ಕನ್ನಡಪ್ರಭ ವಾರ್ತೆ ಸೋಮವಾರಪೇಟೆ
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಹಿತರಕ್ಷಣಾ ಸಮಿತಿ ತ್ರೈಮಾಸಿಕ ಸಭೆ ತಹಸೀಲ್ದಾರ್ ಕೃಷ್ಣಮೂರ್ತಿ ಅಧ್ಯಕ್ಷತೆಯಲ್ಲಿ ಅಂಬೇಡ್ಕರ್ ಭವನದಲ್ಲಿ ಗುರುವಾರ ನಡೆಯಿತು.ಸಭೆಯಲ್ಲಿ ಒಂದು ವರ್ಷದ ನಂತರ ಹಿತರಕ್ಷಣಾ ಸಮಿತಿ ಸಭೆ ಕರೆದ ಬಗ್ಗೆ ಸದಸ್ಯರು, ವಿವಿಧ ದಲಿತ ಮುಖಂಡರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.ಸರ್ಕಾರ ಸಮಯಕ್ಕೆ ಸರಿಯಾಗಿ ಸಭೆ ಕರೆದು, ನಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ಸಭೆ ನಡೆಸಲು ಸೂಚಿಸಿದೆ. ಆದರೆ ನಿಗದಿತ ಸಮಯದಲ್ಲಿ ಸಭೆ ನಡೆಸದೆ, ಕಾಟಾಚಾರದ ಸಭೆಗಳನ್ನು ನಡೆಸುವುದು ಬೇಡ. ಈಗಾಗಲೇ ಸಭೆಯನ್ನು ಮೂರು ಭಾರಿ ಮುಂದೂಡಿ ನಡೆಸಲಾಗುತ್ತಿದೆ ಎಂದು ದಲಿತ ಮುಖಂಡ ಎಚ್.ಎಂ. ಸೋಮಪ್ಪ ತಿಳಿಸಿದರು.
ಸಭೆಗೆ ಎಲ್ಲ ಅಧಿಕಾರಿಗಳು ಕಡ್ಡಾಯವಾಗಿ ಬರುವಂತೆ ನೋಟಿಸ್ ನೀಡಿ ಕರೆಸಬೇಕು. ಗೈರಾದ ಅಧಿಕಾರಿಗಳ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಸಭೆ ನಿರ್ಣಯಿಸಿತು.ಸಮಿತಿ ಸದಸ್ಯ ಬಿ.ಈ. ಜಯೇಂದ್ರ ಮಾತನಾಡಿ, ಸಭೆಗಳ ಉದ್ದೇಶ ಮತ್ತು ನಿರ್ಣಯಗಳನ್ನು ಜಾರಿಗೆ ತರಲು ಸಾಧ್ಯವಾಗದಿದ್ದಲ್ಲಿ ಮುಂದಿನ ದಿನಗಳಲ್ಲಿ ಸಭೆಗಳನ್ನು ನಡೆಸುವುದು ಬೇಡ. ಸಭೆಯಲ್ಲಿ ಚರ್ಚಿಸಿ ನಿರ್ಣಯ ಕೈಗೊಂಡ ವಿಷಯಗಳನ್ನು ಸಂಬಂಧಿಸಿದ ಅಧಿಕಾರಿಗಳು ಸೂಕ್ತ ಕ್ರಮ ತೆಗೆದುಕೊಳ್ಳುವ ಮೂಲಕ ಪರಿಹಾರ ಒದಗಿಸಬೇಕು ಎಂದು ಹೇಳಿದರು.ಕಾಗಡಿಕಟ್ಟೆ ಗ್ರಾಮದಲ್ಲಿ ಅರಣ್ಯ ಹಕ್ಕು ಕಾಯ್ದೆಯಡಿ ೧೧೭ ಕುಟುಂಬಗಳು ಮನೆ ನಿವೇಶನಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ ಅದು ಸಿಗಲಿಲ್ಲ. ಹೆಚ್ಚಿನ ಭೂಮಿಯನ್ನು ಉಳ್ಳವರು ಒತ್ತುವರಿ ಮಾಡಿಕೊಂಡಿದ್ದು, ಸ್ಮಶಾನಕ್ಕೂ ಜಾಗ ಇಲ್ಲದ ಪರಿಸ್ಥಿತಿ ಇದೆ. ಕಂದಾಯ ಇಲಾಖೆಯಿಂದ ೧-೫ ದಾಖಲಾತಿ ಸರಿಯಾಗಿ ಆಗುತ್ತಿಲ್ಲ ಎಂದು ತಿಳಿಸಿದರು.
ಕೆಲವು ಕಾನೂನಾತ್ಮಕ ಸಮಸ್ಯೆಗಳಿಂದ ೧-೫ ಅರ್ಜಿ ವಿಲೇವಾರಿ ಮಾಡಲು ಸಾಧ್ಯವಾಗಲಿಲ್ಲ. ಈಗ ಕಾನೂನನ್ನು ಸರಳೀಕರಣಗೊಳಿಸಿದ್ದು, ಮುಂದಿನ ದಿನಗಳಲ್ಲಿ ವ್ಯವಸ್ಥಿತವಾಗಿ ವಿಲೇವಾರಿ ನಡೆಯುವುದು ಎಂದು ತಹಸೀಲ್ದಾರ್ ಸಭೆಗೆ ತಿಳಿಸಿದರು.ಕೊಡ್ಲಿಪೇಟೆ ಹೋಬಳಿಯಲ್ಲಿ ಹಣಕ್ಕಾಗಿ ಇತರೆ ಜಾತಿಯವರಿಗೆ ಪರಿಶಿಷ್ಟ ಜಾತಿ ಪ್ರಮಾಣಪತ್ರಗಳನ್ನು ಅಧಿಕಾರಿಗಳು ನೀಡಿದ್ದು, ಹಲವಾರು ಜನರು ಸುಳ್ಳು ಜಾತಿ ಪ್ರಮಾಣ ಪತ್ರವನ್ನು ನೀಡಿ ಸರ್ಕಾರಿ ಕೆಲಸ ಮಾಡುತ್ತಿದ್ದಾರೆ. ಹಲವರು ಸರ್ಕಾರಿ ಯೋಜನೆಗಳನ್ನು ಪಡೆಯುವುದರೊಂದಿಗೆ, ನಿಜವಾದ ಪರಿಶಿಷ್ಟ ಜಾತಿಯವರ ಮೇಲೆ ದಬ್ಬಾಳಿಕೆ ಎಸಗುತ್ತಿದ್ದಾರೆ ಎಂದು ಕೊಡ್ಲಿಪೇಟೆಯ ದೇವರಾಜು ದೂರಿದರು. ಅಗತ್ಯ ಮಾಹಿತಿ ನೀಡಿದಲ್ಲಿ ಅಂಥವರ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಹಸೀಲ್ದಾರ್ ತಿಳಿಸಿದರು.ಸಭೆಯಲ್ಲಿ ತಾಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪರಿಮೇಶ ಕುಮಾರ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸತೀಶ್, ಸಮಾಜ ಕಲ್ಯಾಣ ಇಲಾಖೆಯ ಸಿದ್ದೇಗೌಡ ಇದ್ದರು. ದಲಿತ ಸಂಘಟನೆಯ ಪ್ರಮುಖರು, ತಾಲೂಕು ಮಟ್ಟದ ವಿವಿಧ ಇಲಾಖಾಧಿಕಾರಿಗಳು ಇದ್ದರು.