ಎಸ್ಸಿ-ಎಸ್ಟಿ ಮೀಸಲಾತಿ 9ನೇ ಅನುಸೂಚಿಗೆ ಸೇರಲಿ

KannadaprabhaNewsNetwork |  
Published : Jan 06, 2026, 01:45 AM IST
5ಕೆಡಿವಿಜಿ1-ದಾವಣಗೆರೆ ನಾಯಕ ಹಾಸ್ಟೆಲ್‌ನಲ್ಲಿ ಸೋಮವಾರ ಶ್ರೀ ವಾಲ್ಮೀಕಿ ಜಾತ್ರೆ ಪೂರ್ವಭಾವಿ ಸಭೆಯನ್ನು ಶ್ರೀ ಪ್ರಸನ್ನಾನಂದ ಪುರಿ ಸ್ವಾಮೀಜಿ ಸಸಿಗೆ ನೀರೆರೆಯುವ ಮೂಲಕ ಚಾಲನೆ ನೀಡಿದರು. ಮಾಜಿ ಶಾಸಕ ಎಸ್.ವಿ.ರಾಮಚಂದ್ರ, ಬಿ.ವೀರಣ್ಣ, ಶ್ರೀನಿವಾಸ ದಾಸಕರಿಯಪ್ಪ ಇತರರು ಇದ್ದರು. | Kannada Prabha

ಸಾರಾಂಶ

ರಾಜ್ಯ ಸರ್ಕಾರವು ಪರಿಶಿಷ್ಟ ಜಾತಿ- ಪಂಗಡಗಳಿಗೆ ನಿಗದಿಪಡಿಸಿದ ಮೀಸಲಾತಿಯನ್ನು ಸಂವಿಧಾನದ 9ನೇ ಅನುಸೂಚಿಗೆ ಸೇರಿಸುವ ಬಾಕಿ ಪ್ರಕ್ರಿಯೆ ಪೂರ್ಣಗೊಳ್ಳಬೇಕು. ಆಗ ಮಾತ್ರವೇ ಅದಕ್ಕೆ ಸಾಂವಿಧಾನಿಕ ರಕ್ಷಣೆ ಸಿಗುತ್ತದೆ ಎಂದು ರಾಜನಹಳ್ಳಿ ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದ ಪುರಿ ಸ್ವಾಮೀಜಿ ನುಡಿದಿದ್ದಾರೆ.

- ಫೆ.8ರಿಂದ 2 ದಿನ ಮಹರ್ಷಿ ವಾಲ್ಮೀಕಿ ಜಾತ್ರೆ: ಪ್ರಸನ್ನಾನಂದ ಪುರಿ ಶ್ರೀ ಮಾಹಿತಿ

- - - - ಬೇಡಿಕೆ ಈಡೇರಿಸಲು ಕೇಂದ್ರ ಸರ್ಕಾರ ಬಳಿ ಶೀಘ್ರವೇ ನಿಯೋಗ ಹೋಗಬೇಕು

- ರಾಜ್ಯದಲ್ಲಿ ನಾಯಕ ವಿದ್ಯಾರ್ಥಿನಿಯರ ಹಾಸ್ಟೆಲ್ ಸ್ಥಾಪಿಸಬೇಕಿದೆ: ಎಸ್‌ವಿಆರ್‌

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ರಾಜ್ಯ ಸರ್ಕಾರವು ಪರಿಶಿಷ್ಟ ಜಾತಿ- ಪಂಗಡಗಳಿಗೆ ನಿಗದಿಪಡಿಸಿದ ಮೀಸಲಾತಿಯನ್ನು ಸಂವಿಧಾನದ 9ನೇ ಅನುಸೂಚಿಗೆ ಸೇರಿಸುವ ಬಾಕಿ ಪ್ರಕ್ರಿಯೆ ಪೂರ್ಣಗೊಳ್ಳಬೇಕು. ಆಗ ಮಾತ್ರವೇ ಅದಕ್ಕೆ ಸಾಂವಿಧಾನಿಕ ರಕ್ಷಣೆ ಸಿಗುತ್ತದೆ ಎಂದು ರಾಜನಹಳ್ಳಿ ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದ ಪುರಿ ಸ್ವಾಮೀಜಿ ನುಡಿದರು.

ನಗರದ ನಾಯಕರ ವಿದ್ಯಾರ್ಥಿ ನಿಲಯದಲ್ಲಿ ಸೋಮವಾರ ವಾಲ್ಮೀಕಿ ಜಾತ್ರೆಯ ಜಿಲ್ಲಾಮಟ್ಟದ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಂವಿಧಾನದ 9ನೇ ಅನುಸೂಚಿಯಲ್ಲಿ ಸೇರಿಸುವಂತೆ ಕೇಂದ್ರದ ಬಳಿ ನಿಯೋಗ ಹೋಗುವ ಕೆಲಸವೂ ಬೇಗನೆ ಆಗಬೇಕಾಗಿದೆ ಎಂದರು.

ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗಿದ್ದಾಗ ಪರಿಶಿಷ್ಟ ಜಾತಿ-ಪಂಗಡಗಳ ಮೀಸಲಾತಿ ಹೆಚ್ಚಿಸಲಾಗಿತ್ತು. ಆದರೆ, ಅದನ್ನು ಸಂವಿಧಾನದ 9ನೇ ಅನುಸೂಚಿಗೆ ಸೇರಿಸುವ ಬಾಕಿ ಪ್ರಕ್ರಿಯೆ ಪೂರ್ಣಗೊಂಡರಷ್ಟೇ ಅದಕ್ಕೆ ಸಾಂವಿಧಾನಿಕ ರಕ್ಷಣೆ ಸಿಗುತ್ತದೆ. ಹಾಗಾದಾಗ ಮಾತ್ರ ಯಾರೂ ಪ್ರಶ್ನಿಸಲು ಆಗದು. ರಾಜನಹಳ್ಳಿ ಶ್ರೀಮಠದಲ್ಲಿ ನಡೆಯುವ ವಾಲ್ಮೀಕಿ ಜಾತ್ರೆ ವೇಳೆ ಈ ಬಗ್ಗೆ ಸರ್ಕಾರಕ್ಕೆ ಒತ್ತಾಯಿಸೋಣ ಎಂದು ಹೇಳಿದರು.

4ನೇ ಅತೀ ದೊಡ್ಡ ಸಮುದಾಯ:

ರಾಜ್ಯದ 4ನೇ ಅತೀ ದೊಡ್ಡ ಸಮುದಾಯವೆಂದರೆ ಅದು ವಾಲ್ಮೀಕಿ ಸಮುದಾಯ. ನಮ್ಮ ಸಮಾಜದಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ರಾಜನಹಳ್ಳಿಯಲ್ಲಿ ಪ್ರತಿವರ್ಷ ವಾಲ್ಮೀಕಿ ಜಾತ್ರೆ ನಡೆಸಲಾಗುತ್ತದೆ. ಫೆ.8 ಮತ್ತು 9ರಂದು ಶ್ರೀಮಠದಲ್ಲಿ ನಡೆಯುವ ಜಾತ್ರೆ ಹಿನ್ನೆಲೆ ಡಿ.8ರಿಂದ ಹಾವೇರಿಯಿಂದ ಪೂರ್ವಭಾವಿ ಸಭೆ ನಡೆಸುತ್ತಿದ್ದೇವೆ. ರಾಜ್ಯದ 28 ಜಿಲ್ಲೆಗಳಲ್ಲೂ ಸಮುದಾಯದ ಮುಖಂಡರು, ಸಮಾಜ ಬಾಂಧವರ ಸಭೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಮಾದರಿ ಹಾಸ್ಟೆಲ್ ನಿರ್ಮಿಸೋಣ:

ಸಮಾಜದ ಹಿರಿಯ ಮುಖಂಡ, ಜಗಳೂರು ಮಾಜಿ ಶಾಸಕ ಎಸ್.ವಿ.ರಾಮಚಂದ್ರ ಮಾತನಾಡಿ, ಸಮಾಜದ ಎಲ್ಲ ಸಚಿವರು, ಶಾಸಕರು, ಮಾಜಿ ಶಾಸಕರು, ಮಾಜಿ ಸಚಿವರ ಸಭೆ ಕರೆದು, ಮಹರ್ಷಿ ವಾಲ್ಮೀಕಿ ಜಾತ್ರೆಗೆ ಹೆಚ್ಚು ಜನರು ಸೇರುವಂತೆ ಮಾಡೋಣ. ಶ್ರೀ ಪ್ರಸನ್ನಾನಂದ ಸ್ವಾಮೀಜಿ ಹಾಗೂ ಸಮಾಜ ವಹಿಸುವ ಯಾವುದೇ ಜವಾಬ್ದಾರಿ ವಹಿಸಿದರೂ ನಿರ್ವಹಿಸುವೆ. ವಾಲ್ಮೀಕಿ ಸಮುದಾಯದ ವಿದ್ಯಾರ್ಥಿನಿಯರಿಗೆ ರಾಜ್ಯದಲ್ಲಿ ಹಾಸ್ಟೆಲ್‌ ಇಲ್ಲ. ದಾವಣಗೆರೆ ಶಾಬನೂರು ಬಳಿ ಮಹಿಳಾ ಹಾಸ್ಟೆಲ್‌ಗೆಂದೇ ವಿಶಾಲ ಜಾಗವಿದೆ. ಅತ್ಯುತ್ತಮ, ಮಾದರಿ ಹಾಸ್ಟೆಲ್ ನಿರ್ಮಿಸೋಣ ಎಂದರು.

₹5 ಕೋಟಿಗೆ ಸ್ವಾಮೀಜಿ ಒತ್ತಾಯಿಸಲಿ:

ಸಮಾಜದ ಜಿಲ್ಲಾಧ್ಯಕ್ಷ ಬಿ.ವೀರಣ್ಣ ಮಾತನಾಡಿ, ದಾವಣಗೆರೆಯಲ್ಲಿ ವಾಲ್ಮೀಕಿ ನಾಯಕ ಸಮಾಜದ ಬಾಲಕಿಯರ ಹಾಸ್ಟೆಲ್ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಬೇಕಾಗಿದೆ. ಹಾಸ್ಟೆಲ್ ನಿರ್ಮಾಣಕ್ಕೆ ₹5 ಕೋಟಿ ಅನುದಾನ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಸ್ವಾಮೀಜಿ ಒತ್ತಾಯಿಸಲಿ ಎಂದು ಹೇಳಿದರು.

