ಕಸದ ವಾಹನಗಳು ವಾರ್ಡ್‌ಗೆ ಬಾರದಿದ್ದರೆ, ಮೋರಿ ಕಟ್ಟಿಕೊಂಡಿದ್ದರೆ, ರಸ್ತೆ ಸ್ವಚ್ಛತೆಯಿಂದ ಕೂಡಿರದಿದ್ದರೆ, ಬೀದಿ ದೀಪಗಳು ಹಾಳಾಗಿದ್ದರೆ ಅಂತಹ ಸಮಸ್ಯೆಗಳನ್ನು ಕ್ಯೂ ಆರ್ ಕೋಡ್ ಮೂಲಕ ದಾಖಲಿಸಬಹುದು. ಈ ದೂರುಗಳು ಮೊದಲು ವಾರ್ಡ್ ಸೂಪರ್ ವೈಸರ್‌ಗೆ ಹೋಗುತ್ತದೆ.
ಕನ್ನಡಪ್ರಭ ವಾರ್ತೆ ಮಂಡ್ಯ
ನಿಮ್ಮ ವಾರ್ಡ್‌ಗಳಲ್ಲಿ ಒಳಚರಂಡಿ, ಕಸ ವಿಲೇವಾರಿ, ರಸ್ತೆ, ಮೋರಿ ಸ್ವಚ್ಛತೆಗೆ ಸಂಬಂಧಿಸಿದ ಸಮಸ್ಯೆಗಳಿದ್ದರೆ ನಗರಸಭೆ ಕಚೇರಿಗೆ ಹೋಗಿ ದೂರು ಕೊಡಬೇಕಿಲ್ಲ. ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದರೆ ಸಾಕು ನಿಮ್ಮ ದೂರು ದಾಖಲಾಗುತ್ತದೆ. ಐದು ದಿನಗಳೊಳಗೆ ನಿಮ್ಮ ಸಮಸ್ಯೆಗೆ ಪರಿಹಾರ ಸಿಗಲಿದೆ.
ಡಿಜಿಟಲೀಕರಣ ಬೆಳವಣಿಗೆ ಸಾಧಿಸಿದಂತೆ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕಾರ್ಯವನ್ನೂ ಸುಲಭಗೊಳಿಸುವತ್ತ ನಗರಸಭೆ ಹೆಜ್ಜೆ ಇರಿಸಿದೆ. ನಗರಸಭೆ ಆಡಳಿತಾಧಿಕಾರಿ ಮತ್ತು ಜಿಲ್ಲಾಧಿಕಾರಿಯೂ ಆದ ಡಾ.ಕುಮಾರ ಅವರ ಮಾರ್ಗದರ್ಶನದಲ್ಲಿ ಪೌರಾಯುಕ್ತೆ ಯು.ಪಿ.ಪಂಪಾಶ್ರೀ ಅವರು ಸಮಸ್ಯೆಗಳ ದೂರು ದಾಖಲಿಸುವ ಪ್ರಕ್ರಿಯೆಯನ್ನು ಸರಳಗೊಳಿಸಿರುವುದಲ್ಲದೆ, ಶೀಘ್ರಗತಿಯಲ್ಲಿ ಸಮಸ್ಯೆಗಳಿಗೆ ಪರಿಹಾರ ದೊರಕುವಂತೆಯೂ ಮಾಡಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ ಅವರು ನಗರಸಭೆ ಹೊರತಂದಿರುವ ಕ್ಯೂಆರ್‌ಕೋಡ್ ಬಿಡುಗಡೆಗೊಳಿಸಿದರು. ಈ ವಿಧಾನದಿಂದ ಸ್ವಚ್ಛತೆಯಲ್ಲಿ ಇನ್ನಷ್ಟು ಸುಧಾರಣೆ ಬರಲಿ ಎಂದು ಆಶಿಸಿದರು.
