಂಗ್ರೆಸ್. ಡಾ. ಬಿ. ಆರ್. ಅಂಬೇಡ್ಕರ್ ವಿಧಾನಸಭೆ ಹಾಗೂ ಲೋಕಸಭೆ ಬರಬಾರದು ಎಂದು ತಡೆದಿದ್ದರು. ದಲಿತರಿಗೆ ಭೂಮಿ ಕೊಡುವುದಕ್ಕೆ ವಿರೋಧಿಸಿದ್ದರು ಎಂದು ಹೇಳಿದರು.
ಮುಂಬರು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 40 ಸ್ಥಾನಕ್ಕೆ ಇಳಿಯಲಿದೆ. ಐಎನ್‌ಡಿಐಎ ಒಕ್ಕೂಟ ಛಿದ್ರ ಛಿದ್ರವಾಗಿದೆ. ರಾಜ್ಯದ ಜನರು ಸಹ ಕಾಂಗ್ರೆಸ್‌ನವರನ್ನು ಮನೆಗೆ ಕಳುಹಿಸಬೇಕು. ದೇಶ ಅಭಿವೃದ್ಧಿಗೆ ಪ್ರಧಾನಿ ಮೋದಿ ಗೆಲ್ಲಿಸಬೇಕು ಎಂದರು.
ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಬಿಜೆಪಿ ಚಿಂತನೆಗಳು ಒಂದೇ ನಾಣ್ಯದ ಎರಡು ಮುಖಗಳಿದಂತೆ. ಅಂಬೇಡ್ಕರ್ ಅವರು ದೇಶದ ಒಗ್ಗಟ್ಟಿಗೆ ಶ್ರಮಿಸಿದ್ದಾರೆ. ಆದರೆ, ಕಾಂಗ್ರೆಸ್ ಈಗಲೂ ದೇಶದ ವಿಭಜನೆ ಬಗ್ಗೆ ಮಾತನಾಡುತ್ತದೆ. ಎಸ್.ಸಿ. ಎಸ್‌ಟಿಗಳಿಗೆ ಸೇರಬೇಕಾದ 11 ಸಾವಿರ ಕೋಟಿ ಗ್ಯಾರಂಟಿ ಬಳಸಿಕೊಂಡು ಮೋಸ ಮಾಡಿದೆ ಎಂದರು.