ಚನ್ನಗಿರಿ ತಾಲೂಕು ಮುಖಂಡ ಲೋಹಿತಕುಮಾರ ಮಾತನಾಡಿ, ನಮ್ಮ ಸಮುದಾಯದ 14 ಶಾಸಕರಿದ್ದು, ಬಿ. ನಾಗೇಂದ್ರ ಹಾಗೂ ಕೆ.ಎನ್.ರಾಜಣ್ಣ ರಾಜೀನಾಮೆ ನೀಡಿದ ನಂತರ ನಮ್ಮ ಸಮುದಾಯದ ಒಬ್ಬರೇ ಒಬ್ಬ ಸಚಿವರಿದ್ದಾರೆ. ಇನ್ನೂ ಎರಡು ಸಚಿವ ಸ್ಥಾನ ನಾಯಕ ಸಮಾಜಕ್ಕೆ ನೀಡುವಂತೆ ಸ್ವಾಮೀಜಿ ಧ್ವನಿ ಎತ್ತಬೇಕು. ಶ್ರೀಮಠದಿಂದ ಶಾಲಾ-ಕಾಲೇಜುಗಳನ್ನು, ಉನ್ನತ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸುವ ಮೂಲಕ ಸಮಾಜದ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವತ್ತ ಗಮನ ಹರಿಸಬೇಕು ಎಂದು ತಿಳಿಸಿದರು.

ವಾಲ್ಮೀಕಿ ಸಮುದಾಯದ ಯುವ ಮುಖಂಡ, ಬಿಜೆಪಿ ಎಸ್‌ಟಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಶ್ರೀನಿವಾಸ ಟಿ. ದಾಸಕರಿಯಪ್ಪ ಮಾತನಾಡಿದರು. ಸಮಾಜದ ಮುಖಂಡರಾದ ಮಾಜಿ ಮೇಯರ್ ವಿನಾಯಕ ಪೈಲ್ವಾನ್, ಹೊದಿಗೆರೆ ರಮೇಶ, ಜಿಪಂ ಮಾಜಿ ಸದಸ್ಯ ಕೆ.ಪಿ.ಪಾಲಯ್ಯ, ಅಣ್ಣಾಪುರ ಹೇಮಣ್ಣ, ಹಿರಿಯ ವಕೀಲ ಎನ್.ಎಂ. ಆಂಜನೇಯ ಗುರೂಜಿ, ಇಂದಿರಾ ರಾಮಚಂದ್ರಪ್ಪ, ವಿಜಯಶ್ರೀ, ಕುಕ್ಕವಾಡ ಮಂಜುನಾಥ, ಹುಲ್ಮನಿ ಗಣೇಶ, ತಾಪಂ ಮಾಜಿ ಉಪಾಧ್ಯಕ್ಷ ಕೆ.ಎನ್.ಮಂಜುನಾಥ, ಹೊನ್ನಾಳಿ ನಾಗೇಂದ್ರಪ್ಪ, ಜಿಗಳಿ ಪ್ರಕಾಶ, ಫಣಿಯಾಪುರ ಲಿಂಗರಾಜ, ಬಿಸ್ತುವಳ್ಳಿ ಬಾಬು, ಶ್ಯಾಗಲೆ ಮಂಜುನಾಥ, ಕೆಟಿಜೆ ನಗರ ಆರ್.ಲಕ್ಷ್ಮಣ, ಪ್ರವೀಣ, ಆವರಗೆರೆ ಸುರೇಶ, ವಿಜಯಲಕ್ಷ್ಮೀ, ಕವಿತಾ ಚಿತ್ತಾನಹಳ್ಳಿ ಇತರರು ಇದ್ದರು.

- - -

-5ಕೆಡಿವಿಜಿ1: ವಾಲ್ಮೀಕಿ ಜಾತ್ರೆ ಪೂರ್ವಭಾವಿ ಸಭೆಯನ್ನು ಶ್ರೀ ಪ್ರಸನ್ನಾನಂದ ಪುರಿ ಸ್ವಾಮೀಜಿ ಸಸಿಗೆ ನೀರೆರೆಯುವ ಮೂಲಕ ಚಾಲನೆ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಬ್ಬಳ್ಳಿ ವಿವಸ್ತ್ರ ಕೇಸ್‌ನಲ್ಲಿ ತಲೆದಂಡಕ್ಕೆ ಬಿಜೆಪಿ ಗಡುವು
ಶೀಘ್ರ ‘ಬಾಕಿ ಲಕ್ಷ್ಮಿ’ ಬಿಡುಗಡೆ - ಬಿಪಿಎಲ್‌ ರದ್ದಾದವರಿಗೆ ಇಲ್ಲ ಗೃಹಲಕ್ಷ್ಮಿ ಹಣ