ಕಸದ ವಾಹನಗಳು ವಾರ್ಡ್‌ಗೆ ಬಾರದಿದ್ದರೆ, ಮೋರಿ ಕಟ್ಟಿಕೊಂಡಿದ್ದರೆ, ರಸ್ತೆ ಸ್ವಚ್ಛತೆಯಿಂದ ಕೂಡಿರದಿದ್ದರೆ, ಬೀದಿ ದೀಪಗಳು ಹಾಳಾಗಿದ್ದರೆ ಅಂತಹ ಸಮಸ್ಯೆಗಳನ್ನು ಕ್ಯೂ ಆರ್ ಕೋಡ್ ಮೂಲಕ ದಾಖಲಿಸಬಹುದು. ಈ ದೂರುಗಳು ಮೊದಲು ವಾರ್ಡ್ ಸೂಪರ್ ವೈಸರ್‌ಗೆ ಹೋಗುತ್ತದೆ. ಎರಡು ದಿನಗಳ ಬಳಿಕ ಹೆಲ್ತ್ ಇನ್ಸ್‌ಪೆಕ್ಟರ್, ಆ ನಂತರ ಪರಿಸರ ಅಭಿಯಂತರರು ಕೊನೆಗೆ ಪೌರಾಯುಕ್ತರಿಗೆ ರವಾನೆಯಾಗಲಿದೆ. ಅಧಿಕಾರಿಗಳ ಹಂತದಲ್ಲೇ ಸಮಸ್ಯೆ ಬಗೆಹರಿಯಬೇಕು. ಇಲ್ಲದಿದ್ದರೆ ಪೌರಾಯುಕ್ತರು ಈ ಅಧಿಕಾರಿಗಳಿಂದ ಮಾಹಿತಿ ಪಡೆದು ಐದು ದಿನಗಳಲ್ಲಿ ಪರಿಹಾರ ಸೂಚಿಸುವಂತೆ ವ್ಯವಸ್ಥೆ ಮಾಡಲಾಗಿದೆ.
ಇದರಿಂದ ಶೀಘ್ರವಾಗಿ ಜನರ ಸಮಸ್ಯೆಗಳಿಗೆ ಸ್ಪಂದಿಸುವುದಕ್ಕೆ, ಸ್ವಚ್ಛತೆ ಕಾಪಾಡುವುದಕ್ಕೆ ಹೆಚ್ಚಿನ ಅನುಕೂಲವಾಗಲಿದೆ. ಕಸದ ವಾಹನಗಳಿಗೆ ಜಿಪಿಎಸ್ ಅಳವಡಿಸಿರುವುದರಿಂದ ಯಾವ ವಾರ್ಡ್‌ನ ಯಾವ ಬೀದಿಗೆ ಕಸದ ವಾಹನ ಹೋಗಿಲ್ಲ ಎನ್ನುವುದನ್ನು ಸುಲಭವಾಗಿ ಕುಳಿತ ಸ್ಥಳದಲ್ಲೇ ಪತ್ತೆಹಚ್ಚಬಹುದು. ಕ್ಯೂಆರ್ ಕೋಡ್‌ನಲ್ಲಿ ಸ್ಕ್ಯಾನ್ ಮಾಡಿದ ತಕ್ಷಣವೇ ದೂರು ದಾಖಲಾಗುತ್ತದೆ. ಆ ದೂರಿಗೆ ಅಧಿಕಾರಿಗಳು ಎಷ್ಟರಮಟ್ಟಿಗೆ ಸ್ಪಂದಿಸುತ್ತಿದ್ದಾರೆ, ನಿರ್ಲಕ್ಷ್ಯ ಅಥವಾ ಬೇಜವಾಬ್ದಾರಿ ವಹಿಸಿದ್ದಾರೋ ಎಂಬುದು ಈ ಪ್ರಕ್ರಿಯೆಯಿಂದ ಅರವಿಗೆ ಬರಲಿದೆ.
ಈ ಸಮಸ್ಯೆಗಳನ್ನು ಪೌರಾಯುಕ್ತರವರೆಗೆ ಬರಲು ಬಿಡದೆ ದೂರುಗಳಲ್ಲಿ ಅಲ್ಲಲ್ಲೇ ವಿಲೇವಾರಿ ಮಾಡಿದರೆ ಅಧಿಕಾರಿಗಳು ನಗರ ಸ್ವಚ್ಛತೆಗೆ ಕೊಡುತ್ತಿರುವ ಕಾಳಜಿ ಅರಿವಿಗೆ ಬರಲಿದೆ. ದೂರುಗಳಿಗೆ ಶೀಘ್ರ ಸ್ಪಂದನೆ ದೊರಕಿದಲ್ಲಿ ನಗರಸಭೆ ಬಗೆಗಿನ ವಿಶ್ವಾಸ, ನಂಬಿಕೆಯೂ ಹೆಚ್ಚಾಗಲಿದೆ.
ಮೂಲ ಸೌಕರ್ಯಗಳಿಗೆ ಸಂಬಂಧಿಸಿದ ಸಮಸ್ಯೆಗಳ ಕುರಿತಂತೆ ದೂರುಗಳು ಹೆಚ್ಚಾಗಿ ಬರುವುದರಿಂದ ಅದಕ್ಕೆ ಕ್ಯೂಆರ್‌ಕೋಡ್ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ದೂರು ದಾಖಲು ವಿಧಾನವನ್ನು ಸರಳಗೊಳಿಸಿ ಕೆಲವೇ ದಿನಗಳಲ್ಲೇ ಪರಿಹಾರ ಸೂಚಿಸಲು ವ್ಯವಸ್ಥೆ ಮಾಡಿರುವುದರಿಂದ ನಗರದ ಸೌಂದರ್ಯ ಮತ್ತು ಸ್ವಚ್ಛತೆಯಲ್ಲಿ ಹೊಸ ಬದಲಾವಣೆಯನ್ನು ನಿರೀಕ್ಷಿಸಲಾಗಿದೆ.ಜನಸಾಮಾನ್ಯರಿಗೆ ಅನುಕೂಲವಾಗುವಂತೆ ಕ್ಯೂಆರ್‌ಕೋಡ್ ಸ್ಕ್ಯಾನ್ ಮಾಡಿ ದೂರು ದಾಖಲಿಸುವ ವಿಧಾನವನ್ನು ಪರಿಚಯಿಸಲಾಗುತ್ತಿದೆ. ಮೂಲ ಸೌಕರ್ಯಗಳಿಗೆ ಸಂಬಂಧಿಸಿದ ದೂರುಗಳಿಗೆ ಅಧಿಕಾರಿಗಳಿಂದ ಶೀಘ್ರ ಸ್ಪಂದನೆ ಸಿಗಲಿದೆ. ಯಾರೂ ಸಹ ದೂರುಗಳ ಬಗ್ಗೆ ಉದಾಸೀನತೆ ತೋರಲು ಸಾಧ್ಯವಿಲ್ಲ.
- ಡಾ.ಕುಮಾರ, ಆಡಳಿತಾಧಿಕಾರಿ, ನಗರಸಭೆ, ಮಂಡ್ಯಮೂಲ ಸೌಕರ್ಯಗಳಿಗೆ ಸಂಬಂಧಿಸಿದ ದೂರು ದಾಖಲಿಸುವ ವಿಧಾನವನ್ನು ಸರಳಗೊಳಿಸಲಾಗಿದೆ. ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿದರೆ ದೂರು ದಾಖಲಾಗುತ್ತದೆ. ಅದಕ್ಕೆ ಅಧಿಕಾರಿಗಳು ಪರಿಹಾರ ಸೂಚಿಸಿದ ಬಳಿಕ ನಿಮ್ಮ ಮೊಬೈಲ್‌ಗೆ ಸಮಸ್ಯೆ ಇತ್ಯರ್ಥಪಡಿಸಿದ ಸಂದೇಶ ಫೋಟೋ ಸಹಿತ ಬರಲಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.